ಬೆಂಗಳೂರು: ಕೊರೊನಾ ಸೋಂಕಿನಿಂದ ದುಡಿಯುವ ವ್ಯಕ್ತಿಯನ್ನು ಕಳೆದುಕೊಳ್ಳುವ ಬಿಪಿಎಲ್ ಕುಟುಂಬಕ್ಕೆ ಒಂದು ಲಕ್ಷ ರೂ.ಗಳ ಪರಿಹಾರ ನೀಡುವುದಾಗಿ ಸರ್ಕಾರ ಪ್ರಕಟಿಸಿದ್ದು, ಮೃತಪಟ್ಟ ಕುಟುಂಬಗಳ ಪತ್ತೆ ಹಚ್ಚುವ ಕಾರ್ಯವೇ ಸರಿಯಾಗಿ ನಡೆದಿಲ್ಲ. ಹಾಗಾಗಿ ಮಾಹಿತಿ ನೀಡುವಂತೆ ಜನಪ್ರತಿನಿಧಿಗಳು ಜನತೆಗೆ ಕರೆ ನೀಡಬೇಕಾದ ಸನ್ನಿವೇಶ ನಿರ್ಮಾಣವಾಗಿದೆ.
ರಾಜ್ಯದಲ್ಲಿ ಕೊರೊನಾ ಸೋಂಕಿನ ಮೊದಲ ಅಲೆ ಮತ್ತು ಎರಡನೇ ಅಲೆಯಲ್ಲಿ ದುಡಿಯುವ ವ್ಯಕ್ತಿಯನ್ನು ಕಳೆದುಕೊಂಡಿರುವ ಕುಟುಂಬಕ್ಕೆ ಸರ್ಕಾರ ನೆರವು ಘೋಷಿಸಿತ್ತು. ಆದರೆ ಒಂದು ಲಕ್ಷ ರೂ.ಗಳ ಪರಿಹಾರ ಪಡೆದುಕೊಳ್ಳಲು ಆ ಕುಟುಂಬಗಳಿಗೆ ಇನ್ನೂ ಸಾಧ್ಯವಾಗುತ್ತಿಲ್ಲ. ಆರೋಗ್ಯ ಇಲಾಖೆ ಸರಿಯಾದ ಮಾಹಿತಿಯನ್ನು ಸರ್ಕಾರಕ್ಕೆ ನೀಡಿಲ್ಲ. ಅಲ್ಲದೆ ಜನರಿಗೂ ಯಾವ ರೀತಿ ಪರಿಹಾರ ಪಡೆದುಕೊಳ್ಳಬೇಕು ಎನ್ನುವ ಮಾಹಿತಿ ಸಿಕ್ಕಿಲ್ಲ. ಹೀಗಾಗಿ ಸರ್ಕಾರದ ಪರಿಹಾರ ಘೋಷಣೆ ಕೇವಲ ಕಾಗದದ ಮೇಲೆಯೇ ಉಳಿದುಕೊಂಡಿದೆ.
ರಾಜ್ಯದಲ್ಲಿ ಅಂದಾಜು ಬಿಪಿಎಲ್ ಕುಟುಂಬಕ್ಕೆ ಸೇರಿದ ದುಡಿಯುವ 3000 ಜನರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ ಎನ್ನುವ ಮಾಹಿತಿ ಇದೆ. ಆದರೆ ಈ ಕುಟುಂಬಗಳನ್ನು ಸಂಪರ್ಕ ಮಾಡಲು ಆರೋಗ್ಯ ಇಲಾಖೆ ಪ್ರಯತ್ನ ಪಡುತ್ತಲೇ ಇದೆ. ಇನ್ನೊಂದೆಡೆ ಕುಟುಂಬ ಸದಸ್ಯರು ಕೂಡ ಸರ್ಕಾರವನ್ನು ಸಂಪರ್ಕ ಮಾಡಿಲ್ಲ. ಹಾಗಾಗಿ ಈ ಪರಿಹಾರದ ಹಣ ಬಿಪಿಎಲ್ ಕುಟುಂಬಗಳಿಗೆ ಇನ್ನು ತಲುಪಿಲ್ಲ.
ಕೊರೊನಾ ಸೋಂಕಿನಿಂದ ದುಡಿಯುವ ವ್ಯಕ್ತಿಗಳು ಮೃತಪಟ್ಟು ಹಲವಾರು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಕೆಲ ಕುಟುಂಬಗಳು ಬೀದಿಪಾಲಾಗುತ್ತಿವೆ. ಇದನ್ನು ಮನಗಂಡು ಬಿಪಿಎಲ್ ಕುಟುಂಬದಲ್ಲಿ ಕೊರೊನಾದಿಂದ ವಯಸ್ಕರು ಅಥವಾ ದುಡಿಯುವ ವ್ಯಕ್ತಿ ಮೃತಪಟ್ಟರೆ ಅಂತಹ ಕುಟುಂಬಕ್ಕೆ ಕುಟುಂಬದಲ್ಲಿ ಒಬ್ಬರಿಗೆ ಸೀಮಿತವಾಗಿ ಒಂದು ಲಕ್ಷ ರೂ. ಪರಿಹಾರ ನೀಡುವ ತೀರ್ಮಾನ ಮಾಡಲಾಗಿತ್ತು. ಇದಕ್ಕಾಗಿ 250-300 ಕೋಟಿ ವೆಚ್ಚ ಮಾಡುತ್ತಿದೆ. ಆದರೆ ಈ ಹಣವನ್ನು ಪಡೆದುಕೊಳ್ಳಲು ಕುಟುಂಬ ಸದಸ್ಯರೇ ಬರುತ್ತಿಲ್ಲವಂತೆ.
ಬಿಪಿಎಲ್ ಕುಟುಂಬಕ್ಕೆ ಪರಿಹಾರ ಸಿಗದ ವಿಷಯ ಅರಿತ ಆರ್.ಆರ್.ನಗರ ಶಾಸಕ ಮುನಿರತ್ನ ಕ್ಷೇತ್ರದ ಜನರಿಗೆ ಪರಿಹಾರ ಕೊಡಿಸಲು ಮುಂದಾಗಿದ್ದಾರೆ. ಕ್ಷೇತ್ರದಲ್ಲಿ ಯಾವುದೇ ಬಿಪಿಎಲ್ ಕುಟುಂಬ ದುಡಿಯುವ ವ್ಯಕ್ತಿಯನ್ನು ಕೊರೊನಾದಿಂದ ಕಳೆದುಕೊಂಡಿದ್ದಲ್ಲಿ ಆ ಕುಟುಂಬದ ಸದಸ್ಯರು ನನಗೊಂದು ಫೋನ್ ಕಾಲ್ ಮಾಡಿ. ನಿಮ್ಮ ಮನೆಗೆ ನಾನೇ ಬಂದು ಪರಿಹಾರ ಕೊಡಿಸುತ್ತೇನೆ. ಅಥವಾ ಬೇರೆ ಯಾರಾದರೂ ಮಾಹಿತಿ ನೀಡಿದರೆ ಅದನ್ನು ಪರಿಶೀಲಿಸಿ ಅವರ ಮನೆಗೆ ಹೋಗಿ ಪರಿಹಾರ ಕೊಡಿಸುತ್ತೇನೆ. ಅಧಿಕಾರಿಗಳಿಗೆ ಕೇಳಿ ಕೆಲಸ ಆಗಿಲ್ಲ ಎಂದು ಕೂರಬೇಡಿ ನನ್ನನ್ನು ಸಂಪರ್ಕಿಸಿ ಎಂದು ಮನವಿ ಮಾಡಿದ್ದಾರೆ.
ಸರ್ಕಾರದ ಪರಿಹಾರ ಕೊಡಿಸಲು ಈಗ ಜನಪ್ರತಿನಿಧಿಗಳೇ ಮುಂದಾಗಬೇಕಾಗಿದೆ. ಸಂಕಷ್ಟದಲ್ಲಿರುವ ಜನರ ಕಷ್ಟಕ್ಕೆ ಸ್ಪಂದಿಸಬೇಕಾದ ಸರ್ಕಾರ ಕುಟುಂಬದ ವಿವರ ಇಲ್ಲ ಎನ್ನುವ ಕಾರಣಕ್ಕೆ ಪರಿಹಾರ ನೀಡುವುದರಿಂದ ನುಣುಚಿಕೊಳ್ಳುತ್ತಿದೆ. ಆದರೆ ಶಾಸಕರು ತಮ್ಮನ್ನು ಆರಿಸಿ ಕಳಿಸಿದ ಜನರಿಗೆ ಹಣ ತಲುಪಿಸಿ ಋಣ ತೀರಿಸುವ ಕೆಲಸ ಮಾಡಿದರೆ ಕಷ್ಟದಲ್ಲಿರುವ ಜನರ ಕಣ್ಣೀರು ಸ್ವಲ್ಪ ಮಟ್ಟಿಗಾದರೂ ಕಡಿಮೆ ಆಗಲಿದೆ.