ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾಮಗಾರಿ ನಡೆಸಿ ಬಾಕಿ ಉಳಿಸಿಕೊಂಡಿರುವ ಬಿಲ್ ಪಾವತಿಸುವಂತೆ ರಾಜ್ಯ ಸರ್ಕಾರದ ವಿರುದ್ಧ ಸಮರ ಸಾರಿ ಬೇಸತ್ತು ರಾಜ್ಯಪಾಲರಿಗೆ ಪತ್ರ ಬರೆದಿದ್ದ ಗುತ್ತಿಗೆದಾರರ ಪೊಲೀಸ್ ವಿಚಾರಣೆ ಎರಡನೇ ದಿನವೂ ಮುಂದುವರೆದಿದೆ. 57 ಗುತ್ತಿಗೆದಾರರಿಗೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೊಟೀಸ್ ನೀಡಿದ್ದರು. ನಿನ್ನೆ ಹಾಜರಾಗಿದ್ದ 16 ಜನ ಗುತ್ತಿಗೆದಾರರನ್ನು ಶೇಷಾದ್ರಿಪುರಂ ಉಪ ವಿಭಾಗದ ಎಸಿಪಿ ವಿಚಾರಣೆ ನಡೆಸಿದ್ದರು.
"ಇಂದು ಕೆಲವೊಂದಿಷ್ಟು ಗುತ್ತಿಗೆದಾರರು ಹಾಜರಾಗಿದ್ದು, ಅವರ ವಿಚಾರಣೆ ನಡೆಯುತ್ತಿದೆ. 28 ತಿಂಗಳಿನಿಂದ ಬಿಲ್ ಬಾಕಿ ಇತ್ತು. ನಾವು ಎಲ್ಲರಿಗೂ ಮನವಿ ಮಾಡಿಕೊಂಡಿದ್ದೆವು. ಆದರೆ ಅದು ಸರಿ ಹೋಗಲಿಲ್ಲ. ಹಾಗಾಗಿ ರಾಜ್ಯಪಾಲರಿಗೆ ದೂರು ನೀಡಿದ್ದೇವೆ. ಕಾಮಗಾರಿಗೆ ಸಂಬಂಧಿಸಿದ ಬಿಲ್, ದಾಖಲಾತಿ ಕೇಳಿದ್ದು, ನಾವು ಕೊಡುತ್ತಿದ್ದೇವೆ. ಇಲ್ಲಿವರೆಗೂ ನಾವು ಯಾವುದೇ ಒಬ್ಬ ಶಾಸಕ ಅಥವಾ ಸಚಿವರ ಯಾರ ಮೇಲೂ ಕೂಡಾ ಆರೋಪ ಮಾಡಿಲ್ಲ." ಎಂದು ಗುತ್ತಿಗೆದಾರರ ಸಂಘಟನೆಯ ಅಧ್ಯಕ್ಷ ಮಂಜುನಾಥ್ ತಿಳಿಸಿದರು.
ಎಸ್ಐಟಿ ತನಿಖೆಯಿಂದ, ಮಧ್ಯವರ್ತಿಗಳು ಮುಖಾಂತರ ಇದು ಪ್ರಸ್ತಾಪ ಆಗಿದ್ದು, ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಈ ಬಗ್ಗೆ ಹೇಳಿಕೆಗಳುನ್ನು ನೀಡಿರುವುದು ಎಲ್ಲಾ ಗೊತ್ತಾಗಿ, ಭಾವೋದ್ವೇಗದಿಂದ ಹೇಮಂತ್ ಅವರು ಮಾತನಾಡಿದ್ದಾರೆ. ಯಾಕೆಂದರೆ ಇವತ್ತಿನ ದಿನ ಎಲ್ಲಾ ಗುತ್ತಿಗೆದಾರರು ಸಂಕಷ್ಟದಲ್ಲಿದ್ದಾರೆ. ಬಡ್ಡಿ ಕಟ್ಟಲು ಸಾಧ್ಯವಾಗದೆ ಒದ್ದಾಡುತ್ತಿದ್ದಾರೆ. ಈಕಡೆಯಿಂದ ಇಎಂಐ, ಚೆಕ್ಗಳು ಬೌನ್ಸ್ ಆಗುತ್ತಿವೆ. ಮಕ್ಕಳ ಫೀಸ್ ಕಟ್ಟಕ್ಕಾಗದೆ, ಕುಟುಂಬ ನಿರ್ವಹಣೆ ಕಷ್ಟವಾಗುತ್ತಿದ್ದು, ಕೆಲವರು ಭಾವೋದ್ವೇಗಕ್ಕೆ ಒಳಗಾಗಿ ಮಾತನಾಡಿದ್ದಾರೆ. ಮಾತನಾಡಿದ್ದು ತಪ್ಪು ಎಂಬುದು ಅರಿವಾಗಿ, ಅವರು ಕ್ಷಮೆ ಕೇಳಿರಬಹುದು. ಆದರೆ ನಾವು ನಮ್ಮ ಗುತ್ತಿಗೆ ಸಂಘದ ಪರವಾಗಿ ಯಾರ ಮೇಲೂ, ಯಾವುದೇ ಆರೋಪ ಮಾಡಿರುವುದಿಲ್ಲ. ಅದನ್ನು ಉಲ್ಟಾ ಹೊಡೆದಿಲ್ಲ ಎಂದು ಸ್ಪಷ್ಟಪಡಿಸಿದರು.
ಸರ್ಕಾರ ರಚನೆಯಾಗುತ್ತಿದ್ದಂತೆ ಬಿಬಿಎಂಪಿ ಗುತ್ತಿಗೆದಾರರ ಸಂಘವು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತ್ತು. ಗುತ್ತಿಗೆದಾರರು ಬಾಕಿಯಿರುವ ಬಿಲ್ ಬಗ್ಗೆ ರಾಜ್ಯಪಾಲರಿಗೆ ದೂರು ನೀಡಿದ್ದರು. ರಾಜ್ಯಪಾಲರು ಸಹ ಸಂಬಂಧಪಟ್ಟ ಪೊಲೀಸರಿಗೆ ಈ ಬಗ್ಗೆ ಪರಿಶೀಲಿಸುವಂತೆ ಶಿಫಾರಸು ಮಾಡಿದ್ದರು. ಈ ಬಗ್ಗೆ ಹೈಗ್ರೌಂಡ್ಸ್ ಪೊಲೀಸರು ರಾಜ್ಯಪಾಲರಿಗೆ ಪತ್ರ ಬರೆದು ಸಹಿ ಹಾಕಿದ್ದ ಎಲ್ಲ ಬಿಬಿಎಂಪಿ ಗುತ್ತಿಗೆದಾರರಿಗೆ ಪೊಲೀಸರು ನೊಟೀಸ್ ನೀಡಿ ವಿಚಾರಣೆಗೆ ಕರೆದು ಹೇಳಿಕೆ ದಾಖಲಿಸಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಬಿಜೆಪಿ ಪ್ರಾಯೋಜಿತ ಗುತ್ತಿಗೆದಾರಿಂದ ಮಾತ್ರ ಕಮಿಷನ್ ಆರೋಪ: ಡಿಸಿಎಂ ಡಿ ಕೆ ಶಿವಕುಮಾರ್