ಬೆಂಗಳೂರು: ಕೆಂಪಣ್ಣ ಬಿಜೆಪಿ ವಿರುದ್ಧ 40 ಪರ್ಸೆಂಟ್ ಕಮಿಷನ್ನ ಸುಳ್ಳು ಆರೋಪ ಮಾಡಿದ್ದರು. ಕಾಂಗ್ರೆಸ್‌ನವರು ಅದರ ಲಾಭ ಪಡೆದುಕೊಂಡರು. ಈಗ ಕಾಂಗ್ರೆಸ್ ಸರ್ಕಾರವೇ ಬಂದಿದೆ. ತನಿಖೆ ನಡೆಸಿ 40 ಪರ್ಸೆಂಟ್ ಸಾಬೀತುಪಡಿಸಲಿ. ನಾವು ಕಮಿಷನ್ ಪಡೆದಿದ್ದೇವೆ ಎನ್ನುವುದಾದರೆ ಇನ್ಮುಂದೆ ಗುತ್ತಿಗೆದಾರರು 40 ಪರ್ಸೆಂಟ್ ಕಡಿಮೆಗೆ ಬಿಡ್ ಮಾಡಲಿ ನೋಡೋಣ ಎಂದು ಕಾಂಗ್ರೆಸ್ ಸರ್ಕಾರ ಹಾಗು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರಿಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ನೇರ ಸವಾಲೆಸೆದಿದ್ದಾರೆ.
ಆರ್. ಟಿ ನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಅವಧಿಯ ಹಗರಣಗಳ ತನಿಖೆ ಮಾಡಲಿ. ನಾನು ಸ್ಪಷ್ಟವಾಗಿ ಹೇಳುತ್ತೇನೆ. ದಯವಿಟ್ಟು ಅವರು ಎಲ್ಲ ತನಿಖೆ ಮಾಡಲಿ. 40% ಕಮಿಷನ್ ಆರೋಪವನ್ನು ನಮ್ಮ ಮೇಲೆ ಅವರು ಹೊರೆಸಿದ್ದಾರೆ. 40% ಆಗಿದೆ ಅಂತ ಅವರು ಪುರಾವೆ ಸಮೇತ ತೋರಿಸಬೇಕು. ಈ ಸಂಬಂಧ ನಾನು ಆಗ್ರಹ ಮಾಡುತ್ತೇನೆ. ಕಾಂಗ್ರೆಸ್ ಸರ್ಕಾರ 40% ಆರೋಪ ಕುರಿತ ಎಲ್ಲ ದಾಖಲೆ ಕೊಡಲಿ, ನಾವು 40% ಕಮಿಷನ್ ಪಡೆಯುತ್ತಿದ್ದೆವು ಅಂತ ದಾಖಲೆ ಸಹಿತ ತೋರಿಸಲಿ ಎಂದು ಕಾಂಗ್ರೆಸ್ ಸರ್ಕಾರಕ್ಕೆ ಬೊಮ್ಮಾಯಿ ಸವಾಲು ಹಾಕಿದ್ದಾರೆ.
ಗುತ್ತಿಗೆದಾರರ ಸಂಘದವರೂ 40% ಕಮಿಷನ್ ಆರೋಪ ಮಾಡಿದ್ದರು. ಈಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. 40% ಇಲ್ಲ ಅಂತ ಹೇಳಬಹುದು. ಈಗ ಗುತ್ತಿಗೆದಾರ ಸಂಘದವರು 40% ಕಮ್ಮಿ ಟೆಂಡರ್ ಹಾಕಲಿ, ಇನ್ಮುಂದಿನ ಎಲ್ಲ ಟೆಂಡರ್‌ಗಳಲ್ಲೂ 40% ಕಡಿಮೆ ಹಾಕಲಿ. ಅಂದರೆ ಮಾತ್ರ ನಮ್ಮ ಕಾಲದಲ್ಲಿ 40% ಕಮಿಷನ್ ಇತ್ತು ಅಂತ ಆಗುತ್ತದೆ. ಇವತ್ತು ಅಷ್ಟೇ ಮೊತ್ತಕ್ಕೆ ಟೆಂಡರ್ ಹಾಕಿದರೆ, 40% ಈಗಲೂ ಇದೆ ಅಂತ ಆಗುತ್ತದೆ. ಕೆಂಪಣ್ಣ ಮೇಲೆ ಬಹಳ ದೊಡ್ಡ ಜವಾಬ್ದಾರಿ ಇದೆ. ಇನ್ಮೇಲೆ ಕೆಂಪಣ್ಣ ತಮ್ಮೆಲ್ಲ ಸಂಘದವರಿಗೂ 40% ಕಮ್ಮಿಗೆ ಟೆಂಡರ್ ಹಾಕುವಂತೆ ಹೇಳಬೇಕು. ಕೆಂಪಣ್ಣ ಇದುವರೆಗೆ 40% ದಾಖಲೆ ಕೊಡ್ಲಿಲ್ಲ, ಕೋರ್ಟ್‌ಗೂ ಕೊಡ್ಲಿಲ್ಲ, ನಮ್ಮ ವಿರುದ್ಧ ಅಪಪ್ರಚಾರ ಮಾಡಿದರು. ಕಾಂಗ್ರೆಸ್‌ನವರು ಅದರ ಲಾಭ ತೆಗೆದುಕೊಂಡರು. ನಮ್ಮ ಕಾಲದ ಅವರ ಕಾಲದ ಎಲ್ಲವನ್ನೂ ತನಿಖೆ ಮಾಡಲಿ, ಪಿಎಸ್ಐ ಪ್ರಕರಣವನ್ನೂ ತನಿಖೆ ಮಾಡಲಿ, ಸತ್ಯ ಹೊರಗೆ ಬರಲಿ ನಾವು ಅವರ ಕಾಲದ ಹಗರಣಗಳನ್ನು ಲೋಕಾಯುಕ್ತಕ್ಕೆ ಕೊಟ್ಟಿದ್ದೇವೆ ಎಂದರು.
ಕೆಲವೇ ಗಂಟೆಗಳ ಮಳೆಗೆ ಸಾವಾಗಿರೋದು ಬಹಳ ನೋವಿನ ಸಂಗತಿ, ಚಿಕ್ಕಮಗಳೂರಿನಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಬೆಂಗಳೂರಿನಲ್ಲಿ ಹವಾಮಾನ ಇಲಾಖೆ ಎಚ್ಚರಿಕೆ ನೀಡಿತ್ತು. ಬಿಬಿಎಂಪಿಯವರು ಈ ವರ್ಷ ಮುಂಜಾಗ್ರತೆ ಕ್ರಮ ತೆಗೆದುಕೊಂಡಿಲ್ಲ ಅನ್ನೋದು ಸ್ಪಷ್ಟ ಆಗುತ್ತಿದೆ. ಈ ಘಟನೆ ನಡೆಯೋದಿಕ್ಕೆ ಅವಕಾಶ ಕೊಟ್ಟಿದ್ದಾರೆ. ಕೂಡಲೇ ಧಾವಿಸಿ ರಕ್ಷಣೆ ಮಾಡುವ ಕೆಲಸ ಬಿಬಿಎಂಪಿಯವರು ಮಾಡಲಿಲ್ಲ ಎಂದು ಆರೋಪಿಸಿದರು.
ನಾವು ಬೆಂಗಳೂರಿನಲ್ಲಿ ಎಸ್‌ಡಿಆರ್‌ಎಫ್ ತಂಡಗಳನ್ನು ರಚಿಸಿದ್ದೇವೆ. ಈ ತಂಡಗಳಿಗೆ ಚಾಲನೆ ಕೊಟ್ಟು ಕೆಲಸಕ್ಕೆ ಹಚ್ಚುವ ಕೆಲಸ ಆಗಬೇಕು. ಇನ್ನೂ ಐದು ದಿನ ಮಳೆ ಆಗಲಿದೆ. ವ್ಯವಸ್ಥಿತವಾಗಿ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ನಗರದಲ್ಲಿ ಸಿಕ್ಕಾಪಟ್ಟೆ ಮರಗಳು ಬಿದ್ದಿವೆ. ಬಿದ್ದ ಮರಗಳನ್ನು ತೆಗೆಯುವ ಕೆಲಸ ಆಗಿಲ್ಲ. ಮುಂದಿನ ಐದು ದಿನ ಹೀಗೇ ಬಿಟ್ಟರೆ ಬೆಂಗಳೂರು ಬಹಳ ಅಸ್ತವ್ಯಸ್ತ ಆಗಲಿದೆ. ಪರಿಹಾರ ಕ್ರಮಗಳನ್ನು ಆದ್ಯತೆಯಿಂದ ಸಿಎಂ ಮಾಡಬೇಕಿದೆ. ಬಿಬಿಎಂಪಿ ಅಧಿಕಾರಿಗಳಲ್ಲಿ ಕೆಲವರು ಕೆಲಸ ಮಾಡೋರು ಮಾಡುತ್ತಾರೆ. ಮಾಡದಿರೋರು ಮಾಡಲ್ಲ. ಪ್ಲಾನ್ ಪ್ರಕಾರ ಪೂರ್ವಭಾವಿ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದು ಬೊಮ್ಮಾಯಿ ಹೇಳಿದರು.
ಆತ್ಮಾವಲೋಕನ ಮಾಡಿಕೊಂಡಿದ್ದೇವೆ: ನಿನ್ನೆ ಬಿಜೆಪಿ ಆತ್ಮಾವಲೋಕನ ಸಭೆ ನಡೆಸಿದ್ದೇವೆ. ಎಲ್ಲ ಜಿಲ್ಲೆಗಳಿಂದ ವರದಿ ತರಿಸಿದ್ದೇವೆ. ಒಂದೊಂದು ಜಿಲ್ಲೆಗಳಲ್ಲಿ ಒಂದೊಂದು ರೀತಿ ಚುನಾವಣೆ ನಡೆದಿದೆ. ಕೆಲವು ಕಡೆ ಲೋಪದೋಷಗಳಾಗಿದ್ದು, ಸರಿಪಡಿಸಲು ತೀರ್ಮಾನ ಮಾಡಿದ್ದೇವೆ. ಮುಂದೆ ಪಕ್ಷ ಪುನರ್ ಸಂಘಟನೆ, ಲೋಕಸಭೆ ಚುನಾವಣೆ ತಯಾರಿ ಬಗ್ಗೆ ತೀರ್ಮಾನ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಬಿಜೆಪಿ ಪಕ್ಷದ ನಾಯಕರು, ಪದಾಧಿಕಾರಿಗಳು ರಾಜ್ಯ ಪ್ರವಾಸ ಮಾಡಲು ತೀರ್ಮಾನಿಸಲಾಗಿದೆ.
ಸೋಲಿಗೆ ಹಲವು ಕಾರಣಗಳನ್ನು ಕಂಡುಕೊಂಡಿದ್ದೇವೆ. ಕೆಲವು ಕಡೆ ಅಭ್ಯರ್ಥಿಗಳು ಕಾರಣ, ಕೆಲವು ಕಡೆ ಸಂಘಟನೆ ಕಾರಣ. ಗ್ಯಾರಂಟಿ ಸ್ಕೀಂ ಬಗ್ಗೆಯೂ ಬಹಳ ಜನ ಹೇಳಿದ್ದಾರೆ. ಗ್ಯಾರಂಟಿ ಬಗ್ಗೆ ಜನರಿಗೆ ಕಾಂಗ್ರೆಸ್ ಮೋಸ ಮಾಡಿದೆ. ಕಾರ್ಯಕರ್ತರು ಜನರ ಬಳಿ ಹೋಗಿ ಹೇಳಿಲ್ಲ, ಅದರ ಬಗ್ಗೆ ಯಾವುದೋ ಬ್ಯಾಂಕ್ನಿಂದ, ಕಂಪೆನಿಯಿಂದ ಬಂದವರ ರೀತಿ ಹೋಗಿ ಗ್ಯಾರಂಟಿ ಸ್ಕೀಂ ಬಗ್ಗೆ ಹೇಳಿದ್ದಾರೆ. ಬೆಂಗಳೂರಿನಲ್ಲಿ ಡಿಸಿ ಆಫೀಸ್ನಿಂದ ಅಂತ ಕರೆ ಮಾಡಿ ಸುಳ್ಳು ಹೇಳಿದ್ದಾರೆ. ಯಾವ ಡಿಸಿ ಆಫೀಸ್ ಅಂದರೆ ಡಿಸ್ಟ್ರಿಕ್ಟ್ ಕಾಂಗ್ರೆಸ್ ಆಫೀಸ್ ಅಂತ ಹೇಳಿದ್ದಾರೆ. ಈ ಥರ ಎಲ್ಲ ಮೋಸ ಮಾಡಿ ಗ್ಯಾರಂಟಿ ಸ್ಕೀಂ ಬಗ್ಗೆ ಹೇಳಿದ್ದಾರೆ. ಎಲ್ಲವೂ ಮುಂದೆ ಬೆಳಕಿಗೆ ಬರಲಿದೆ ಎಂದು ಮಾಜಿ ಸಿಎಂ ಹೇಳಿದ್ರು.
ಇದನ್ನೂ ಓದಿ: ವಿಧಾನಸೌಧ ಮುಂಭಾಗ ಗೋಮೂತ್ರ ಸಿಂಪಡಿಸಿದ ಕಾಂಗ್ರೆಸ್ ಕಾರ್ಯಕರ್ತರು- ವಿಡಿಯೋ