ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಶಿಕ್ಷಣ ಇಲಾಖೆ ವತಿಯಿಂದ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಕನಸಿನ ಶಾಲೆ ಪೈಲಟ್ ಪ್ರಾಜೆಕ್ಟ್ಗಳಲ್ಲಿ ಉತ್ತಮ ಪ್ರಾತ್ಯಕ್ಷಿಕೆ ನೀಡಿದ ಶಾಲಾ, ಕಾಲೇಜುಗಳ ಮುಖ್ಯಸ್ಥರಿಗೆ ಅಭಿನಂದನಾ ಸಮಾರಂಭವನ್ನು ಸರ್. ಪುಟ್ಟಣ್ಣ ಚೆಟ್ಟಿ ಪುರಭವನದಲ್ಲಿ ನಡೆಸಲಾಯಿತು.
ಶಾಲಾ - ಕಾಲೇಜುಗಳ ಅಭಿವೃದ್ಧಿಗೆ ಒಂದು ಲಕ್ಷ: ಪೈಲಟ್ ಪ್ರಾಜೆಕ್ಟ್ನಲ್ಲಿ ಸಂಗ್ರಹವಾದ ಅಂಶಗಳನ್ನು ಕ್ರೋಢೀಕರಿಸಿ ಕ್ರಿಯಾ ಯೋಜನೆ ರೂಪಿಸಿ ಇಂದು ಕ್ರಿಯಾ ಯೋಜನೆಯನ್ನು ಬಿಡುಗಡೆ ಮಾಡಲಾಗುತ್ತಿದೆ. ಉತ್ತಮ ಪ್ರಾತ್ಯಕ್ಷತೆ ನೀಡಿದ 5 ಪ್ರಾಥಮಿಕ ಶಾಲೆಗಳು, 5 ಪ್ರೌಢಶಾಲೆಗಳು, 5 ಪದವಿ ಪೂರ್ವ ಕಾಲೇಜುಗಳು ಹಾಗೂ 2 ಪದವಿ ಕಾಲೇಜುಗಳು ಒಟ್ಟು 17 ಮುಖ್ಯಸ್ಥರುಗಳಿಗೆ ವಿಶೇಷವಾಗಿ ತಲಾ 1.00 ಲಕ್ಷ ರೂಗಳನ್ನು ಶಾಲಾ/ಕಾಲೇಜುಗಳ ಅಭಿವೃದ್ಧಿಗೆ ನೀಡಲಾಗುತ್ತಿದೆ. ಇದನ್ನು ಎಸ್ಡಿಎಂಸಿ ಸಭೆಯ ಅನುಮೋದನೆ ಪಡೆದು ಡಾ. ಎಪಿಜೆ ಅಬ್ದುಲ್ ಕಲಾಂ ಅವರ (ಕನಸಿನ ಶಾಲೆ) ಮಾದರಿ ಶಾಲಾ/ಕಾಲೇಜುಗಳನ್ನಾಗಿ ಅಭಿವೃದ್ಧಿಪಡಿಸಲು ಸೂಚಿಸಲಾಗಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಶಿಕ್ಷಣ ಇಲಾಖೆಯ ಅಡಿ 93 -ನರ್ಸರಿ ಶಾಲೆಗಳು, 16-ಪ್ರಾಥಮಿಕ ಶಾಲೆಗಳು, 18-ಪದವಿ ಪೂರ್ವ ಕಾಲೇಜುಗಳು, 04-ಪದವಿ ಕಾಲೇಜುಗಳು ಹಾಗೂ 02-ಸ್ನಾತಕೋತ್ತರ ಪದವಿ ಕಾಲೇಜುಗಳು ಸೇರಿದಂತೆ ಒಟ್ಟು 165 ಶಾಲಾ/ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ.
ಇದನ್ನೂ ಓದಿ: ನವೆಂಬರ್ 15ರೊಳಗೆ ರಸ್ತೆ ಗುಂಡಿ ಮುಚ್ಚದಿದ್ದರೆ ಅಮಾನತು: ಬಿಬಿಎಂಪಿ ಎಚ್ಚರಿಕೆ
ಪಾಲಿಕೆಯ ಶಾಲಾ, ಕಾಲೇಜುಗಳ ಮೂಲ ಸೌಕರ್ಯ, ಶೈಕ್ಷಣಿಕ ಮತ್ತು ಆಡಳಿತದ ಬಲವರ್ಧನೆಗಾಗಿ ಮಾನ್ಯ ವಿಶೇಷ ಆಯುಕ್ತರ ಸೂಚನೆಯಂತೆ, ಪಾಲಿಕೆಯ ಎಲ್ಲ ಶಾಲಾ - ಕಾಲೇಜುಗಳು ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಕಲ್ಪನೆಯ "ಕನಸಿನ ಶಾಲೆ” ಎಂಬ ಪರಿಕಲ್ಪನೆಯಡಿ ಜುಲೈ ತಿಂಗಳಲ್ಲಿ ಎಲ್ಲ ಪೂರ್ವ ಮಾಹಿತಿ ಪಡೆಯಲು ಸಂಸ್ಥೆಯ ಮುಖ್ಯಸ್ಥರುಗಳಿಂದ ಪೈಲಟ್ ಪ್ರಾಜೆಕ್ಟ್ ಸಿದ್ಧಪಡಿಸಲು ಸೂಚಿಸಿದ್ದರು. ಅದರಂತೆ, ಶಾಲಾ, ಕಾಲೇಜುಗಳಲ್ಲಿ ಇರಬಹುದಾದ ಧನಾತ್ಮಕ ಋಣಾತ್ಮಕ ಅಂಶಗಳನ್ನು ಗುರುತಿಸಿ, ಸಲಹೆ ಸೂಚನೆ ನೀಡಿದ್ದಾರೆ.
ಕ್ರಿಯಾ ಯೋಜನೆಗೆ ಸೂಚನೆ: ಅಲ್ಲದೇ ಪೈಲಟ್ ಪ್ರಾಜೆಕ್ಟ್ ಮಂಡಿಸಿದ ಎಲ್ಲ ಶಾಲಾ, ಕಾಲೇಜುಗಳ ಮುಖ್ಯಸ್ಥರುಗಳಿಗೆ ಪ್ರಶಂಸನಾ ಪತ್ರ ನೀಡುವುದರ ಮೂಲಕ ಅಭಿನಂದಿಸಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಬಿಡುಗಡೆಯಾದ ಕ್ರಿಯಾ ಯೋಜನೆಯನ್ನು ಎಲ್ಲ ಶಾಲಾ/ಕಾಲೇಜುಗಳಲ್ಲಿ ಅನುಷ್ಠಾನಗೊಳಿಸಿ ಬಲವರ್ಧನೆಗೆ ಕಾರ್ಯಪ್ರವೃತ್ತರಾಗಲು ಇಲಾಖಾ ಅಧಿಕಾರಿಗಳು, ಶಾಲಾ/ಕಾಲೇಜುಗಳ ಮುಖ್ಯಸ್ಥರುಗಳು ಮತ್ತು ಬೋಧಕ ವರ್ಗದವರಿಗೆ ಸೂಚಿಸಲಾಗಿದೆ.
ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಕನಸಿನ ಶಾಲೆ ಕಾರ್ಯಕ್ರಮದ ಸಂಚಿಕೆಯನ್ನು ಇದೇ ವೇಳೆ ಅನಾವರಣಗೊಳಿಸಲಾಯಿತು. ಈ ವೇಳೆ, ಸಹಾಯಕ ಆಯುಕ್ತರಾದ ಉಮೇಶ್, ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು(ಶಿಕ್ಷಣ) ವಿ.ಜಿ ಲೋಕೇಶ್, ಹಿರಿಯ ಸಹಾಯ ನಿರ್ದೇಶಕರಾದ ಹನುಮಂತಯ್ಯ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.