ಬೆಂಗಳೂರು: ವಿವಾದಾತ್ಮಕ ಹೇಳಿಕೆಗಳನ್ನು ನೀಡುವುದು ಚುನಾವಣೆ ಸಂದರ್ಭದಲ್ಲಿ ಪಕ್ಷಗಳ ನಡುವೆ ಸರ್ವೇ ಸಾಮಾನ್ಯ. ಆದರೆ ಇದು ಪ್ರಸಕ್ತ ಲೋಕಸಭಾ ಚುನಾವಣೆ ಹಾಗೂ ಪೂರ್ವದಲ್ಲಿ ಕೊಂಚ ಹೆಚ್ಚಾಗಿಯೇ ರಾಜ್ಯದಲ್ಲಿ ವ್ಯಕ್ತವಾಗಿರುವುದು ವಿಪರ್ಯಾಸ.
ಒಬ್ಬೊಬ್ಬ ಘಟಾನುಘಟಿ ನಾಯಕರೂ ಮನಸ್ಸಿಗೆ ಬಂದಂತೆ ನಾಲಿಗೆ ಹರಿಬಿಟ್ಟಿದ್ದು, ಇಂದು ದೊಡ್ಡ ವಿವಾದಗಳನ್ನೇ ಸೃಷ್ಟಿಸಿವೆ. ಸಾಮಾನ್ಯವಾಗಿ ಬಿಜೆಪಿಯಲ್ಲಿ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ, ಸಂಸದ ಪ್ರತಾಪ್ ಸಿಂಹ ಇಂತಹ ಹೇಳಿಕೆಗಳನ್ನು ನೀಡುತ್ತಾ ಬಂದಿದ್ದರು. ಆದರೆ ಲೋಕಸಭಾ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಜೆಡಿಎಸ್ ನಾಯಕರು ಇದನ್ನು ಗುತ್ತಿಗೆ ಪಡೆದಂತೆ ವರ್ತಿಸುತ್ತಿದ್ದಾರೆ.
ಹೇಳಿಕೆಗಳ ಮಹಾಪೂರ...
ಮಂಡ್ಯದಿಂದ ತಮ್ಮ ಪುತ್ರ ನಿಖಿಲ್ನನ್ನು ಸಿಎಂ ಎಚ್.ಡಿ. ಕುಮಾರಸ್ವಾಮಿ ಕಣಕ್ಕಿಳಿಸಿದ್ದಾರೆ. ಆದರೆ, ಇವರಿಗೆ ಪಕ್ಷೇತರವಾಗಿ ಕಣಕ್ಕಿಳಿದಿರುವ ನಟಿ ಸುಮಲತಾ ಅಂಬರೀಶ್ ನುಂಗಲಾಗದ ಬಿಸಿ ತುಪ್ಪವಾಗಿದ್ದಾರೆ. ಪುತ್ರನಿಗೆ ಇವರಿಂದ ಹಿನ್ನಡೆ ಆಗಬಹುದೇನೋ ಎಂಬ ಆತಂಕದಲ್ಲಿ ಅವರು, ಅವರ ಅಣ್ಣ ಹಾಗೂ ಸಚಿವ ಎಚ್.ಡಿ. ರೇವಣ್ಣ, ಹಳೆ ಮೈಸೂರು ಭಾಗದ ಸಚಿವರಾದ ಸಾರಾ ಮಹೇಶ್, ಡಿ.ಸಿ. ತಮ್ಮಣ್ಣ, ಸಿ.ಎಸ್. ಪುಟ್ಟರಾಜು ಸೇರಿದಂತೆ ಹಲವರು ತಮ್ಮ ನಾಲಿಗೆ ಹರಿಬಿಡುತ್ತಿದ್ದು, ಇದು ದೊಡ್ಡ ವಿವಾದಕ್ಕೆ ಕಾರಣವಾಗುತ್ತಿದೆ.
ದೇಶ ಹಾಗೂ ರಾಜ್ಯ:
ಪ್ರಸಕ್ತ ಚುನಾವಣೆಯಲ್ಲಿ ಎನ್ಡಿಎ ಹಾಗೂ ಯುಪಿಎ ನಡುವೆ ತೀವ್ರ ಸ್ಪರ್ಧೆ ಇದೆ. ಕಾಂಗ್ರೆಸ್ ಮಹಾಘಟಬಂಧನ್ ಮಾಡಿಕೊಂಡಿದ್ದರೆ, ಬಿಜೆಪಿ ಎನ್ಡಿಎ ಒಕ್ಕೂಟ ರಚಿಸಿಕೊಂಡಿದೆ. ಸಾಕಷ್ಟು ರಾಜ್ಯದಲ್ಲಿ ಪಕ್ಷಗಳ ಮೈತ್ರಿ ಏರ್ಪಟ್ಟಿದ್ದು, ಅಧಿಕಾರ ಉಳಿಸಿಕೊಳ್ಳಲು ಎನ್ಡಿಎ, ಮರಳಿ ಪಡೆಯಲು ಯುಪಿಎ ಸೆಣೆಸುತ್ತಿವೆ. ಈ ಸಂದರ್ಭದಲ್ಲಿ ನಕಾರಾತ್ಮಕ, ವಿವಾದಾತ್ಮಕ ಹಾಗೂ ಅವಹೇಳನಕಾರಿ ಹೇಳಿಕೆಗಳಿ ಮಿತಿ ಇಲ್ಲದಂತಾಗಿದೆ.
ಬಿಜೆಪಿ ಹಾಗೂ ಸದಸ್ಯರ ವಿರುದ್ಧ ಬೆರಳು ತೋರಿಸುವವರ ಕೈಬೆರಳನ್ನೇ ಕತ್ತರಿಸಬೇಕೆಂದು ಉತ್ತರ ಪ್ರದೇಶದ ಎತಾವಾ ಕ್ಷೇತ್ರದಿಂದ ಕಣಕ್ಕಿಳಿದಿರುವ ರಾಮ್ ಶಂಕರ್ ಕಠಾರಿಯಾ ಅವರು ನೀಡಿರುವ ಹೇಳಿಕೆ ಹೊಸ ವಿವಾದವನ್ನು ಸೃಷ್ಟಿ ಮಾಡಿತ್ತು.
ಪ್ರಧಾನಿ ನರೇಂದ್ರ ಮೋದಿ ಪರ ಘೋಷಣೆ ಕೂಗುವವರ ದವಡೆಗೆ ಹೊಡೀರಿ ಎಂದು ಜೆಡಿಎಸ್ ಶಾಸಕ ಶಿವಲಿಂಗೇಗೌಡ ವಿವಾದಾತ್ಮಕ ಹೇಳಿಕೆಯನ್ನು ಅರಸಿಕೆರೆಯಲ್ಲಿ ನೀಡಿದ್ದರು. ನಂತರ ಅದಕ್ಕೆ ಸಮಜಾಯಿಷಿ ಕೂಡ ನೀಡಿದ್ದಾರೆ.
ಕಾಂಗ್ರೆಸ್ ಬಸವಕಲ್ಯಾಣ ಶಾಸಕ ನಾರಾಯಣರಾವ್, ಗಂಡಸ್ತನ ಇಲ್ಲದವರೂ ಮದುವೆಯಾಗ್ತಾರೆ, ಆದರೆ ಮಕ್ಕಳಾಗಲ್ಲ ಎಂದು ಹೇಳುವ ಮೂಲಕ ಪ್ರಧಾನಿ ಮೋದಿ ಕೈಲಾಗದ ಗಂಡು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಕಾಂಗ್ರೆಸ್ ಮುಖಂಡ ಬೇಳೂರು ಗೋಪಾಲಕೃಷ್ಣ ನರೇಂದ್ರ ಮೋದಿಯನ್ನು ಗುಂಡಿಕ್ಕಿ ಕೊಲ್ಲಬೇಕು. ಪ್ರಜಾಪ್ರಭುತ್ವ ವಿರೋಧಿಯಾಗಿ ಮುಂದುವರಿದಿರುವ ಇವರನ್ನು ಗುಂಡಿಕ್ಕಿ ಸಾಯಿಸಿದರೆ ಸಾಕು, ಬೇರೆ ಯಾರನ್ನೂ ಸಾಯಿಸುವ ಅಗತ್ಯವಿಲ್ಲ ಎಂದಿದ್ದರು.
ಪುಲ್ವಾಮಾ ಪ್ರತಿಕಾರ:
ದೇಶದಲ್ಲಿ ಇತ್ತೀಚೆಗೆ ದೊಡ್ಡ ಸಂಚಲನ ಮೂಡಿಸಿದ ಪುಲ್ವಾಮಾ ಘಟನೆ ಬಗ್ಗೆ ವಿವಾದಾತ್ಮಕ ಹೇಳಿಕೆಗಳು ಕೇಳಿಬಂದಿವೆ.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಲೋಕಸಭಾ ಸದಸ್ಯ ಪುಲ್ವಾಮಾ ಘಟನೆ ಒಂದು ಮ್ಯಾಚ್ ಫಿಕ್ಸಿಂಗ್ ಎಂದಿದ್ದರು. ದನದ ಮಾಂಸ ಪತ್ತೆ ಹಚ್ಚುವ ಕೇಂದ್ರ ಸರ್ಕಾರಕ್ಕೆ 350 ಕೆ.ಜಿ. ಆರ್ಡಿಎಕ್ಸ್ ಪತ್ತೆ ಹಚ್ಚಲು ಆಗಲಿಲ್ಲವಾ ಎಂದು ಹೇಳಿದ್ದರು.
ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಈ ಸಂದರ್ಭ ಸಾಕಷ್ಟು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಪುಲ್ವಾಮಾ ಘಟನೆ ವಿವಾದದ ಕುರಿತು ಮಾತನಾಡುತ್ತಾ, ರಾಹುಲ್ ಗಾಂದಿ ಬ್ರಾಹ್ಮಣ ಹೇಗಾದ, ಅವ ಮುಸಲ್ಮಾನನ ಮಗ ಎಂಬ ಹೇಳಿಕೆ ಕೊಟ್ಟಿದ್ದರು.
ನ್ಯಾಷನಲ್ ಕಾನ್ಫರೆನ್ಸ್ ಮುಖಂಡ ಅಹಮ್ಮದ್ ರಾಣಾ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದರು. ನನಗೆ ಅಧಿಕಾರ ಸಿಕ್ಕರೆ ಜಮ್ಮು-ಕಾಶ್ಮೀರದಲ್ಲಿ ನಡೆದ ಕೆಲ ಕೊಲೆ ಪ್ರಕರಣಗಳಲ್ಲಿ ಮೋದಿ ಅವರನ್ನು ಜೈಲಿಗೆ ಕಳುಹಿಸುತ್ತೇನೆ. ಮಾನವೀಯತೆ ಕೊಲೆಗಡುಕರಲ್ಲಿ ಮೋದಿ ಮೊದಲ ಸ್ಥಾನದಲ್ಲಿದ್ದಾರೆ. ಹಾಗೇ ದ್ವೇಷ ಬಿತ್ತುವ ಕೆಲಸ ಮಾಡುತ್ತಿರುವ ಕೆಲ ಮಾಧ್ಯಮಗಳನ್ನು ಕೂಡ ಜೈಲಿಗೆ ಕಳುಹಿಸುತ್ತೇನೆ ಎಂದು ಹೇಳಿ ವಿವಾದ ಸೃಷ್ಟಿಸಿದ್ದರು.
ರಾಜ್ಯದಲ್ಲಿ ವಿವಾದಾತ್ಮಕ ಹೇಳಿಕೆ
ರಾಜ್ಯದಲ್ಲಿ ಮಂಡ್ಯ ಲೋಕಸಭೆ ಕ್ಷೇತ್ರ ಅತೀ ದೊಡ್ಡ ವಿವಾದದ ಕೇಂದ್ರಬಿಂದುವಾಗಿದೆ. ಸುಮಲತಾ ಸ್ಪರ್ಧೆಯನ್ನು ಅರಗಿಸಿಕೊಳ್ಳಲಾಗದ ಜೆಡಿಎಸ್ ನಾಯಕರು ಬಾಯಿಗೆ ಬಂದಂತೆ ಮಾತನಾಡಿದ್ದಾರೆ.
ಸಚಿವ ರೇವಣ್ಣ ಒಂದು ಹೆಜ್ಜೆ ಮುಂದೆ ಹೋಗಿ ಮಹಿಳಾ ದಿನದಂದೇ ಸುಮಲತಾ ವಿರುದ್ಧ, ಗಂಡ ಸತ್ತು ಇನ್ನೂ ತಿಂಗಳು ಕಳೆದಿಲ್ಲ ಆಗಲೇ ಸುಮಲತಾ ರಾಜಕೀಯಕ್ಕೆ ಬಂದಿದ್ದಾರೆ ಎಂದು ಹೇಳಿಕೆ ನೀಡಿದ್ದರು. ನಂತರ ವಿವಾದ ಆದ ಮೇಲೂ ತಮ್ಮ ಮಾತನ್ನು ಸಮರ್ಥಿಸಿಕೊಳ್ಳುತ್ತಲೇ ಇದ್ದ ಇವರ ಪರವಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ ಕ್ಷಮೆಯಾಚಿಸುವ ಯತ್ನ ಮಾಡಿದ್ದರು.
ಸಿಎಂ ಕುಮಾರಸ್ವಾಮಿ ಕೂಡ, ಮಾಜಿ ಸಚಿವ ಅಂಬರೀಶ್ ಅಗಲಿಕೆಯ ನೋವಿನ ಛಾಯೆಯೂ ಸುಮಲತಾ ಮುಖದಲ್ಲಿ ಕಾಣ್ತಿಲ್ಲ. ಸುಮಲತಾ ಭಾಷಣ ನೋಡಿದರೆ ನಾಟಕೀಯ ಡೈಲಾಗ್ ಹೊಡೆಯುವಂತಿದೆ ಎಂದು ವಿವಾದಾತ್ಮಕವಾಗಿ ಹೇಳಿಕೆ ನೀಡಿದ್ದಾರೆ. ಮಂಡ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡ 200 ಕ್ಕೂ ಹೆಚ್ಚು ರೈತ ಕುಟುಂಬದವರಿಗೆ ಆರ್ಥಿಕ ನೆರವು ನೀಡಿದ್ದೇವೆ. ಅದು ಮಜಾ ಮಾಡಲು ಅಲ್ಲ. ಇನ್ನೊಬ್ಬರಿಂದ ಹಣ ಪಡೆದು ಮಜಾ ಮಾಡೋರು ಇವರು ಎಂದು ಸುಮಲತಾರನ್ನು ಟೀಕಿಸಿದ್ದರು. ಅಲ್ಲದೇ ಇವರ ಪರ ಪ್ರಚಾರ ಮಾಡುತ್ತಿರುವ ಚಿತ್ರನಟರಾದ ದರ್ಶನ್ ಮತ್ತು ಯಶ್ರನ್ನು ಕಳ್ಳೆತ್ತುಗಳು ಎಂದು ಹೇಳಿ, ನಂತರ ಇದನ್ನು ಮಾಧ್ಯಮ ಸೃಷ್ಟಿ ಎಂದರು.
ಎಂ ಎಲ್ ಸಿ ಕೆ.ಟಿ. ಶ್ರೀಕಂಠೇಗೌಡ, ಸುಮಲತಾ ಅಂಬರೀಶ್ ಮಂಡ್ಯದ ಗೌಡ್ತಿಯೇ ಅಲ್ಲ ಎಂದಿದ್ದರು. ಅಂಬರೀಶ್ ಬದುಕಿದ್ದಾಗ ಸ್ಪಷ್ಟವಾಗಿ ಹೇಳಿದ್ದರು. ನನ್ನ ಮನೆಗೆ ರಾಜಕಾರಣ ಕೊನೆಯಾಗಲಿ ಅಂತ. ಸುಮಲತಾ ಎಂದೂ ಕೂಡ ಮಂಡ್ಯದ ಗೌಡ್ತಿ ಅಲ್ಲ. ಸುಮಲತಾ ಮೂಲ ಆಂಧ್ರ ಪ್ರದೇಶದ ಗೌಡ್ತಿ ಎನ್ನುವ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದರು.