ಬೆಂಗಳೂರು: ರಾಜ್ಯದಲ್ಲಿ ಎಟಿಎಸ್ ಭರ್ಜರಿ ಬೇಟೆಯಾಗಿದೆ. ರಾಷ್ಟ್ರೀಯ ಭದ್ರತೆಗೆ ತೊಡಕು ಹಾಗೂ ಅನಧಿಕೃತವಾಗಿ ಟೆಲಿಪೋನ್ ಎಕ್ಸ್ಚೇಂಜ್ ಮಾಡಿ ಭಾರತೀಯ ದೂರ ಸಂಪರ್ಕ ಇಲಾಖೆಗೆ ವಂಚನೆ ಮಾಡುತ್ತಿದ್ದ ಜಾಲ ಬೇಧಿಸಿರುವ ನಗರ ಭಯೋತ್ಪಾದಕ ನಿಗ್ರಹ ದಳ (ಎಟಿಎಸ್) ಈ ಸಂಬಂಧ ಇಬ್ಬರು ಅಂತಾರಾಜ್ಯ ಆರೋಪಿಗಳನ್ನು ಹೆಡೆಮುರಿ ಕಟ್ಟಿದೆ. ಕೇರಳದ ಇಬ್ರಾಹಿಂ ಪುಲ್ಲಟ್ಟಿ ಹಾಗೂ ತಮಿಳುನಾಡಿನ ಗೌತಮ್ ಬಂಧಿತ ಆರೋಪಿಗಳು.
ಬಂಧಿತರಿಂದ ಏಕಕಾಲಕ್ಕೆ 960 ಸಿಮ್ ಕಾರ್ಡ್ ಅಳವಡಿಸುವಂತಹ 30 ಸಿಮ್ ಬಾಕ್ಸ್ ಇರುವ ಎಲೆಕ್ಟ್ರಾನಿಕ್ ಉಪಕರಣಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಪ್ರಕರಣದಲ್ಲಿ ಜಾಲಹಳ್ಳಿ ಮೂಲದ ಹಾಗೂ ತಮಿಳುನಾಡಿನ ಓರ್ವ ಆರೋಪಿ ಸೇರಿದಂತೆ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಆರೋಪಿಗಳ ಪತ್ತೆಗೆ ಶೋಧ ಕಾರ್ಯ ನಡೆಸುತ್ತಿರುವುದಾಗಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ.
ಪ್ರಕರಣದ ಪ್ರಮುಖ ರೂವಾರಿ ಇಬ್ರಾಹಿಂ ಕೆಲ ವರ್ಷಗಳಿಂದ ದುಬೈನಲ್ಲಿ ಚಾಲಕನಾಗಿದ್ದ. ಅರಬ್ ದೇಶಗಳಲ್ಲಿ ಬೆಂಗಳೂರು ಸೇರಿದಂತೆ ದೇಶದ ವಿವಿಧ ಮೂಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಕೆಲಸ ಮಾಡುತ್ತಿದ್ದ. ಭಾರತಕ್ಕೆ ಕರೆ ಮಾಡಬೇಕಾದರೆ ಹೆಚ್ಚಿನ ದರ ವಿಧಿಸುತ್ತಿರುವುದನ್ನು ಅರಿತ ಆರೋಪಿ ಸ್ಥಳೀಯ ನಿವಾಸಿ ರಿಯಾಜ್ ಎಂಬಾತನ ನೆರವಿನಿಂದ ಅಂತಾರಾಷ್ಟ್ರೀಯ ಇನ್ಕಮಿಂಗ್ ಕಾಲ್ಗಳನ್ನು (ಐಎಸ್ಡಿ) ಸ್ಥಳೀಯ ಕರೆಗಳಾಗಿ ಬೆಂಗಳೂರಿನಲ್ಲಿ ಕುಳಿತು ಪರಿವರ್ತಿಸುತ್ತಿದ್ದ.
960 ಸಿಮ್ ಕಾರ್ಡ್ ಸಂಗ್ರಹಿಸಿದ್ದು ಹೇಗೆ ?
ನಗರದಲ್ಲಿ ವಾಸವಾಗಿದ್ದ ಇಬ್ರಾಹಿಂ, ಪರಿಚಿತನಾಗಿದ್ದ ತಮಿಳುನಾಡು ಮೂಲದ ಗೌತಮ್ಗೆ ತಿಂಗಳಿಗೆ 70 ಸಾವಿರ ರೂಪಾಯಿ ವೇತನ ನೀಡಿ ದಂಧೆಗೆ ಇರಿಸಿಕೊಂಡಿದ್ದ. ನಾಪತ್ತೆಯಾಗಿರುವ ಇಬ್ಬರು ಆರೋಪಿಗಳು ವಂಚನೆಗೆ ಸಾಥ್ ನೀಡಿದ್ದರು. ಸಿಮ್ ನೀಡುವ ಸೋಗಿನಲ್ಲಿ ಅಮಾಯಕರಿಂದ ಗುರುತಿನ ಚೀಟಿ ಪಡೆದು ಅವರಿಂದ ಫಿಂಗರ್ ಪ್ರಿಂಟ್ ಸಹ ಪಡೆದು ಅವರ ಹೆಸರಿನಲ್ಲಿ ಸಿಮ್ ಖರೀದಿಸುತ್ತಿದ್ದರು. ಬೆಂಗಳೂರು ಸೇರಿದಂತೆ ತಮಿಳುನಾಡು ಹಾಗೂ ಕೇರಳದಲ್ಲಿ ತಮ್ಮ ಸಹಚರರ ಮೂಲಕ ಗುರುತಿನ ಚೀಟಿಗಳ ಸಂಗ್ರಹಿಸುತ್ತಿದ್ದರು. ಪ್ರಮುಖವಾಗಿ ಸಿಮ್ ಪಡೆಯಲು ಬರುವ ಗ್ರಾಮೀಣ ಭಾಗದ ಜನರ ಐಡಿ ಕಾರ್ಡ್ನ ಮತ್ತೊಂದು ಪ್ರತಿ ಪಡೆದು ಬೇರೆ ಸಿಮ್ ಕಾರ್ಡ್ಗಳನ್ನು ಪಡೆಯುತ್ತಿದ್ದರು. ದುಬೈನಲ್ಲಿ ನಿಮಿಷಕ್ಕೆ 10 ರೂಪಾಯಿ ಇದ್ದರೆ ಇಲ್ಲಿ 1-2 ರೂಪಾಯಿಯಲ್ಲಿ ಮಾತನಾಡಬಹುದು. ಅದೇ ದುಬೈನಿಂದ ಭಾರತಕ್ಕೆ ಕರೆ ಮಾಡುವ ಗ್ರಾಹಕರನ್ನು ಸಂಪರ್ಕಿಸಿ ಟೆಲಿಪೋನ್ ಎಕ್ಸ್ಚೇಂಜ್ ಮೂಲಕ ಮಾಡಿಸುತ್ತಿದ್ದರು. ಗ್ರಾಹಕರಿಂದ ಕಮೀಷನ್ ಪಡೆಯುತ್ತಿದ್ದರು. ವಿದೇಶಿ ಫೋನ್ ಕರೆಗಳನ್ನು ಸ್ಥಳೀಯ ಕರೆಗಳಾಗಿ ಪರಿವರ್ತಿಸುವ ಭಾರತೀಯ ದೂರ ಸಂಪರ್ಕ ಇಲಾಖೆಗೂ ವಂಚಿಸಿದ್ದಾರೆ. ದೇಶದ ಆಂತರಿಕ ಭದ್ರತೆ ಧಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆಗಳಿಗೆ ಈ ಬಗ್ಗೆ ಮಾಹಿತಿ ರವಾನಿಸಲಾಗಿದೆ. ಇದುವರೆಗೂ ಎಷ್ಟು ಕರೆಗಳನ್ನು ಸ್ಥಳೀಯ ಕರೆಗಳನ್ನಾಗಿ ಪರಿವರ್ತಿಸಲಾಗಿದೆ ಎಂಬುದರ ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಹವಾಲಾ ದಂಧೆ ನಡೆಸುತ್ತಿದ್ದ ಗ್ಯಾಂಗ್
ದುಬೈನ ತಮ್ಮ ನೆಟ್ವರ್ಕ್ನಿಂದ ಆರೋಪಿಗಳು ಇಲ್ಲಿ ಹವಾಲಾ ಮೂಲಕ ಹಣ ಪಡೆಯುತ್ತಿದ್ದರು. ಈ ಕೇಸ್ನಲ್ಲಿ ಸದ್ಯ ಐವರು ಭಾಗಿಯಾಗಿದ್ದಾರೆ. ತಿಂಗಳಿಗೆ 10 ರಿಂದ 15 ಲಕ್ಷ ರೂಪಾಯಿ ಸಂಪಾದನೆ ಮಾಡುತ್ತಿದ್ದರು. ಹವಾಲಾ ಮೂಲಕ ಇದುವರೆಗೂ ಎಷ್ಟು ಹಣ ವರ್ಗಾವಣೆ ಮಾಡಲಾಗಿದೆ. ಎಷ್ಟು ಜನರೊಂದಿಗೆ ವ್ಯವಹಾರ ನಡೆಸಿದ್ದಾರೆ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಆಯುಕ್ತರು ತಿಳಿಸಿದ್ದಾರೆ.