ಬೆಂಗಳೂರು: ಕಲಬುರಗಿಯಲ್ಲಿ ಮೃತಪಟ್ಟಿ ವ್ಯಕ್ತಿ ಸೇರಿದಂತೆ 33 ವರದಿಗಳು ಮಾತ್ರ ಕೊರೊನಾ ಪಾಸಿಟಿವ್ ಬಂದಿದ್ದು, ಅದರಲ್ಲಿ ಇಬ್ಬರು ಗುಣಮುಖರಾಗಿದ್ದಾರೆ. ಮೃತ ವ್ಯಕ್ತಿ ಹೊರತುಪಡಿಸಿ ಉಳಿದ 30 ಸೋಂಕಿತರಿಗೆ ಚಿಕಿತ್ಸೆ ಮುಂದುವರೆಸಲಾಗಿದೆ. ಅವರ ಆರೋಗ್ಯ ಸ್ಥಿರವಾಗಿದೆ ಎಂದು ಆರೋಗ್ಯ ಇಲಾಖೆ ಕೊರೊನಾ ಬುಲೆಟಿನ್ ಬಿಡುಗಡೆ ಮಾಡಿದೆ.
ಕೊರೊನಾ ಶಂಕೆ ಹಿನ್ನೆಲೆಯಲ್ಲಿ ಇಂದು ಹೊಸದಾಗಿ 441 ಜನರನ್ನು ಅವಲೋಕನೆಗಾಗಿ ಪಟ್ಟಿ ಮಾಡಿದ್ದು, ಈವರೆಗೆ ಅವಲೋಕನೆಗೆ ಒಳಪಟ್ಟವರ ಸಂಖ್ಯೆ 12029 ತಲುಪಿದೆ. ಆಸ್ಪತ್ರೆಗಳಲ್ಲಿ ಐಸೋಲೇಷನ್ನಲ್ಲಿ ಇಂದು 51 ಜನರನ್ನು ಇರಿಸಿದ್ದು, ಇಲ್ಲಿಯವರೆಗೆ 173 ಜನರನ್ನು ಐಸೋಲೇಷನ್ನಲ್ಲಿ ಇರಿಸಿದಂತಾಗಿದೆ. ಇಂದು 96 ಜನರ ಮಾದರಿ ಸಂಗ್ರಹ ಮಾಡಿದ್ದು, ಈವರೆಗೆ 1477 ಮಾದರಿ ಸಂಗ್ರಹ ಮಾಡಿದಂತಾಗಿದೆ. ಇಂದು 45 ವರದಿಗಳು ಕೊರೊನಾ ನೆಗೆಟಿವ್ ಬಂದಿದ್ದು, ಈವರೆಗೆ 1153 ವರದಿ ನೆಗೆಟಿವ್ ಬಂದಿದೆ.
ಯಾವ ಜಿಲ್ಲೆಯಲ್ಲಿ ಎಷ್ಟು ಸೋಂಕಿತರು?: ಬೆಂಗಳೂರು 23, ಕಲಬುರಗಿ 3, ಕೊಡಗು 1, ಚಿಕ್ಕಬಳ್ಳಾಪುರ 2, ಮೈಸೂರು 2, ಧಾರವಾಡ 1, ದಕ್ಷಿಣ ಕನ್ನಡ 1
ಯಾವ ಆಸ್ಪತ್ರೆಯಲ್ಲಿ ಎಷ್ಟು ಕೊರೊನಾ ಶಂಕಿತರು?: ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ 8, ಬೆಂಗಳೂರಿನ ಇತರೆ ಆಸ್ಪತ್ರೆಗಳಲ್ಲಿ 35, ದಕ್ಷಿಣ ಕನ್ನಡದಲ್ಲಿ 33, ಬಳ್ಳಾರಿ 2, ಕಲಬುರಗಿ 13, ಕೊಡಗು 7, ಚಿಕ್ಕಮಗಳೂರು 1, ಕಲಬುರಗಿ 12, ಕೊಡಗು 4, ಉಡುಪಿಯಲ್ಲಿ 18, ಬೀದರ್ 5, ಗದಗ 4, ಉತ್ತರ ಕನ್ನಡ 10, ಧಾರವಾಡ 4, ಹಾಸನ 2, ಚಾಮರಾಜನಗರ 3, ಚಿತ್ರದುರ್ಗ 2, ದಾವಣಗೆರೆ 9, ಕೋಲಾರ 2, ಮೈಸೂರು 1, ರಾಯಚೂರು 5, ಶಿವಮೊಗ್ಗ 4, ಮಂಡ್ಯ 2, ತುಮಕೂರು 3, ಬಾಗಲಕೋಟೆ 2 ಒಟ್ಟು 173 ಜನರನ್ನ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇಂದು 23 ಜನರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದ್ದು, ಹಾಗೆಯೇ 51 ಜನರನ್ನು ಹೊಸದಾಗಿ ದಾಖಲಿಸಿಕೊಳ್ಳಲಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಈವರೆಗೆ ಬೆಂಗಳೂರು, ಮಂಗಳೂರು ವಿಮಾನ ನಿಲ್ದಾಣ, ಬಂದರುಗಳಲ್ಲಿ ಒಟ್ಟು 1,27,902 ಜನರನ್ನು ಸ್ಕ್ರೀನಿಂಗ್ ಮಾಡಲಾಗಿದ್ದು, ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಹಾಗಾಗಿ ಯಾವುದೇ ಆತಂಕಕ್ಕೆ ಒಳಗಾಗದೇ ಮುನ್ನೆಚ್ಚರಿಕೆ ವಹಿಸಿ ಎಂದು ಆರೋಗ್ಯ ಇಲಾಖೆ ಜನರಲ್ಲಿ ಮನವಿ ಮಾಡಿದೆ.