ಬೆಂಗಳೂರು: ನರ್ಸಿಂಗ್ ಕಾಲೇಜುಗಳಿಗೆ ಅನುಮತಿ ಕೊಟ್ಟಿರುವ ಪ್ರಕರಣದ ಕುರಿತು ತನಿಖೆಗೆ ಸದನ ಸಮಿತಿ ರಚನೆ ಮಾಡುವಂತೆ ವಿಧಾನ ಪರಿಷತ್ತಿನಲ್ಲಿ ಜೆಡಿಎಸ್ ಧರಣಿ ಮುಂದುವರೆಸಿದ್ದು, ಮಾತುಕತೆ ಮೂಲಕ ಮನವೊಲಿಕೆಗೆ ಸಭಾಪತಿ ಪ್ರತಿಪಕ್ಷಗಳ ನಾಯಕರನ್ನು ಆಹ್ವಾನಿಸಿ ಸದನವನ್ನು 10 ನಿಮಿಷ ಮುಂದೂಡಿಕೆ ಮಾಡಿದರು.
ವಿಧಾನ ಪರಿಷತ್ ಕಲಾಪ ಆರಂಭಗೊಳ್ಳುತ್ತಿದ್ದಂತೆ ನರ್ಸಿಂಗ್ ಕಾಲೇಜುಗಳಿಗೆ ಅನುಮತಿ ಕೊಟ್ಟಿರುವ ಕುರಿತು ತನಿಖೆಗೆ ಸದನ ಸಮಿತಿ ರಚನೆ ಮಾಡುವಂತೆ ಜೆಡಿಎಸ್ ಒತ್ತಾಯಿಸಿ ಸದನದ ಬಾವಿಗಿಳಿದು ಜೆಡಿಎಸ್ ಹೋರಾಟ ಆರಂಭಿಸಿತು. ಆಡಳಿತ ಪಕ್ಷದವರೇ ಸಮಿತಿ ಅಧ್ಯಕ್ಷರಾಗಲಿ ನಮ್ಮದೇನು ಅಭ್ಯಂತರವಿಲ್ಲ. ಆದರೆ, ಸದನ ಸಮಿತಿ ಆಗಲೇಬೇಕು. ಇದೊಂದು ಜ್ವಲಂತ ಸಮಸ್ಯೆಯಾಗಿದ್ದು, ಪಕ್ಷಾತೀತವಾಗಿ ಇದರ ತನಿಖೆಗೆ ಎಲ್ಲರೂ ಒಪ್ಪಿದ್ದಾರೆ. ಇದಕ್ಕೆ ಸದನ ಸಮಿತಿ ಆಗಲೇಬೇಕು ಎಂದು ಜೆಡಿಎಸ್ ಸದಸ್ಯ ಶ್ರೀಕಂಠೇಗೌಡ ಒತ್ತಾಯಿಸಿದರು.
ಈ ವೇಳೆ ಮಾತನಾಡಿದ ಸಭಾ ನಾಯಕ ಕೋಟಾ ಶ್ರೀನಿವಾಸ ಪೂಜಾರಿ, ಸದನ ಸಮಿತಿ ಮಾಡುವುದಿಲ್ಲ. ಈಗಾಗಲೇ ತನಿಖೆ ಮಾಡುತ್ತೇವೆ ಎಂದು ಸರ್ಕಾರ ಹೇಳಿದೆ. ಗ್ರಾಮೀಣಾಭಿವೃದ್ಧಿ ಇಲಾಖೆ ಪ್ರಕರಣ ಸದನ ಸಮಿತಿ ಮಾಡುವ ಮುನ್ನ ಎರಡು ತನಿಖಾ ವರದಿ ಇತ್ತು. ನಂತರ ಸದನ ಸಮಿತಿ ಮಾಡಲಾಯಿತು. ಈಗ 3 ತಿಂಗಳ ಒಳಗೆ ತನಿಖಾ ವರದಿ ಬರುತ್ತದೆ. ಅಲ್ಲಿಯವರೆಗೆ ಸಹಕಾರ ನೀಡಿ ಧರಣಿ ಹಿಂಪಡೆಯಬೇಕು. ನೀವು ಹೇಳಿದ ಅಧಿಕಾರಿಗಳ ನೇತೃತ್ವದಲ್ಲಿ ಸಮಿತಿ ಮಾಡುತ್ತೇವೆ. ಆದರೆ, ಸದನ ಸಮಿತಿ ಮಾಡುವುದಿಲ್ಲ ಎಂದು ಸ್ಪಷ್ಟ ಪಡಿಸಿದರು.
ನಂತರ ಕಾಂಗ್ರೆಸ್ ಸದಸ್ಯ ಹರಿಪ್ರಸಾದ್ ಮಾತನಾಡಿ, ಇದೊಂದು ಜ್ವಲಂತ ಸಮಸ್ಯೆ. ಸರ್ಕಾರ ಸದನ ಸಮಿತಿ ಮಾಡಬೇಕು. ಬಿಜೆಪಿಯವರು ಭ್ರಷ್ಟಾಚಾರ ವಿರೋಧಿಗಳು ಅಂತಾರೆ. ಇವರೆಲ್ಲಾ ಸತ್ಯ ಹರಿಶ್ಚಂದ್ರನ ಮನೆ ಪಕ್ಕದಲ್ಲಿ ಇರುವವರಾ?. ಸತ್ಯ ಹೊರ ಹಾಕಲು ಯಾಕೆ ಭಯ. ಸರ್ಕಾರ ಸದನ ಸಮಿತಿ ರಚನೆ ಮಾಡಲಿ ಎಂದರು.
ಓದಿ: ಸಚಿವ ಕೆ.ಸುಧಾಕರ್ ಮನೆ ಮುಂದೆಯೇ ಸಿಬ್ಬಂದಿ ನಡುವೆ ಮಾರಾಮಾರಿ: ವಿಡಿಯೋ
ಬಳಿಕ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಮಾತನಾಡಿ, ನಿನ್ನೆಯಿಂದ ಸದನದಲ್ಲಿ ಚರ್ಚೆ ಆಗಿದೆ. ಸಮಸ್ಯೆ ಪರಿಹಾರಕ್ಕೆ ಸದನ ಸಮಿತಿ ಮಾಡೋದು ಉತ್ತಮ. 700 ಕಾಲೇಜುಗಳ ಅಕ್ರಮದ ಬಗ್ಗೆ ತನಿಖೆ ಆಗಬೇಕು. ಇದೊಂದು ಮಹತ್ವದ ವಿಷಯವಾಗಿದೆ. ಹೀಗಾಗಿ ಸದನ ಸಮಿತಿ ರಚನೆ ಮಾಡಬೇಕು ಎಂದು ಒತ್ತಾಯಿಸಿದರು.
ಸದನದ ಬಾವಿಯಲ್ಲಿ ಜೆಡಿಎಸ್ ಸದಸ್ಯರ ಧರಣಿ ಮಂದುವರಿದ ಹಿನ್ನೆಲೆಯಲ್ಲಿ ಪರಿಷತ್ ಕಲಾಪವನ್ನು 10 ನಿಮಿಷ ಮುಂದೂಡಿಕೆ ಮಾಡಿದ ಸಭಾಪತಿ ಬಸವರಾಜ ಹೊರಟ್ಟಿ, ತಮ್ಮ ಕಚೇರಿಯಲ್ಲಿ ಜೆಡಿಎಸ್, ಬಿಜೆಪಿ, ಕಾಂಗ್ರೆಸ್ ಸದಸ್ಯರನ್ನು ಮಾತುಕತೆಗೆ ಕರೆದು ಸಂಧಾನ ಪ್ರಕ್ರಿಯೆ ನಡೆಸುತ್ತಿದ್ದಾರೆ.