ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇದೇ ಜೂನ್. 21 ರಂದು ನಿಗದಿಯಾಗಿರುವ ಸಹಾಯಕ ಪಬ್ಲಿಕ್ ಪ್ಯಾಸಿಕ್ಯೂಟರ್ (ಎಪಿಪಿ) ಪರೀಕ್ಷೆಯನ್ನು ಮುಂದೂಡಬೇಕೆಂದು ವಕೀಲರು ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ ಖಾಲಿಯಿರುವ 180 ಎಪಿಪಿಗಳ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ರಾಜ್ಯ ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆ ಜೂನ್ 21 ರಂದು ಪ್ರಾಥಮಿಕ ಪರೀಕ್ಷೆ ನಡೆಸಲಿದೆ.
ಬೆಂಗಳೂರು, ಬೆಳಗಾವಿ, ಮೈಸೂರು ಮತ್ತು ಕಲಬುರಗಿ ಜಿಲ್ಲಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಎಂಟು ಸಾವಿರಕ್ಕೂ ಅಧಿಕ ಅಭ್ಯರ್ಥಿಗಳು ಪರೀಕ್ಷೆಗೆ ಸಿದ್ಧತೆ ನಡೆಸಿದ್ದಾರೆ. ಆದರೆ, ಪರೀಕ್ಷೆ ನಡೆಯಲಿರುವ ಬೆಂಗಳೂರು, ಬೆಳಗಾವಿ ಮತ್ತು ಕಬುರಗಿಯಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗಿವೆ. ಹೀಗಾಗಿ ಸಾರ್ವಜನಿಕರ ಹಿತದೃಷ್ಟಿಯಿಂದ ಜೂನ್ 21 ರಂದು ಪರೀಕ್ಷೆ ನಡೆಸದೇ ಮುಂದೂಡಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ), ರಾಜ್ಯ ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆ ನಿರ್ದೇಶಕರಿಗೆ ಬೆಂಗಳೂರು ವಕೀಲರ ಸಂಘ, ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಅವರಿಗೆ ರಾಜ್ಯ ವಕೀಲರ ಪರಿಷತ್ ಸದಸ್ಯ ಎಸ್. ಬಸವರಾಜ್ ಪತ್ರ ಬರೆದಿದ್ದಾರೆ.
ಅಭ್ಯರ್ಥಿಗಳ ಒತ್ತಾಯವೇನು? ರಾಜ್ಯದಲ್ಲಿ ಈವರೆಗೆ 5 ಸಾವಿರಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಇವುಗಳಲ್ಲಿ ಪರೀಕ್ಷೆ ನಡೆಯುವ ಜಿಲ್ಲೆಯಾದ ಕಲಬುರಗಿ, ಬೆಂಗಳೂರು ನಗರ ಮತ್ತು ಬೆಳಗಾವಿಯಲ್ಲಿ ಹೆಚ್ಚಿನ ಪ್ರಕರಣಗಳು ಕಂಡುಬಂದಿವೆ. ಗ್ರಾಮೀಣ ಭಾಗಗಳಿಂದ ಪರೀಕ್ಷಾರ್ಥಿಗಳು ಬರುವುದಕ್ಕೆ ಸೂಕ್ತ ಸಾರಿಗೆ ವ್ಯವಸ್ಥೆ ಇಲ್ಲ. ಸರ್ಕಾರಿ ಬಸ್‌ಗಳಲ್ಲಿ ಪ್ರಯಾಣಿಸಲು ಆತಂಕವಿದೆ. ಅಭ್ಯರ್ಥಿಗಳು ಹೋಟೆಲ್ ಹಾಗೂ ಲಾಡ್ಜ್‌ಗಳಲ್ಲಿ ಉಳಿದುಕೊಳ್ಳಬೇಕಿದ್ದು, ಅಲ್ಲಿಂದ ಕೊರೊನಾ ಹರಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಹೀಗಾಗಿ, ಪರೀಕ್ಷೆ ಮುಂದೂಡಬೇಕು ಎಂದು ಅಭ್ಯರ್ಥಿಗಳು ಒತ್ತಾಯಿಸಿದ್ದಾರೆ.