ಬೆಂಗಳೂರು : ವಿಜಯಪುರ ಜಿಲ್ಲೆಯ ಸಿದಂಗಿ ಮೂಲದ ವ್ಯಕ್ತಿ ಬೆಂಗಳೂರು ನಗರದಲ್ಲಿ ಕಾನ್ಸ್ಸ್ಟೇಬಲ್ ಆಗಿ ಕೆಲಸ ಮಾಡುತ್ತಿದ್ದು, ತನ್ನ ಹುಟ್ಟೂರಿನ ಪೊಲೀಸರ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತನ್ನ ತಂದೆಯನ್ನು ಪೊಲೀಸರೇ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ತನ್ನ ತಂದೆಯ ಸಾವಿಗೆ ನಿಖರ ಕಾರಣ ನೀಡದ ಪೊಲೀಸ್ ಇಲಾಖೆಯ ವಿರುದ್ಧ ಬೇಸರ ವ್ಯಕ್ತಪಡಿಸಿದ ಕಾನ್ಸ್ಸ್ಟೇಬಲ್, ತನ್ನ ಇಲಾಖೆಯಲ್ಲೇ ತನಗೆ ಸರಿಯಾದ ನ್ಯಾಯ ಸಿಗಲಿಲ್ಲವೆಂದು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಪೊಲೀಸರ ದೌರ್ಜನ್ಯವನ್ನು ತನ್ನ ತಂದೆ ಪ್ರಶ್ನಿಸಿದ್ದಕ್ಕೆ ಸಿದಂಗಿ ಪೊಲೀಸರು ಠಾಣೆಗೆ ಕರೆದೊಯ್ದು ಕಿರುಕುಳ ನೀಡಿದ್ದಾರೆ. ಬಳಿಕ ತಾಯಿ ಹಾಗೂ ನನ್ನ ಅಣ್ಣನಿಗೂ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದರು.
ತಂದೆ ಸಾವಿನ ಕುರಿತು ನಿಖರ ಕಾರಣ ಕೇಳಿದರೆ ವಿಜಯಪುರ ಎಸ್ಪಿ ಮಾಹಿತಿ ಕೊಡುತ್ತಿಲ್ಲ. RTI ಅಡಿ ಕೇಳಿದರು ಮಾಹಿತಿ ನೀಡುತ್ತಿಲ್ಲ. ಇಲಾಖೆಯಲ್ಲಿ ಇದ್ದುಕೊಂಡು ತಂದೆಯ ಪ್ರಾಣ ಕಾಪಾಡಿಕೊಳ್ಳಲು ಆಗಿಲ್ಲ ಎಂಬುದಕ್ಕೆ ನಾಚಿಕೆ ಆಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ನನಗೆ ನ್ಯಾಯಕೊಡಿಸಿ ಎಂದು ಗೃಹ ಸಚಿವರು, ಮುಖ್ಯಮಂತ್ರಿಗಳಿಗೆ ಪತ್ರ ಬರೆದರೂ ನ್ಯಾಯ ಸಿಕ್ಕಿಲ್ಲ. ಪೊಲೀಸ್ ಇಲಾಖೆಯಿಂದ ನನಗೆ ಅನ್ಯಾಯವಾಗಿದೆ. ನನ್ನ ತಂದೆ ಕೊಲೆ ಪ್ರಕರಣ ಸಿಬಿಐಗೆ ವಹಿಸಬೇಕು. ಯಾರಿಂದಲ್ಲೂ ನ್ಯಾಯ ಸಿಗದಿದ್ದಕ್ಕೆ ಈ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾಗಿ ತಿಳಿಸಿದ್ದಾರೆ. ಸದ್ಯ ಸಂಬಂಧಿಸಿದ ಅಧಿಕಾರಿಗಳು ಕಾನ್ಸ್‌ಟೇಬಲ್ ಯಾರು?. ಆತನ ತಂದೆಗೆ ಏನಾಗಿದೆ ಎಂಬುದರ ಪರಿಶೀಲನೆಯಲ್ಲಿ ತೊಡಗಿದ್ದಾರೆ.