ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆ ಶೋಧಕ್ಕಾಗಿ ಕಬ್ಬನ್ ಪಾರ್ಕ್ ಪೊಲೀಸರು ಆರ್.ಟಿ. ನಗರದ ಸುತ್ತಮುತ್ತಲಿನ ಪಿ.ಜಿ. ಗಳಲ್ಲಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಸಂತ್ರಸ್ತೆ ನಾಪತ್ತೆಯಾಗಿದ್ದು, ಆಕೆಯನ್ನು ಪತ್ತೆ ಮಾಡುವುದೇ ಪೊಲೀಸರಿಗೆ ಸವಾಲಾಗಿದೆ. ಆರ್.ಟಿ. ನಗರದಲ್ಲಿ ಯುವತಿ ವಾಸವಿದ್ದಳು ಎಂಬ ಮಾಹಿತಿ ಮೇರೆಗೆ ಸುಮಾರು 40ಕ್ಕಿಂತ ಹೆಚ್ಚು ಪೊಲೀಸರು ಆರ್.ಟಿ. ನಗರ ಸುತ್ತಮುತ್ತ ಪಿಜಿಗಳಲ್ಲಿ ಹುಡುಕಾಟ ನಡೆಸಿದ್ದಾರೆ. ಆದರೆ ಈವರೆಗೂ ಯಾವುದೇ ಪಿ.ಜಿ.ಯ ನೋಂದಣಿ ಪುಸ್ತಕದಲ್ಲಿ ಯುವತಿ ಹೆಸರು ದಾಖಲಾಗಿದ್ದು ಪತ್ತೆಯಾಗಿಲ್ಲ. ಪಿಜಿಯಲ್ಲಿ ನೆಲೆಸಿದ್ದವರ ಗುರುತಿನ ಚೀಟಿ ಹಾಗೂ ದಾಖಲಾತಿಗಳ ಬಗ್ಗೆಯೂ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಮತ್ತೊಂದೆಡೆ ಸಂತ್ರಸ್ತೆ ಯುವತಿ ಇದ್ದದ್ದು ಪಿಜಿಯಲ್ಲಿ ಅಲ್ಲ, ಬದಲಾಗಿ ಪ್ರತ್ಯೇಕ ಮನೆಯಲ್ಲಿ ಎನ್ನಲಾಗಿದೆ. ಸುರೇಶ್ ಕುಮಾರ್ ಎಂಬುವರ ಕಟ್ಟಡದಲ್ಲಿ ಸಿಂಗಲ್ ರೂಂನಲ್ಲಿ ಸಂತ್ರಸ್ತೆ ಬಾಡಿಗೆ ಇದ್ದರು. 2018 ರಿಂದ ಯುವತಿ ಆ ಮನೆಯಲ್ಲಿ ವಾಸವಾಗಿದ್ದರು ಎಂದು ಹೇಳಲಾಗಿದೆ.
ಸಂತ್ರಸ್ತೆ ಸೇರಿದಂತೆ ನಾಲ್ವರು ಯುವತಿಯರು ಪ್ರತ್ಯೇಕ ಕೋಣೆಗಳಲ್ಲಿ ವಾಸವಾಗಿದ್ದರು. ಹೆಬ್ಬಾಳದ ಖಾಸಗಿ ಕಾಲೇಜ್ನಲ್ಲಿ ಇಂಜಿನಿಯರಿಂಗ್ ಮುಗಿಸಿ ಕೆಲಸಕ್ಕೆ ಹೋಗುತ್ತಿದ್ದರು. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಯುವತಿ ಮನೆ ತೊರೆದಿದ್ದಾರೆ ಎನ್ನಲಾಗಿದೆ.