ಬೆಂಗಳೂರು : ಪ್ರತಿ ವರ್ಷ ಖಾಸಗಿ ಸಂಸ್ಥೆಗಳು ಕಾಲೇಜುಗಳಿಗೆ ಭೇಟಿ ನೀಡಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಅವರು ಓದು ಮುಗಿಸುವ ಮುನ್ನವೇ ಕ್ಯಾಂಪಸ್ ಇಂಟರ್ವ್ಯೂ ಮೂಲಕ ಆಯ್ಕೆ ಮಾಡಿಕೊಳ್ಳುತ್ತಿದ್ದವು. ಆದರೆ ಈ ಬಾರಿ ಕ್ಯಾಂಪಸ್ ಇಂಟರ್ವ್ಯೂ ಮೇಲೂ ಕೊರೊನಾ ವೈರಸ್ ಕರಿನೆರಳು ಆವರಿಸಿದ್ದು, ಕಂಪನಿಗಳು ಕ್ಯಾಂಪಸ್ ಇಂಟರ್ವ್ಯೂ ಅನ್ನು ಆನ್ಲೈನ್ ಮೂಲಕವೇ ನಡೆಸುತ್ತಿವೆ.
ಖಾಸಗಿ ಸಂಸ್ಥೆಗಳು ತಮಗೆ ಬೇಕಾದಂತಹ ಯುವ ಪ್ರತಿಭಾನ್ವಿತರನ್ನು ಕಾಲೇಜುಗಳಿಗೆ ತೆರಳಿ ಕ್ಯಾಂಪಸ್ ಇಂಟರ್ವ್ಯೂ ಮೂಲಕ ಆಯ್ಕೆ ಮಾಡಿಕೊಳ್ಳುತ್ತಿದ್ದವು. ಲಿಖಿತ ಪರೀಕ್ಷೆ, ಗುಂಪು ಸಂವಹನ, ಪ್ಯಾನೆಲ್ ಇಂಟರ್ವ್ಯೂ, ಟೆಕ್ನಿಕಲ್ ಇಂಟರ್ವ್ಯೂ, ಹೆಚ್.ಆರ್ ಇಂಟರ್ವ್ಯೂ ಸೇರಿದಂತೆ ಎಲ್ಲ ಪರೀಕ್ಷೆಗಳನ್ನು ಕಾಲೇಜಿನಲ್ಲೇ ನಡೆಸಿ, ಆಫರ್ ಲೆಟರ್ ಕೂಡ ಕೊಟ್ಟು ಇಂತಹ ದಿನ ಬಂದು ಕೆಲಸಕ್ಕೆ ಸೇರಿಕೊಳ್ಳಿ ಎಂದು ತಿಳಿಸಿ ಹೋಗುತ್ತಿದ್ದವು. ಆದರೆ ಕೊರೊನಾ ಭೀತಿಯಿಂದಾಗಿ ಈ ವರ್ಷ ಕಂಪನಿಗಳು ಕಾಲೇಜುಗಳ ಸುತ್ತಮುತ್ತ ಸುಳಿಯುತ್ತಿಲ್ಲ. ಬದಲಿಗೆ ಆನ್ಲೈನ್ ಮೂಲಕವೇ ಪ್ರತಿಭಾನ್ವಿತರನ್ನು ಹುಡುಕುತ್ತಿವೆ.
ಸಾಮಾನ್ಯವಾಗಿ ಪ್ರತಿ ವರ್ಷ ನವೆಂಬರ್ ತಿಂಗಳಿಂದ ಮಾರ್ಚ್ವರೆಗಿನ ಅವಧಿಯಲ್ಲಿ ಕ್ಯಾಂಪಸ್ ಇಂಟರ್ವ್ಯೂ ನಡೆಯುತ್ತದೆ. ಅದರಂತೆ ಕಳೆದ 2019ರ ಅಂತ್ಯದಲ್ಲೂ ಹಲವು ಕಾಲೇಜುಗಳಲ್ಲಿ ಕ್ಯಾಂಪಸ್ ಇಂಟರ್ವ್ಯೂ ನಡೆದಿದೆ. ಆದರೆ ತಡವಾಗಿ ಕ್ಯಾಂಪಸ್ ಇಂಟರ್ವ್ಯೂ ನಡೆಸುವ ಕಂಪನಿಗಳಿಗೆ ಈ ಬಾರಿ ಕ್ಯಾಂಪಸ್ ಇಂಟರ್ವ್ಯೂ ನಡೆಸಲು ಸಾಧ್ಯವಾಗಿಲ್ಲ. ಹೀಗಾಗಿ ಎಲ್ಲ ಲಿಖಿತ ಪರೀಕ್ಷೆ ಮತ್ತು ಮೌಖಿಕ ಪರೀಕ್ಷೆಗಳನ್ನು ಆನ್ಲೈನ್ಮೂಲಕವೇ ನಡೆಸುತ್ತಿವೆ. ಆನ್ಲೈನ್ ಮೂಲಕವೇ ಪರೀಕ್ಷೆ ನಡೆಸಿ ಆಫರ್ ಲೆಟರ್ ನೀಡುತ್ತಿವೆ.
ಈ ಕುರಿತು ಮಾಹಿತಿ ಹಂಚಿಕೊಂಡಿರುವ ಬೆಂಗಳೂರಿನ ನಿಟ್ಟೆ ಮೀನಾಕ್ಷಿ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲರಾದ ಡಾ. ಹೆಚ್.ಸಿ ನಾಗರಾಜು, ಪ್ರತಿವರ್ಷದಂತೆ ನಮ್ಮ ಕಾಲೇಜಿನಲ್ಲಿ ಕಳೆದ ನವೆಂಬರ್ ಡಿಸೆಂಬರ್ ತಿಂಗಳಲ್ಲೇ ಕ್ಯಾಂಪಸ್ ಇಂಟರ್ವ್ಯೂ ನಡೆದಿದೆ. ಐಟಿ ವಿದ್ಯಾರ್ಥಿಗಳಲ್ಲಿ ಶೇ. 95ರಷ್ಟು ಮಂದಿ ಮತ್ತು ನಾನ್ ಐಟಿ ವಿದ್ಯಾರ್ಥಿಗಳಲ್ಲಿ ಶೇ. 70ರಷ್ಟು ಮಂದಿ ಆಯ್ಕೆಯಾಗಿದ್ದಾರೆ. ಪ್ರತಿ ವರ್ಷದಂತೆ ಕಾಲೇಜು ನಡೆದಿದ್ದರೆ ಜುಲೈ ವೇಳೆಗೆ ಕೆಲಸಕ್ಕೆ ಹೋಗಬೇಕಿತ್ತು. ಆದರೆ ಕೊರೊನಾ ಸೋಂಕಿನಿಂದಾಗಿ 8ನೇ ಸೆಮಿಸ್ಟರ್ ಮುಗಿಸುವುದೇ ಸವಾಲಾಗಿದೆ. ಹಾಗಿದ್ದೂ ಆನ್ಲೈನ್ ಮೂಲಕವೇ ವಿದ್ಯಾರ್ಥಿಗಳ ಪ್ರಾಜೆಕ್ಟ್ ಸಿದ್ದಪಡಿಸಲು, ತಾಂತ್ರಿಕ ನೈಪುಣ್ಯೆತೆಗೆ ಸಂಬಂಧಿಸಿದಂತೆ ತರಗತಿಗಳನ್ನು ನಡೆಸುತ್ತಿದ್ದೇವೆ. ಹೀಗಾಗಿ ಕ್ಯಾಂಪಸ್ ಇಂಟರ್ವ್ಯೂನಲ್ಲಿ ಆಯ್ಕೆಯಾದ ನಮ್ಮ ವಿದ್ಯಾರ್ಥಿಗಳು ಕೆಲಸಕ್ಕೆ ಹೋಗಲಿಕ್ಕೂ ತಡವಾಗುತ್ತಿದೆ ಎಂದಿದ್ದಾರೆ.
ಇನ್ನು ನಗರದ ಬಿಎಂಎಸ್ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಬಿ.ವಿ ರವಿಶಂಕರ್ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಕಾಲೇಜು ನಡೆಸಲು ಕೋವಿಡ್-19 ಅಡ್ಡಿಯಾಗಿದ್ದು ಆನ್ಲೈನ್ ಮೂಲಕವೇ ವಿದ್ಯಾರ್ಥಿಗಳನ್ನು ತರಬೇತುಗೊಳಿಸುತ್ತಿದ್ದೇವೆ ಎನ್ನುತ್ತಾರೆ. ಇದೇ ಕಾಲೇಜಿನ ಪ್ರಾಧ್ಯಾಪಕಿ ಡಾ. ಎಸ್.ಪ್ರದೀಪ ಅವರು ವಿವರಿಸಿ, ಈ ಬಾರಿ ಕಾಲೇಜು ಕ್ಯಾಂಪಸ್ ಇಂಟರ್ವ್ಯೂಗೆ ಕೊರೊನಾ ಅಡ್ಡಿಯಾಗಿದ್ದು ಆಯ್ಕೆ ಪರೀಕ್ಷೆಗಳೆಲ್ಲವನ್ನೂ ಆನ್ಲೈನ್ ಮೂಲಕವೇ ನಡೆಸಲಾಗುತ್ತಿದೆ. ಆನ್ಲೈನ್ ಮೂಲಕವೇ ಕೆಲಸಕ್ಕೆ ಆಯ್ಕೆ ಮಾಡಿಕೊಳ್ಳುವುದು ಕಂಪನಿಗಳಿಗೂ ಅನಿವಾರ್ಯವಾಗಿದೆ ಎನ್ನುತ್ತಾರೆ.