ಬೆಂಗಳೂರು : ಕೃಷಿ ಜಮೀನಿನ ಅಭಿವೃದ್ಧಿಗೆ ಸುಮಾರು 3 ಕೋಟಿ ಸಾಲ ಪಡೆದಿದ್ದ ಗ್ರಾಹಕರೊಬ್ಬರಿಂದ 38 ಲಕ್ಷ ರೂ.ಗಳನ್ನು ಹೆಚ್ಚುವರಿ ಪಡೆದಿದ್ದ ಕೋ ಆಪರೇಟಿವ್ ಬ್ಯಾಂಕ್‌ಗೆ ಬಡ್ಡಿಯೊಂದಿಗೆ ಹೆಚ್ಚುವರಿಯಾಗಿ ಪಡೆದ ಮೊತ್ತವನ್ನು ಹಿಂದಿರುಗಿಸಲು ರಾಜ್ಯ ಗ್ರಾಹಕರ ಹಕ್ಕುಗಳ ವೇದಿಕೆ ಸೂಚನೆ ನೀಡಿದೆ.
ಗೋಕಾಕ್ ತಾಲೂಕಿನ ಕಮಲದಿನ್ನಿ ಗ್ರಾಮದ ರೈತ ಭೀಮಪ್ಪ ಹನುಮಂತಪ್ಪ ರೆಡ್ಡಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ರಾಜ್ಯ ಗ್ರಾಹಕರ ಹಕ್ಕುಗಳ ವೇದಿಕೆಯ ನ್ಯಾಯಾಂಗ ಸದಸ್ಯರಾದ ರವಿಶಂಕರ್ ಮತ್ತು ಮಹಿಳಾ ಸದಸ್ಯರಾದ ಸುನೀತಾ ಸಿ. ಬಾಗೇವಾಡಿ ಅವರಿದ್ದ ವಿಭಾಗೀಯ ಪೀಠ ಸೂಚನೆ ನೀಡಿದೆ. ಜತೆಗೆ, ಹೆಚ್ಚುವರಿಯಾಗಿ ಪಡೆದಿರುವ ಮೊತ್ತವನ್ನು ಗ್ರಾಹಕರಿಗೆ ವಾಪಸ್ ಹಿಂದಿರುಗಿಸಬೇಕು ಎಂದು ನಿರ್ದೇಶನ ನೀಡಿದೆ.
ಜತೆಗೆ, ಕಾನೂನು ಹೋರಾಟದ ಫಲವಾಗಿ 10 ಸಾವಿರ ಪಾವತಿ ಮಾಡಬೇಕು ಮತ್ತು ಪಡೆದಿರುವ ಹೆಚ್ಚುವರಿ ಮೊತ್ತ 38,18,819 ಅನ್ನು ಶೇ. 6ರ ಬಡ್ಡಿಯೊಂದಿಗೆ ನೀಡಬೇಕು. 30 ದಿನಗಳ ಒಳಗಾಗಿ ಈ ಆದೇಶ ಪಾಲಿಸಬೇಕು ಎಂದು ಇತ್ತೀಚೆಗೆ ನೀಡಿದ ಆದೇಶದಲ್ಲಿ ತಿಳಿಸಿದೆ. ಅಲ್ಲದೆ, ಈ ಆದೇಶ ಪಾಲಿಸುವಲ್ಲಿ ವಿಫಲವಾದಲ್ಲಿ ಬಡ್ಡಿ ದರವನ್ನು ಶೇ 9ರಂತೆ ಪಾವತಿಸಬೇಕಾಗುತ್ತದೆ ಎಂದು ಶ್ರೀಮಾತಾ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ಅಧ್ಯಕ್ಷರು, ಜನರಲ್ ಮ್ಯಾನೇಜರ್ ಮತ್ತು ಮ್ಯಾನೇಜರ್ ಅವರಿಗೆ ವೇದಿಕೆ ನಿರ್ದೇಶನ ನೀಡಿದೆ.
ಇದನ್ನೂ ಓದಿ : ಇಂದು ಮಧ್ಯರಾತ್ರಿ ವೇಳೆಗೆ ಕಾಂಗ್ರೆಸ್ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ?
ಪ್ರಕರಣದ ಹಿನ್ನೆಲೆ ಏನು ?: ಕೃಷಿ ಜಮೀನಿನ ಅಭಿವೃದ್ಧಿಗಾಗಿ ಬೆಳಗಾವಿಯ ನ್ಯೂ ಗೂಡ್ಸ್ ಶೆಡ್ ರಸ್ತೆಯಲ್ಲಿರುವ ಶ್ರೀಮಾತಾ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಯಿಂದ ಸ್ವತ್ತನ್ನು ಒತ್ತೆ ಇರಿಸಿದ್ದ ಭೀಮಪ್ಪ ಹನುಮಂತಪ್ಪ ರೆಡ್ಡಿ ಮೂರು ಕೋಟಿ ರೂಪಾಯಿ ಸಾಲವನ್ನು ಶೇ. 14 ರ ಬಡ್ಡಿ ದರದೊಂದಿಗೆ ಪಡೆದಿದ್ದರು. ಸಾಲ ಮರುಪಾವತಿಗೆ 60 ತಿಂಗಳ ವಾಯಿದೆ ನೀಡಲಾಗಿತ್ತು. ಏತನ್ಮಧ್ಯೆ ಸಾಲದ ಮೊತ್ತವನ್ನು ಬಡ್ಡಿ ಸಮೇತ ಹಿಂದಿರುಗಿಸುವಾಗ ಸೊಸೈಟಿಯವರು 38,18,819ರಷ್ಟು ಹೆಚ್ಚುವರಿ ಹಣವನ್ನು ಪಡೆದಿದ್ದರು.
ಇದನ್ನು ಪ್ರಶ್ನಿಸಿ ಭೀಮಪ್ಪ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾರ್ಗದರ್ಶಿ ಸೂತ್ರಗಳಿಗೆ ವಿರುದ್ಧವಾಗಿ ಸೊಸೈಟಿಯವರು ನನ್ನಿಂದ ಬಡ್ಡಿ ರೂಪದಲ್ಲಿ ಹೆಚ್ಚುವರಿಯಾಗಿ 38 ಲಕ್ಷ ಮೊತ್ತವನ್ನು ಪಡೆದಿದ್ದಾರೆ ಎಂದು ಗ್ರಾಹಕರ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು.
ಇದನ್ನೂ ಓದಿ : ಕೇಂದ್ರ ಬಿಜೆಪಿ ಸರ್ಕಾರವು 'ಶಿಂಧೆ ಸೂತ್ರದ ಗೊಂಬೆ'ಯಾಗಿ ಕರ್ನಾಟಕವನ್ನು ಬಲಿ ಕೊಡಲು ಹೊರಟಿದೆಯಾ? : ಹೆಚ್ಡಿಕೆ ಕಿಡಿ
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಪೀಠ, ‘ಗ್ರಾಹಕರಿಂದ ಹೆಚ್ಚುವರಿ ಹಣ ಪಡೆಯುವುದು ಸಾಲದ ಒಪ್ಪಂದ ಪತ್ರದ ಪ್ರಕಾರ ಮತ್ತು ಬ್ಯಾಂಕಿಂಗ್ ಕಾನೂನು ಸಿದ್ಧಾಂತಕ್ಕೆ ವ್ಯತಿರಿಕ್ತವಾಗಿರುತ್ತದೆ. ಇದು ಹಣಕಾಸಿನ ಸಂಸ್ಥೆಯ ಹೆಸರಿನಲ್ಲಿ ಸೇವೆಯ ಕೊರತೆಯಾಗುತ್ತದೆ. ಇದು ಅನ್ಯಾಯದ ವ್ಯಾಪಾರ’ ಎಂಬ ಅಭಿಪ್ರಾಯದೊಂದಿಗೆ ಹೆಚ್ಚುವರಿ ಮೊತ್ತ ಹಿಂದಿರುಗಿಸಲು ಆದೇಶಿಸಿದೆ.
ಇದನ್ನೂ ಓದಿ : ಚುನಾವಣಾ ಅಕ್ರಮ : ರಾಜ್ಯದಲ್ಲಿ 22 ಕೋಟಿ ರೂ. ನಗದು, 23 ಕೆಜಿ ಚಿನ್ನ ವಶಕ್ಕೆ