ಬೆಂಗಳೂರು: ಸ್ಥಳೀಯ ಸಂಸ್ಥೆಗಳಲ್ಲೂ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮುಂದುವರಿಕೆಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಕಾಂಗ್ರೆಸ್ ಮುಖಂಡರಿಗೆ ಸೂಚನೆ ನೀಡಿದ್ದಾರೆ.
ಎಲ್ಲೆಲ್ಲಿ ಅತಂತ್ರ ಸ್ಥಿತಿ ಇದೆಯೋ ಅಲ್ಲೆಲ್ಲ ಮೈತ್ರಿ ಮಾಡಿಕೊಳ್ಳಿ. ಕಡಿಮೆ ಸ್ಥಾನಗಳು ಇರುವ ಸ್ಥಳೀಯ ಸಂಸ್ಥೆಗಳಲ್ಲಿ ಜೆಡಿಎಸ್ ಹಾಗೂ ಪಕ್ಷೇತರ ಅಭ್ಯರ್ಥಿಗಳ ಸಹಕಾರದಿಂದ ಅಧಿಕಾರವನ್ನು ಸ್ಥಾಪಿಸಿ. ಕೋಮುವಾದಿ ಪಕ್ಷ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕೆಂದು ಸೂಚನೆ ನೀಡಿದ್ದಾರೆ. ವಿಶೇಷ ಅಂದರೆ ಒಟ್ಟಾರೆ ಅತಂತ್ರ ಸ್ಥಿತಿ ನಿರ್ಮಾಣವಾಗಿರುವ ಕಡೆಗಳಲ್ಲಿ ಜೆಡಿಎಸ್ ಜತೆ ಕೈಜೋಡಿಸುವುದರಿಂದ ಕಾಂಗ್ರೆಸ್‍ಗೆ ಅನುಕೂಲ ಹೆಚ್ಚಾಗಲಿದೆ. ಅತಂತ್ರ ಸ್ಥಿತಿ ಇರುವ ಒಟ್ಟು 22 ಸ್ಥಾನಗಳ ಪೈಕಿ 13 ಕಡೆ ಕಾಂಗ್ರೆಸ್‍ಗೆ, 9 ಕಡೆ ಜೆಡಿಎಸ್‍ಗೆ ಅಧಿಕಾರ ಹಿಡಿಯುವ ಅವಕಾಶ ಇದೆ.
ಬಿಜೆಪಿಗೆ ಅಧಿಕಾರ ಬೇಡ:
ನಮಗೆ ಬಹುಮತ ಇರುವ ಕಡೆಗಳಲ್ಲಿ ಜೆಡಿಎಸ್ ಸಹಕಾರದೊಂದಿಗೆ ಅಧಿಕಾರ ಸ್ಥಾಪಿಸಿ. ಜೆಡಿಎಸ್‍ಗೆ ಬಹುಮತ ಇರುವ ಕಡೆಗಳಲ್ಲಿ ಅವರಿಗೆ ಸಹಕರಿಸಿ. ನಮ್ಮ ಎರಡೂ ಪಕ್ಷಗಳ ಹೊರತಾಗಿ ಸಂಖ್ಯಾಬಲ ಕಡಿಮೆ ಇರುವ ಕಡೆಗಳಲ್ಲಿ ಪಕ್ಷೇತರರ ಬೆಂಬಲ ಪಡೆಯಿರಿ. ಯಾವುದೇ ಕಾರಣಕ್ಕೂ ಬಿಜೆಪಿ ಜೊತೆ ಹೊಂದಾಣಿಕೆಗೆ ಅವಕಾಶ ನೀಡಬೇಡಿ ಎಂದಿದ್ದಾರೆ. ತೀರಾ ಬಿಕ್ಕಟ್ಟಿನ ಸಂದರ್ಭದಲ್ಲಿ ಕೆಪಿಸಿಸಿ ಗಮನಕ್ಕೆ ತಂದು ಸಮಸ್ಯೆಗಳನ್ನು ಪರಿಹರಿಸಿಕೊಂಡು ಅಧಿಕಾರವನ್ನು ಸ್ಥಾಪಿಸಿ. ಎಲ್ಲ ಸ್ಥಳೀಯ ಸಂಸ್ಥೆಗಳ ಕಾಂಗ್ರೆಸ್ ವಿಜೇತರು, ಮುಖಂಡರಿಗೆ ದಿನೇಶ್ ಗುಂಡೂರಾವ್ ಸೂಚನೆ ರವಾನಿಸಿದ್ದಾರೆ.
ನಗರಸಭೆ
ಸದ್ಯ ರಾಜ್ಯದಲ್ಲಿ 7 ನಗರಸಭೆಗಳ ಪೈಕಿ ಎರಡು ಕಡೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಉಳಿದ ಐದು ಕಡೆ ಅತಂತ್ರವಾಗಿದೆ. ಬಿಜೆಪಿ, ಜೆಡಿಎಸ್ ಹಾಗೂ ಪಕ್ಷೇತರರು ಎಲ್ಲಿಯೂ ಅಧಿಕಾರಕ್ಕೆ ಬಂದಿಲ್ಲ. ಏಳು ನಗರಸಭೆಗಳ ಪೈಕಿ ಬಸವಕಲ್ಯಾಣ ಹಾಗೂ ಶಹಾಪುರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಇಲ್ಲಿ ತಲಾ 19 ಮತ್ತು 16 ಸ್ಥಾನ ಗೆದ್ದು ಅಧಿಕಾರ ಹಿಡಿದಿದೆ. ಉಳಿದಂತೆ ಅತಂತ್ರ ಸ್ಥಿತಿ ಇರುವ ಹಿರಿಯೂರಿನಲ್ಲಿ ಕಾಂಗ್ರೆಸ್ 13 ಸ್ಥಾನ ಗೆದ್ದಿದ್ದು, ಅಧಿಕಾರ ಹಿಡಿಯಲು ಮೂರು ಸ್ಥಾನ ಗಳಿಸಿರುವ ಜೆಡಿಎಸ್ ಸಹಕಾರ ಪಡೆಯಬೇಕು. ಇಲ್ಲಿ ಬಿಜೆಪಿ 3 ಮತ್ತು ಪಕ್ಷೇತರರು 9 ಸ್ಥಾನ ಗೆದ್ದಿದ್ದಾರೆ.
ಹರಿಹರದಲ್ಲಿ ಕಾಂಗ್ರೆಸ್ 10 ಹಾಗೂ ಜೆಡಿಎಸ್ 14 ಸ್ಥಾನ ಗೆದ್ದಿವೆ. ಇಲ್ಲಿ ಜೆಡಿಎಸ್‍ಗೆ ಕಾಂಗ್ರೆಸ್ ಬೆಂಬಲ ಕೊಡಬೇಕಿದೆ. ಬಿಜೆಪಿ 5 ಸ್ಥಾನ ಗೆದ್ದಿದ್ದರೆ ಇತರರು 2 ಸ್ಥಾನ ಗೆದ್ದಿದ್ದಾರೆ. ಶಿಡ್ಲಘಟ್ಟದಲ್ಲಿ ಕಾಂಗ್ರೆಸ್ 13 ಹಾಗೂ ಜೆಡಿಎಸ್ 10 ಸ್ಥಾನ ಗೆದ್ದಿದ್ದು, ಮೈತ್ರಿ ಅಧಿಕಾರಕ್ಕೆ ಬರುವುದು ಸುಲಭ. ಉಳಿದಂತೆ ಬಿಜೆಪಿ 2 ಮತ್ತು ಪಕ್ಷೇತರರು 66 ಸ್ಥಾನ ಗೆದ್ದಿದ್ದಾರೆ. ತಿಪಟೂರಿನಲ್ಲಿ ಮೈತ್ರಿಗೆ ಪಕ್ಷೇತರರ ಸಹಕಾರ ಅತ್ಯಗತ್ಯ. ಅತಿದೊಡ್ಡ ಪಕ್ಷವಾಗಿ ಬಿಜೆಪಿ ಇದ್ದು 11 ಸ್ಥಾನ ಗೆದ್ದಿದೆ. ಕಾಂಗ್ರೆಸ್ 9 ಮತ್ತು ಜೆಡಿಎಸ್ 5 ಸ್ಥಾನ ಗಳಿಸಿವೆ. ಪಕ್ಷೇತರರು 6 ಮಂದಿ ಇದ್ದಾರೆ.
ನಂಜನಗೂಡಿನಲ್ಲಿ ಬಿಜೆಪಿಗೆ ಅವಕಾಶ ಇದೆ. ಇಲ್ಲಿ ಅವರು 15 ಸ್ಥಾನ ಗಳಿಸಿದ್ದಾರೆ. ಕಾಂಗ್ರೆಸ್ 10 ಜೆಡಿಎಸ್ ಹಾಗೂ ಪಕ್ಷೇತರರು ತಲಾ 3 ಸ್ಥಾನ ಗಳಿಸಿದ್ದಾರೆ. ಇಲ್ಲಿ ಕೂಡ ಪಕ್ಷೇತರರೇ ನಿರ್ಣಾಯಕರು. ಈ ಹಿನ್ನೆಲೆ ಅತಂತ್ರವಾಗಿರುವ ಐದು ನಗರಸಭೆಗಳ ಪೈಕಿ 4 ಕಡೆ ಅಧಿಕಾರ ಹಿಡಿಯುವ ಅವಕಾಶ ಮೈತ್ರಿಗೆ ಇದೆ. ಸ್ವಲ್ಪ ಶ್ರಮ ಪಟ್ಟರೆ ನಂಜನಗೂಡನ್ನೂ ಬುಟ್ಟಿಗೆ ಹಾಕಿಕೊಳ್ಳಬಹುದು.
ಪುರಸಭೆ 30
ಪುರಸಭೆ ಪೈಕಿ 13 ಕಡೆ ಕಾಂಗ್ರೆಸ್, 5 ಕಡೆ ಬಿಜೆಪಿ ಹಾಗೂ 1 ಕಡೆ ಜೆಡಿಎಸ್ ಅಧಿಕಾರ ಸಾಧಿಸಿದ್ದರೆ, 2 ಕಡೆ ಪಕ್ಷೇತರರು ಅಧಿಕಾರ ಸ್ಥಾಪಿಸಿದ್ದು, 9 ಕಡೆ ಅತಂತ್ರ ಸ್ಥಿತಿ ಇದೆ. ಶ್ರೀನಿವಾಸಪುರದಲ್ಲಿ ಜೆಡಿಎಸ್ 11 ಮತ್ತು ಕಾಂಗ್ರೆಸ್ 8 ಕಡೆ ಗೆದ್ದಿದೆ. ಬಿಜೆಪಿ ಖಾತೆ ತೆರೆದಿಲ್ಲ. ಮಾಲೂರಿನಲ್ಲಿ ಸ್ಪರ್ಧೆ ಇದ್ದು 27ರ ಪೈಕಿ 10 ಬಿಜೆಪಿ, 11 ಕಾಂಗ್ರೆಸ್, ಜೆಡಿಎಸ್ 1 ಮತ್ತು ಪಕ್ಷೇತರರು 5 ಮಂದಿ ಗೆದ್ದಿದ್ದಾರೆ. ಬನ್ನೂರಿನ 23 ಸ್ಥಾನಗಳ ಪೈಕಿ ಜೆಡಿಎಸ್ 12 ಮತ್ತು ಕಾಂಗ್ರೆಸ್ 7 ಕಡೆ ಗೆದ್ದಿವೆ. ಬಿಜೆಪಿ, ಪಕ್ಷೇತರರು ತಲಾ 2 ಸ್ಥಾನ ಗೆದ್ದಿವೆ.
ಕಡೂರಿನ 23 ಸ್ಥಾನಗಳ ಪೈಕಿ 7 ಕಡೆ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ತಲಾ 6 ಮತ್ತು 4 ಮಂದಿ ಪಕ್ಷೇತರರು ಗೆದ್ದಿದ್ದಾರೆ. ಮಳವಳ್ಳಿಯಲ್ಲಿ ಜೆಡಿಎಸ್ 9ಸ್ಥಾನ ಗೆದ್ದಿದೆ. ಕಾಂಗ್ರೆಸ್ 5, ಪಕ್ಷೇತರರು 7 ಮತ್ತು ಬಿಜೆಪಿ 2 ಕಡೆ ಗೆದ್ದಿವೆ. ಕೆ.ಆರ್. ಪೇಟೆಯಲ್ಲಿ 23 ರಲ್ಲಿ 11 ಜೆಡಿಎಸ್, 10 ಕಾಂಗ್ರೆಸ್ ಗೆದ್ದಿದ್ದು, ಬಿಜೆಪಿ, ಜೆಡಿಎಸ್ ತಲಾ ಒಂದು ಸ್ಥಾನ ಗೆದ್ದಿವೆ. ಇಂಡಿಯಲ್ಲಿ 23 ಸ್ಥಾನ ಪೈಕಿ 11 ಬಿಜೆಪಿ, 8 ಕಾಂಗ್ರೆಸ್, ತಲಾ ಎರಡು ಸ್ಥಾನ ಜೆಡಿಎಸ್, ಪಕ್ಷೇತರರು ಗೆದ್ದಿದ್ದಾರೆ. ನವಲಗುಂದದಲ್ಲಿ ಜೆಡಿಎಸ್ 9, ಕಾಂಗ್ರೆಸ್ 7 ಮತ್ತು ಬಿಜೆಪಿ 6 ಕಡೆ, ಪಕ್ಷೇತರರು 1 ಕಡೆ ಗೆದ್ದಿದ್ದಾರೆ. ಶಿಗ್ಗಾವಿಯಲ್ಲಿ ಬಿಜೆಪಿಗೆ ಅವಕಾಶ ಇದ್ದು, 9 ಕಡೆ ಬಿಜೆಪಿ, 6 ಕಾಂಗ್ರೆಸ್ ಗೆದ್ದಿದ್ದು, ಪಕ್ಷೇತರರು 8 ಕಡೆ ಗೆಲುವು ಸಾಧಿಸಿದ್ದಾರೆ.
ಪಟ್ಟಣ ಪಂಚಾಯಿತಿ 19
ಪಟ್ಟಣ ಪಂಚಾಯಿತಿ ಪೈಕಿ 8 ಕಡೆ ಬಿಜೆಪಿ, 3 ಕಡೆ ಕಾಂಗ್ರೆಸ್ ಅಧಿಕಾರ ಹಿಡಿದಿದ್ದರೆ, 8 ಕಡೆ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಇದರಲ್ಲಿ ಮೊಳಕಾಲ್ಮೂರಿನಲ್ಲಿ 16 ಸ್ಥಾನ ಪೈಕಿ 8 ಬಿಜೆಪಿ, 6 ಕಾಂಗ್ರೆಸ್ ಎರಡು ಕಡೆ ಇತರರು ಗೆದ್ದಿದ್ದಾರೆ. ಹೊಳಲ್ಕೆರೆಯಲ್ಲಿ ಬಿಜೆಪಿಗೆ ಅವಕಾಶ ಇದೆ. 16 ಸ್ಥಾನ ಪೈಕಿ 6 ಕಡೆ ಬಿಜೆಪಿ, 3 ಕಡೆ ಕಾಂಗ್ರೆಸ್ ಹಾಗೂ 7 ಕಡೆ ಪಕ್ಷೇತರರು ಗೆದ್ದಿದ್ದಾರೆ. ತುರುವೇಕೆರೆಯ 14 ಸ್ಥಾನ ಪೈಕಿ 6 ಬಿಜೆಪಿ, 2 ಕಾಂಗ್ರೆಸ್, 5 ಜೆಡಿಎಸ್ ಹಾಗೂ 1 ಪಕ್ಷೇತರರು ಗೆದ್ದಿದ್ದಾರೆ.
ಮೂಲ್ಕಿಯ 18 ಸ್ಥಾನಗಳ ಪೈಕಿ 9 ಕಾಂಗ್ರೆಸ್, 8 ಬಿಜೆಪಿ, 1 ಕಡೆ ಜೆಡಿಎಸ್ ಗೆದ್ದಿದೆ. ಆಲೂರಿನ 11 ಸ್ಥಾನಗಳ ಪೈಕಿ 5 ಜೆಡಿಎಸ್ 2 ಬಿಜೆಪಿ, 1 ಕಾಂಗ್ರೆಸ್ ಹಾಗೂ 2 ಕಡೆ ಪಕ್ಷೇತರರು ಗೆದ್ದಿದ್ದಾರೆ. ಅರಕಲಗೂಡಿನಲ್ಲಿ 17 ಸ್ಥಾನಗಳ ಪೈಕಿ ತಲಾ 6 ಕಡೆ ಬಿಜೆಪಿ, ಜೆಡಿಎಸ್ ಹಾಗೂ 5 ಕಡೆ ಕಾಂಗ್ರೆಸ್ ಗೆದ್ದಿದೆ. ಹನೂರಿನ 13 ಸ್ಥಾನ ಪೈಕಿ 6 ಕಡೆ ಜೆಡಿಎಸ್, 4 ಕಡೆ ಕಾಂಗ್ರೆಸ್, 3 ಕಡೆ ಬಿಜೆಪಿ ಗೆದ್ದಿದೆ. ಅಲ್ನಾವರದಲ್ಲಿ 18 ಸ್ಥಾನಗಳ ಪೈಕಿ 8 ಕಡೆ ಕಾಂಗ್ರೆಸ್, 6 ಕಡೆ ಜೆಡಿಎಸ್, ಬಿಜೆಪಿ ಮೂರು ಹಾಗೂ ಪಕ್ಷೇತರರು ಒಂದು ಕಡೆ ಗೆದ್ದಿದ್ದಾರೆ.