ಬೆಂಗಳೂರು: ಯಾರೂ ಮಾಡದಂತಹ ಸಮಾಜ ಸೇವೆಗೆ ಮುಂದಾಗಿರುವ ನಾನು ಬೆಂಗಳೂರು ಮಹಾನಗರದ ಚಿಕ್ಕಪೇಟೆ ವಿಧಾನಸಭೆ ಕ್ಷೇತ್ರದ ಸ್ಲಂ ನಿವಾಸಿಗಳಿಗೆ ಕೋಟಿ ರೂ. ಹಣವನ್ನ ಮೀಸಲಿರಿಸಿದ್ದೇನೆ. 180 ಕೋಟಿ ರೂ. ವೆಚ್ಚದಲ್ಲಿ 3000 ಮನೆಗಳನ್ನು ನಿರ್ಮಿಸಿಕೊಡಲು ಮುಂದಾಗಿರುವ ನಮಗೆ ಹಲವಾರು ರೀತಿಯಲ್ಲಿ ತೊಡಕುಗಳುಂಟಾಗಿವೆ ಎಂದು ಕೆಜಿಎಫ್ ಬಾಬು ತಿಳಿಸಿದರು.
ಗುರುವಾರ ಪ್ರೆಸ್ಕ್ಲಬ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ, ಕ್ಷೇತ್ರದ ಮಾಜಿ ಶಾಸಕ ಆರ್.ವಿ.ದೇವರಾಜ್ ಸುಪುತ್ರ ಯುವರಾಜ್ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಶೇಖರ್ ಮತ್ತು ತಂಡದಿಂದ ಕಲಾಸಿಪಾಳ್ಯ ಠಾಣೆಯಲ್ಲಿ ನಾನು ಕೈಗೊಳ್ಳುತ್ತಿರುವ ಸಮಾಜಸೇವೆಯನ್ನು ತಡೆ ಹಿಡಿಯುವಂತೆ ದೂರು ನೀಡಿದ್ದಾರೆ ಎಂದು ಆರೋಪಿಸಿದರು.
ಇದನ್ನೂ ಓದಿ: ಚಿಕ್ಕಪೇಟೆ ಕೊಳಗೇರಿ ನಿವಾಸಿಗಳಿಗೆ ಚೆಕ್ ವಿತರಿಸಿದ ಕೆಜಿಎಫ್ ಬಾಬು
ಈಗಾಗಲೇ ಚಿಕ್ಕಪೇಟೆ ವಿಧಾನಸಭೆ ಕ್ಷೇತ್ರದಲ್ಲಿನ ಐದು ಸ್ಲಂ ಗಳಲ್ಲಿನ ಪ್ರತಿ ಕುಟುಂಬದ ಮಕ್ಕಳ ಶಿಕ್ಷಣಕ್ಕಾಗಿ ಸ್ಕಾಲರ್‌ಶಿಪ್ ರೂಪದಲ್ಲಿ ನನ್ನ ಚಾರಿಟೇಬಲ್ ಫೌಂಡೇಷನ್ ವತಿಯಿಂದ 5 ಸಾವಿರ ರೂ. ನಂತೆ ಚೆಕ್ ವಿತರಣೆ ಮಾಡುತ್ತಿದ್ದೇನೆ. ಕ್ಷೇತ್ರದ 50 ಸಾವಿರ ಕುಟುಂಬಗಳು ಇದರ ಪ್ರಯೋಜನ ಪಡೆಯಲಿವೆ. ಇದನ್ನು ಆರ್.ವಿ.ದೇವರಾಜ್ ಮತ್ತು ಅವರ ತಂಡದವರು ಪ್ರಶ್ನಿಸಿ, ನನ್ನ ಚೆಕ್ ವಿತರಣೆ ಕಾರ್ಯಕ್ಕೆ ಬೆದರಿಕೆ ಹಾಕುವ ಮೂಲಕ ಅಡ್ಡಿಪಡಿಸುತ್ತಿದ್ದಾರೆ ಎಂದು ದೂರಿದರು.
ಚೆಕ್ ವಿತರಣೆಗೆ 125 ಕೋಟಿ ರೂಪಾಯಿ ವೆಚ್ಚ: ಗಣೇಶ ಹಬ್ಬದ ಸಮಯದಲ್ಲಿ ಅಂದರೆ, ಆಗಸ್ಟ್ 31 ರಂದು 5 ಸಾವಿರ ರೂ. ನಂತೆ ಚೆಕ್ ವಿತರಣೆ ಮಾಡುವುದಾಗಿ ಘೋಷಣೆ ಮಾಡಿದ್ದು, ಚೆಕ್ ವಿತರಣೆ ಕಾರ್ಯ ಮುಂದುವರಿದಿದೆ. ಇದು 125 ಕೋಟಿ ರೂ. ಆಗಲಿದೆ. ಮನೆ ನಿರ್ಮಾಣಕ್ಕೆ ಒಂದು ಮನೆಗೆ 6 ಲಕ್ಷ ರೂ.ನಂತೆ 3000 ಮನೆಗಳಿಗೆ 180 ಕೋಟಿ ವೆಚ್ಚ ಆಗಲಿದ್ದು, ಅಷ್ಟೂ ಮೊತ್ತವನ್ನು ನಾನೇ ಭರಿಸುವೆ ಎಂದು ಭರವಸೆ ನೀಡಿದರು.
ಚಿಕ್ಕಪೇಟೆ ಕ್ಷೇತ್ರದಲ್ಲಿನ ಸ್ಲಂನಲ್ಲಿ ಹುಟ್ಟಿ ಬೆಳೆದೆ: ನಾನು ಚಿಕ್ಕಪೇಟೆ ಕ್ಷೇತ್ರದಲ್ಲಿನ ಸ್ಲಂನಲ್ಲಿ ಹುಟ್ಟಿ ಬೆಳೆದವನು. ನನ್ನ ಅಪ್ಪ, ತಾತ, ಮುತ್ತಾತರು ಇಲ್ಲಿನವರೇ. ಅದಕ್ಕಾಗಿ ನಾನು ಸ್ಲಂಗೆ ಭೇಟಿ ನೀಡಿ ಅಲ್ಲಿನವರ ಕಷ್ಟ ಕೇಳುತ್ತೇನೆ. ಸಾಧ್ಯವಾದಷ್ಟು ಪರಿಹಾರಕ್ಕೆ ಯತ್ನಿಸುತ್ತೇನೆ. ನಾನು ಹುಟ್ಟಿ ಬೆಳೆದಿರುವ ಜಾಗಕ್ಕೆ ಹೋಗಲು ನನಗೆ ಯಾರಪ್ಪನ ಅಪ್ಪಣೆಯೂ ಬೇಕಾಗಿಲ್ಲ, ನನ್ನ ಬಳಿ ದುಡ್ಡಿದೆ, ನಾನು ಜನರಿಗೆ ಕೊಡುತ್ತೇನೆ. ಅವರಾರು ನನ್ನನ್ನು ತಡೆಯಲು ಸಾಧ್ಯವಿಲ್ಲ ಎಂದರು.
ಇದನ್ನೂ ಓದಿ: ಕೆಜಿಎಫ್ ಬಾಬು ವಿರುದ್ಧ 21 FIR.. ಈ ಬಗ್ಗೆ ದಾಖಲೆ ಇವೆ: ಸಚಿವ ಎಸ್.ಟಿ.ಸೋಮಶೇಖರ್
ಮನೆ ಕಟ್ಟಿಸುವುದು ತಾಯಿಯ ಕನಸು: ನನ್ನ ತಾಯಿ ಸ್ಲಂನಲ್ಲಿ ವಾಸಿಸುವ ಜನರ ಕಷ್ಟ ನೋಡಿ, ನಾಳೆ ದಿವಸ ನೀವು ಚೆನ್ನಾಗಿ ಆರ್ಥಿಕವಂತನಾದರೆ ಇಲ್ಲಿ ವಾಸಿಸುವ ಜನರಿಗೆ ಮನೆ ಕಟ್ಟಿಸಿಕೊಡು ಎಂದು ಹೇಳುತ್ತಿದ್ದರು. ಇದು ನನ್ನ ತಾಯಿಯ ಕನಸು, ಆ ಕನಸನ್ನು ನನಸು ಮಾಡಲು ಇಲ್ಲಿಗೆ ಬಂದಿದ್ದೇನೆ. ನನ್ನ ತಾಯಿಯ ಕನಸು ಈಡೇರಿಸುವುದು ತನ್ನ ಕೆಲಸ. ಆದು ನನ್ನ ಕ್ಷೇತ್ರ. ನನ್ನ ವಿರುದ್ಧ ದೊಡ್ಡ ಮಟ್ಟದಲ್ಲಿ ಏನೆಲ್ಲ ಪಿತೂರಿಗಳು ನಡೆದಿವೆ ಎನ್ನುವದು ನನಗೆ ಗೊತ್ತು. ಅದಕ್ಕೆಲ್ಲ ನಾನು ಹೆದರಲ್ಲ. ನಾನು ಜನರಿಗೆ ಒಳ್ಳೆಯದು ಮಾಡಲು ಮಾತ್ರ ಇರುವುದು ಎಂದು ಹೇಳಿದರು.
ಪವರ್ ಇಲ್ಲ: ಈಗ ನಾನು ಸ್ಲಂ ನಿವಾಸಿಗಳಿಗೆ ಮನೆ ಕಟ್ಟಿಸಿಕೊಡಬೇಕೆಂದಿದ್ದೇನೆ. ಆದರೆ ನನಗೆ ಅಧಿಕಾರ ಇಲ್ಲ. ಅಧಿಕಾರ ಇರುವವರು ಸರ್ಕಾರ, ಜನಪ್ರತಿನಿಧಿಗಳು, ಬಿಬಿಎಂಪಿ ಅಧಿಕಾರಿಗಳು ಎಲ್ಲ ಸಹಾಯ ಮಾಡಿದರೆ ನಾನು ಕಟ್ಟಿಸಿ ಕೊಡುತ್ತೇನೆ. ಮೊದಲ ಹಂತದಲ್ಲಿ 500 ಮನೆ ನಿರ್ಮಿಸಲು ಕೆಲಸ ಆರಂಭಿಸ ಬೇಕೆಂದಿದ್ದೇನೆ. ಏಳು ಸ್ಲಂ ಏರಿಯಾಗಳಿದ್ದು, ಪ್ರತಿ ವಾರ್ಡ್‌ನಲ್ಲಿ 350 ಮನೆಗಳನ್ನು ಕಟ್ಟಿಸಿಕೊಡಲು ನಾನು ಬದ್ಧವಾಗಿರುವೆ ಎಂದು ತಿಳಿಸಿದರು.
ಇದನ್ನೂ ಓದಿ: ಇಡಿ, ಸಿಬಿಐ ಟೆನ್ಶನ್‌ನಲ್ಲಿ ನನಗೆ ನಿದ್ದೆಯೇ ಬರುತ್ತಿಲ್ಲ: ಕಾಂಗ್ರೆಸ್ ಮುಖಂಡ ಕೆಜಿಎಫ್ ಬಾಬು
ಮನೆಗಳಿಗೆ ಪೂರ್ತಿ ಬಂಡವಾಳ: ಸರ್ಕಾರ ಮತ್ತು ಅಧಿಕಾರಿಗಳಿಂದಾಗುವ ಕೆಲಸವನ್ನು ಅಲ್ಲಿನ ಜನಪ್ರತಿನಿಧಿಗಳು ಮಾಡಿ ಕೊಡಲಿ, ನಾನು ಬಂಡವಾಳ ಹಾಕಿ ಮನೆ ಕಟ್ಟಿಸಿ ಕೊಡುತ್ತೇನೆ. ಸರ್ಕಾರ ದುಡ್ಡು ಕೊಡುವುದು ಬೇಡ, ನಾನೇ ದುಡ್ಡು ಹಾಕುತ್ತೇನೆ. ಅವರಿಗೆ ದಾಖಲಾತಿ, ಹಕ್ಕುಪತ್ರ ನೀಡಲಿ ಸಾಕು. ಅಲ್ಲಿ ವಾಸಿಸುವವರು ಟ್ಯಾಕ್ಸ್ ಕಟ್ಟಿಲ್ಲ ಎಂದರೂ ಈ ಎಲ್ಲ ಟ್ಯಾಕ್ಸ್ ನಾನೇ ಕಟ್ಟುತ್ತೇನೆ. ಮನೆ ಕಟ್ಟಿಕೊಡಲು ಅನುಮತಿ ಕೊಡಲಿ, ನಾನು ಯಾವುದೇ ಪಕ್ಷ ಅಥವಾ ವ್ಯಕ್ತಿಯನ್ನು ದೂರಲು ಇಲ್ಲಿಗೆ ಬಂದಿಲ್ಲ. ಬಡವರ ಮೇಲಿನ ಕಾಳಜಿಗಾಗಿ ನಿಮ್ಮ ಮುಂದೆ ಬಂದಿದ್ದೇನೆ. ಅಲ್ಲಿ ಕಂಡ ದೃಶ್ಯ ಹಾಗೂ ನಾನು ಬಡವರಿಗೆ ಸಹಾಯ ಮಾಡಲು ಮುಂದಾಗಿರುವ ವಿಷಯದ ಬಗ್ಗೆ ಹೇಳಿಕೊಳ್ಳಲು ಬಂದಿದ್ದೇನೆ ಎಂದು ಹೇಳಿದರು.
ಆರ್.ವಿ ದೇವರಾಜ್ ರೌಡಿ: ಆರ್.ವಿ ದೇವರಾಜ್ ಒಬ್ಬ ರೌಡಿ, ಬಿಲ್ಡಿಂಗ್ ಮಾಮೂಲು, ಮಾರ್ಕೆಟ್ ಮಾಮೂಲು ಪಡೆಯುವ ವ್ಯಾಪಾರ ಮಾಡುತ್ತಾರೆ. ಇದನ್ನು ಸ್ಲಂನಲ್ಲಿನ ಜನರೇ ಹೇಳುತ್ತಾರೆ. ನಾನು ಅಂತಹದನ್ನ ಮಾಡಿಲ್ಲ, ಯಾವತ್ತಿಗೂ ಅಂಥ ನೀಚ ಕೆಲಸ ಮಾಡಲ್ಲ. ಅದರ ಅವಶ್ಯಕತೆಯೂ ನನಗಿಲ್ಲ. ನನ್ನಿಂದ ಅಲ್ಲಿನ ಬಡಜನರಿಗೆ ಒಳ್ಳೆಯದಾಗುತ್ತದೆ. ಜನರ ಕಷ್ಟ ನೋಡಲಾರದೆ, ನಾನು ದುಡಿದ ಹಣವನ್ನು ಬಡವರಿಗೆ ಹಂಚುತ್ತಿದ್ದೇನೆ, ಈ ಬಾರಿ 5 ಸಾವಿರ ರೂ. ನೀಡುತ್ತಿದ್ದೇನೆ. ಮುಂದಿನ ವರ್ಷದಿಂದ 11 ಸಾವಿರ ಕೊಡುತ್ತೇನೆ. ಪ್ರತಿ ಮನೆಯಲ್ಲಿ ಓದುವ ಮಕ್ಕಳಿದ್ದರೆ ಪ್ರತಿ ಮಗುವಿಗೆ 5 ಸಾವಿರದಂತೆ 1 ಮಗುವಿದ್ದರೆ 5 ಸಾವಿರ, 2 ಮಕ್ಕಳಿದ್ದರೆ 10 ಸಾವಿರ, 3 ಮಕ್ಕಳಿದ್ದರೆ 15 ಸಾವಿರ ರೂ. ಸ್ಕಾಲರ್ ಶಿಪ್ ರೂಪದಲ್ಲಿ ಕೊಡುತ್ತೇನೆ, ಇದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಗುಡುಗಿದರು.
ಇದನ್ನೂ ಓದಿ: ಶ್ರೀಮಂತ ಅಭ್ಯರ್ಥಿಗೇ ಸೋಲುಣಿಸಿದ ಮತದಾರ: ಕಾರಿಗೂ ಕಾಯದೇ ಆಟೋ ಹತ್ತಿ ಹೊರಟ ಕೆಜಿಎಫ್ ಬಾಬು!
2 ಕ್ರಿಮಿನಲ್ ಕೇಸ್: ನನ್ನ ಮೇಲೆ ಐಟಿ, ಇಡಿ ರೇಡ್ ಆಗಿದೆ. ನನ್ನ ಬಳಿ ಅಕ್ರಮವಾದದ್ದು ಏನೂ ಇಲ್ಲ. ಅವರಿಗೇ ಏನೂ ಸಿಗಲಿಲ್ಲ. 12.37 ಕೋಟಿ ರೂ. ಆದಾಯ ತೆರಿಗೆ ಪಾವತಿ ಮಾಡಿದ್ದೇನೆ. ರಾಜ್ಯದಲ್ಲಿ ನಾನು ಹೆಚ್ಚಿನ ತೆರಿಗೆ ಪಾವತಿದಾರ. ನನ್ನ ಮೇಲೆ 22 ಅಪರಾಧ ಪ್ರಕರಣಗಳಿವೆ ಎಂದು ಹೇಳಿದ್ದಾರೆ, ಅದು ಸುಳ್ಳು. ನನ್ನ ಮೇಲಿರುವುದು 2 ಕ್ರಿಮಿನಲ್ ಕೇಸ್ ಮಾತ್ರ. ಅದು ನನ್ನ ಪ್ರಾಪರ್ಟಿಗೆ ಸಂಬಂಧಿಸಿದ್ದು, ನಾನು ಯಾವುದೇ ಭೂಗಳ್ಳತನ ಮಾಡಿಲ್ಲ. ಯಾರನ್ನೂ ಹೆದರಿಸಿ ಬೆದರಿಸಿಲ್ಲ ಎಂದರು.
ಹರಾಜಿನಲ್ಲಿ ಸರ್ಕಾರದ ಪ್ರಾಪರ್ಟಿ ಖರೀದಿ: ನಾನು ಚಿಕ್ಕಪೇಟೆಗೆ ರೌಡಿಯಾಗಿ ಬಂದಿಲ್ಲ. ನನಗೆ ಕಳ್ಳತನ, ರೌಡಿಸಂ ಬೇಕಿಲ್ಲ, ಸರ್ಕಾರಿ ಜಾಗ ನಾನೇ ಹಣ ಕೊಟ್ಟು ಕೊಂಡಿರುವುದು ಬಿಟ್ಟರೆ ನಾನು ಒತ್ತುವರಿ ಮಾಡಿಲ್ಲ. ಸರ್ಕಾರ ಯಾವುದೇ ಪಾಪರ್ಟಿ ಹರಾಜು ಮಾಡಿದರೂ ನಾನು ಕೊಂಡುಕೊಳ್ಳುತ್ತೇನೆ. ಖರೀದಿ ಮಾಡುವುದು ನನ್ನ ಕೆಲಸ. ಇದೆಲ್ಲ ದೂರು ಕೊಟ್ಟಿರುವುದು ನನ್ನ ಹಿಂಬಾಲಕರನ್ನು ನನ್ನಿಂದ ದೂರ ಮಾಡಲು. ನಾನು ಯಾರಿಗೂ ತಗ್ಗಲ್ಲ, ಬಗ್ಗಲ್ಲ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಉದ್ಯಮಿ ಕೆಜಿಎಫ್ ಬಾಬು ಮನೆ ಮೇಲೆ ಆದಾಯ ತೆರಿಗೆ ಅಧಿಕಾರಿಗಳ ದಾಳಿ