ಬೆಂಗಳೂರು: ರಾಜೀನಾಮೆ ನೀಡಿರುವ ಅತೃಪ್ತ ಶಾಸಕರನ್ನು ಪ್ರತ್ಯೇಕವಾಗಿ ಕರೆದು ಮಾತನಾಡಿ ನಂತರ ನಿರ್ಧಾರ ಕೈಗೊಳ್ಳುವ ಸ್ಪೀಕರ್ ನಡೆ ಇದೀಗ ಬಿಜೆಪಿ ನಾಯಕರನ್ನು ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದೆ. ಹಾಗಾಗಿ ಕಾನೂನು ರೀತಿ ಇರುವ ಎಲ್ಲ ಅವಕಾಶ ಬಳಸಿಕೊಳ್ಳಲು ಬಿಜೆಪಿ ನಾಯಕರು ಮುಂದಾಗಿದ್ದಾರೆ.
ಹೌದು, ಯಡಿಯೂರಪ್ಪ ನಿವಾಸದಲ್ಲಿ ಮತ್ತೆ ರಾಜಕೀಯ ಚಟುವಟಿಕೆ ಗರಿಗೆದರಿದೆ. ಸ್ಪೀಕರ್ ನಡೆ ಬಗ್ಗೆ ಎರಡು ದಿನಗಳಿಂದ ಕಾದು ಕುಳಿತಿದ್ದ ಬಿಜೆಪಿ ನಾಯಕರು ರಮೇಶ್ ಕುಮಾರ್ ಅವರ ಇಂದಿನ ನಿರ್ಧಾರದಿಂದ ವಿಚಲಿತರಾಗಿದ್ದಾರೆ. ಸತತ ಸಭೆಗಳನ್ನು ನಡೆಸಿ ಸಮಾಲೋಚನೆ ನಡೆಸುತ್ತಿದ್ದಾರೆ.
ಸ್ಪೀಕರ್ ನಿರ್ಣಯ ಬರುತ್ತಿದ್ದಂತೆ ಡಾಲರ್ಸ್ ಕಾಲೋನಿಯಲ್ಲಿರುವ ನಿವಾಸಕ್ಕೆ ಪ್ರತಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ ತಮ್ಮ ಆಪ್ತರನ್ನು ಕರೆಸಿಕೊಂಡರು. ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ, ಅರವಿಂದ ಲಿಂಬಾವಳಿ, ಬಿ ಶ್ರೀರಾಮುಲು, ಎ.ಎಸ್. ಪಾಟೀಲ್ ನಡಹಳ್ಳಿ, ಸುನೀಲ್ ಕುಮಾರ್, ಹರತಾಳ ಹಾಲಪ್ಪ, ಸಿ.ಪಿ ಯೋಗೀಶ್ವರ್, ವಿ.ಸೋಮಣ್ಣ ಬಿಎಸ್ವೈ ನಿವಾಸಕ್ಕೆ ದೌಡಾಯಿಸಿದ್ದಾರೆ. ಆಪ್ತರೊಂದಿಗೆ ಮುಂದಿನ ನಡೆ ಬಗ್ಗೆ ಬಿಎಸ್ವೈ ಮಹತ್ವದ ಮಾತುಕತೆ ನಡೆಸಿದ್ದಾರೆ.
ಸ್ಪೀಕರ್ ರಮೇಶ್ ಕುಮಾರ್ ಪ್ರತಿವೋರ್ವ ಶಾಸಕರನ್ನೂ ವೈಯಕ್ತಿವಾಗಿ ಕರೆದು ಮಾತನಾಡುತ್ತೇನೆ ಎಂದಿರುವುದು ಬಿಜೆಪಿ ನಾಯಕರನ್ನು ಚಿಂತೆಗೀಡು ಮಾಡಿದೆ. ಶಾಸಕರನ್ನು ಬೆಂಗಳೂರಿಗೆ ಕರೆತಂದರೆ ಇಲ್ಲಿ ಒಟ್ಟಾಗಿಡಲು ಸಾಧ್ಯವಾ, ಮತ್ತೆ ಅವರು ನಿರ್ಧಾರ ಬದಲಿಸಿದರೆ ಎನ್ನುವ ಸಂಕಷ್ಟಕ್ಕೆ ಬಿಎಸ್ವೈ ಸಿಲುಕಿದ್ದಾರೆ. ಈ ಎಲ್ಲಾ ವಿಷಯದ ಕುರಿತು ಆಪ್ತರೊಂದಿಗೆ ಯಡಿಯೂರಪ್ಪ ಸಮಾಲೋಚನೆ ನಡೆಸಿದ್ದಾರೆ.
ಸ್ಪೀಕರ್ ನಡೆ ವಿರುದ್ಧ ಕಾನೂನು ವ್ಯಾಪ್ತಿಯಲ್ಲಿ ಏನು ಮಾಡಬಹುದು. ಮುಂಬೈನಿಂದ ಬರುವ ಶಾಸಕರನ್ನು ಎಲ್ಲಿರಿಸಬೇಕು. ರಾಜಭವನದ ಕದ ತಟ್ಟಬೇಕಾ, ಸ್ಪೀಕರ್ ವಿರುದ್ಧವೇ ಅವಿಶ್ವಾಸ ನಿರ್ಣಯ ಮಂಡಿಸಲು 14 ದಿನದ ಮೊದಲೇ ನೋಟಿಸ್ ನೀಡಬೇಕು. ಈಗ ಜು. 12 ಕ್ಕೆ ಅಧಿವೇಶನ ಕರೆಯಲಾಗಿದೆ. ಹೀಗಾಗಿ ಸ್ಪೀಕರ್ ವಿಚಾರದಲ್ಲಿ ಏನು ಮಾಡಬಹುದು ಎನ್ನುವ ಕುರಿತು ಆಪ್ತರೊಂದಿಗೆ ಮಹತ್ವದ ಮಾತುಕತೆಯನ್ನು ಯಡಿಯೂರಪ್ಪ ಸಮಾಲೋಚನೆ ನಡೆಸಿದ್ದಾರೆ.