ಬೆಂಗಳೂರು: ದ್ವಿತೀಯ ಪ್ರಾಶಸ್ತ್ಯದ ಮತ ಎಣಿಕೆ ನಡೆಯುತ್ತಿರುವ ವಿಧಾನಪರಿಷತ್ ಆಗ್ನೇಯ ಪದವೀಧರ ಕ್ಷೇತ್ರದ ಅಂತಿಮ ಫಲಿತಾಂಶ ಸಾಯಂಕಾಲದ ವೇಳೆಗೆ ಪ್ರಕಟವಾಗುವ ಸಾಧ್ಯತೆ ಇದೆ.
ಪ್ರಥಮ ಪ್ರಾಶಸ್ತ್ಯದ ಮತ ಎಣಿಕೆಯಲ್ಲಿ 5071 ಮತಗಳ ಮುನ್ನಡೆ ಗಳಿಸಿದ್ದ ಬಿಜೆಪಿ ಅಭ್ಯರ್ಥಿ ಚಿದಾನಂದಗೌಡ ಗೆಲುವಿಗೆ ಅರ್ಧದಷ್ಟು ಬಹುಮತ ಪಡೆಯುವಲ್ಲಿ ಸಫಲರಾದರು. ಈ ಹಿನ್ನೆಲೆ ದ್ವಿತೀಯ ಪ್ರಾಶಸ್ತ್ಯದ ಮತಗಳನ್ನು ಕಾರ್ಯ ಆರಂಭವಾಗಿದೆ. ಬೆಳಗ್ಗೆ 8 ಗಂಟೆಗೆ ಆರಂಭವಾಗಿರುವ ದ್ವಿತೀಯ ಪ್ರಾಶಸ್ತ್ಯದ ಮತ ಎಣಿಕೆ ಈಗಲೂ ಪ್ರಗತಿಯಲ್ಲಿದ್ದು, ಬಹುತೇಕ ಸಂಜೆ 6 ಗಂಟೆ ಹೊತ್ತಿಗೆ ಫಲಿತಾಂಶ ಪ್ರಕಟವಾಗುವ ನಿರೀಕ್ಷೆ ಇದೆ.
ಬಿಜೆಪಿ ಅಭ್ಯರ್ಥಿ ಚಿದಾನಂದ ಗೌಡ ಹಾಗೂ ಬಂಡಾಯ ಅಭ್ಯರ್ಥಿ ಡಿಟಿ ಶ್ರೀನಿವಾಸ್ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿದ್ದು, ಇಬ್ಬರು ಅಭ್ಯರ್ಥಿಗಳು ಸದ್ಯ ಮತ ಎಣಿಕೆ ಕೇಂದ್ರದಲ್ಲಿ ಇದ್ದಾರೆ. ದ್ವಿತೀಯ ಪ್ರಾಶಸ್ತ್ಯದ ಮತ ಎಣಿಕೆ ಸಂದರ್ಭ ಅತ್ಯಂತ ಕಡಿಮೆ ಮತ ಪಡೆದ ಅಭ್ಯರ್ಥಿಗಳನ್ನು ಕಣದಿಂದ ತೆಗೆದುಹಾಕುವ ಮೂಲಕ ಅಂತಿಮವಾಗಿ ಇಬ್ಬರು ಅಭ್ಯರ್ಥಿಗಳನ್ನು ಉಳಿಸಿ ದ್ವಿತೀಯ ಪ್ರಾಶಸ್ತ್ಯದಲ್ಲಿ ಅತಿಹೆಚ್ಚು ಗಳಿಸಿದ ಅಭ್ಯರ್ಥಿಯನ್ನು ವಿಜೇತ ಎಂದು ಘೋಷಿಸಲಾಗುತ್ತದೆ.
ಸದ್ಯ ಗೆಲುವಿಗೆ ಬಿಜೆಪಿ ಅಭ್ಯರ್ಥಿ ಚಿದಾನಂದ ಗೌಡ ಅವರಿಗೆ 12 ಸಾವಿರ ಮತಗಳ ಹಾಗೂ ಬಂಡಾಯ ಅಭ್ಯರ್ಥಿಗೆ ಗೆಲ್ಲಲು 16 ಸಾವಿರ ಮತಗಳ ಅಗತ್ಯ ಇದೆ. ಕಡಿಮೆ ಮತ ಪಡೆದ ಅಭ್ಯರ್ಥಿಗಳಿಗೆ ಪ್ರಥಮ ಪ್ರಾಶಸ್ತ್ಯ ನೀಡಿದ ಮತದಾರರಲ್ಲಿ ಈ ಇಬ್ಬರು ಅಭ್ಯರ್ಥಿಗಳಿಗೆ ದ್ವಿತೀಯ ಪ್ರಾಶಸ್ತ್ಯ ದಲ್ಲಿ ಮತ ನೀಡಿದವರ ಎಣಿಕೆ ನಡೆಯುತ್ತಿದೆ. ಸದ್ಯ ಎಲ್ಲ ಪಕ್ಷೇತರರ ದ್ವಿತೀಯ ಪ್ರಾಶಸ್ತ್ಯದ ಮತಗಳ ಎಣಿಕೆ ಮುಕ್ತಾಯವಾಗಿದ್ದು, ಸದ್ಯ ಜೆಡಿಎಸ್ ಅಭ್ಯರ್ಥಿಯಾಗಿರುವ ರಮೇಶ್ ಬಾಬು ಅವರು ಪಡೆದಿರುವ ದ್ವಿತೀಯ ಪ್ರಾಶಸ್ತ್ಯದ ಮತಗಳ ಎಣಿಕೆ ನಡೆಯುತ್ತಿದೆ.
ಸದ್ಯ ನಡೆಯುತ್ತಿರುವ ಮತ ಎಣಿಕೆಯಲ್ಲಿ ತಾವು ಮುಂದಿರುವುದಾಗಿ ಬಿಜೆಪಿ ಬಂಡಾಯ ಅಭ್ಯರ್ಥಿ ಶ್ರೀನಿವಾಸ್ ತಿಳಿಸಿದ್ದಾರೆ.
ಸಾಕಷ್ಟು ಕುತೂಹಲ ಕೆರಳಿಸಿರುವ ವಿಧಾನಪರಿಷತ್ ಆಗ್ನೇಯ ಪದವೀಧರ ಕ್ಷೇತ್ರದ ಮತ ಎಣಿಕೆ ಎರಡನೆ ದಿನ ಮಧ್ಯಾಹ್ನ ತಲುಪಿದರು ಸ್ಪಷ್ಟ ಚಿತ್ರಣ ಸಿಗುತ್ತಿಲ್ಲ. ಸಂಜೆ ಹೊತ್ತಿಗೆ ಅಧಿಕೃತ ಫಲಿತಾಂಶ ಪ್ರಕಟವಾಗಲಿದೆ ಎಂದು ತಿಳಿದು ಬಂದಿದೆ.