ಬೆಂಗಳೂರು : ಕೊರೊನಾ ಹೊಡೆತಕ್ಕೆ ಸಿಲುಕಿ ನಲುಗಿರುವ ಪ್ರವಾಸಿ ವಾಹನ ಉದ್ಯಮದ ನೆರವಿಗೆ ಸರ್ಕಾರ ಬರಬೇಕು ಎಂದು ಕರ್ನಾಟಕ ರಾಜ್ಯ ಟ್ರಾವೆಲ್ ಆಪರೇಟರ್ ಸಂಘದ ಅಧ್ಯಕ್ಷ ಕೆ. ರಾಧಾಕೃಷ್ಣ ಹೊಳ್ಳ ಮನವಿ ಮಾಡಿದ್ದಾರೆ.
ರಾಜ್ಯ ಹಾಗೂ ಕೇಂದ್ರ ಸರ್ಕಾರ ನಮಗಾಗಿ ಯಾವುದೇ ಸೌಲಭ್ಯ ಕಲ್ಪಿಸಿಲ್ಲ. 5 ಸಾವಿರ ರೂ. ಮೊತ್ತವನ್ನು ಕೇವಲ ಕೆಲವರಿಗೆ ನೀಡಿದೆ. ಪ್ರವಾಸಿ ವಾಹನ ಉದ್ಯಮ ಅವಲಂಬಿಸಿರುವ ಸುಮಾರು 5 ಲಕ್ಷ ಕುಟುಂಬಗಳು ಈಗಲೂ ಆತಂಕದಲ್ಲಿವೆ. ಜನ ಪ್ರವಾಸಿ ತಾಣಗಳತ್ತ ಮುಖ ಮಾಡುತ್ತಿಲ್ಲ. ವಿದೇಶದಿಂದ ಪ್ರವಾಸಿಗಳು ಆಗಮಿಸುತ್ತಿಲ್ಲ, ಇಲ್ಲಿರುವ ಪ್ರವಾಸಿಗರು ಹಣ ಖರ್ಚು ಮಾಡಿ ಪ್ರವಾಸಕ್ಕೆ ತೆರಳುವ ಧೈರ್ಯ ತೋರಿಸುತ್ತಿಲ್ಲ.
ಕೊರೊನಾದಿಂದ ಸದ್ಯ 3 ಲಕ್ಷ ಟ್ಯಾಕ್ಸಿಗಳು, ಕ್ಯಾಬ್, ಟೂರಿಸ್ಟ್ ಬಸ್ಗಳು, ವಿಶೇಷ ಸೇವೆ ಸಲ್ಲಿಸುವ ವಾಹನ, ವಾಹನ ಚಾಲಕರು, ಮಾಲೀಕರು, ಗೈಡ್ಗಳು, ಟ್ರಾವೆಲ್ ಆಪರೇಟರ್, ಟೂರ್ ಪ್ಯಾಕರ್ಸ್ಗಳು ಸೇರಿ ಹಲವರು ನಿರುದ್ಯೋಗಿಗಳಾಗಿದ್ದಾರೆ. ಕೇಂದ್ರ, ರಾಜ್ಯ ಸರ್ಕಾರಗಳು ಅಸಂಘಟಿತ ವಲಯದ ಕಾರ್ಮಿಕರಿಗೆ ಯಾವುದೇ ವಿಧದ ಕೈಗೆಟುಕುವ ಆದಾಯ ಸಂಗ್ರಹ ಅವಕಾಶ ಕಲ್ಪಿಸುವ ಕಾರ್ಯ ಮಾಡಿಲ್ಲ.
ಕೇರಳ, ದಿಲ್ಲಿ ಮತ್ತಿತರ ರಾಜ್ಯಗಳಲ್ಲಿ ಚಾಲಕರು, ಏಕ ವಾಹನ ಮಾಲೀಕರು, ಟ್ರಾವೆಲ್ ಆಪರೇಟರ್, ಗೈಡ್ಗಳಿಗೆ ಸುಲಭ ಕಂತಿನ ಹಾಗೂ ಸುಗಮ ಸಾಲ ಸೌಲಭ್ಯ ಕಲ್ಪಿಸಿವೆ. ಆದರೆ, ರಾಜ್ಯ ಸರ್ಕಾರ ತೆರಿಗೆಗಳ ಕಡಿತಕ್ಕೆ ಕೇಳಿದ ಮನವಿ ಪುರಸ್ಕರಿಸಿಲ್ಲ. ಪೂರ್ಣ ಅಲ್ಲದಿದ್ದರೂ ಅರ್ಧದಷ್ಟಾದರೂ ಶುಲ್ಕ ಮನ್ನಾಗೆ ಮಾಡಿದ ಮನವಿಗೆ ಸ್ಪಂದನೆ ಸಿಕ್ಕಿಲ್ಲ ಎಂದು ಅಸಮಾನಧಾನ ವ್ಯಕ್ತಪಡಿಸಿದ್ದಾರೆ.