ಬೆಂಗಳೂರು: ಒಂದು ಪ್ರಕರಣ ಇಪ್ಪತ್ತು ವರ್ಷಗಳ ಇಬ್ಬರ ಸ್ನೇಹವನ್ನು ದ್ವೇಷವನ್ನಾಗಿ ಬದಲಿಸಿತ್ತು. ಹಳೆ ವೈಷಮ್ಯಕ್ಕೆ ಚಾರ್ಟರ್ಡ್ ಅಕೌಂಟೆಂಟ್ ಸ್ನೇಹಿತನನ್ನೇ ಶಸ್ತ್ರಾಸ್ತ್ರ ಕಾಯ್ದೆಯಡಿ ಸಿಲುಕಿಸಲು ಯತ್ನಿಸಿದ್ದ ಆರೋಪದಡಿ ಮೂವರು ಆರೋಪಿಗಳನ್ನು ಕಬ್ಬನ್ ಪಾರ್ಕ್ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಾಂಬೆ ಮೂಲದ ರಾಹುಲ್, ಇರ್ಫಾನ್ ಹಾಗೂ ಚಿಂತನ್ ಬಂಧಿತರು.
ಇತ್ತೀಚೆಗೆ ರಾಹುಲ್ನನ್ನು ಬಂಧಿಸಿದ್ದ ಕಬ್ಬನ್ ಪಾರ್ಕ್ ಠಾಣಾ ಪೊಲೀಸರು, ಎರಡು ಪಿಸ್ತೂಲ್ ಹಾಗೂ ಐದು ಜೀವಂತ ಗುಂಡುಗಳನ್ನು ವಶಕ್ಕೆ ಪಡೆದಿದ್ದರು. ಆದರೆ ವಿಚಾರಣೆ ವೇಳೆ ಆರೋಪಿ ರಾಹುಲ್ ತನ್ನನ್ನು ಮುಂಬೈ ಮೂಲದ ಭಾವಿನ್ ಎಂಬ ಚಾರ್ಟರ್ಡ್ ಅಕೌಂಟೆಂಟ್ ಕಳಿಸಿರುವುದಾಗಿ ಬಾಯ್ಬಿಟ್ಟಿದ್ದ. ತಕ್ಷಣ ಕಬ್ಬನ್ ಪಾರ್ಕ್ ಪೊಲೀಸರು ಮುಂಬೈಗೆ ತೆರಳಿ ಭಾವಿನ್ನನ್ನು ವಶಕ್ಕೆ ಪಡೆದು ಕರೆತಂದಿದ್ದರು.
ಭ್ರಷ್ಟಾಚಾರ ಆರೋಪಕ್ಕೆ ಪ್ರತಿಯಾಗಿ ಸಂಚು: ಬಂಧಿತ ರಾಹುಲ್ ಹಾಗೂ ಭಾವಿನ್ನನ್ನು ಮುಖಾಮುಖಿ ವಿಚಾರಿಸಿದಾಗ ಬೇರೆಯದ್ದೇ ವಿಚಾರ ಬಯಲಾಗಿತ್ತು. 22 ವರ್ಷಗಳಿಂದ ಭಾವಿನ್ಗೆ ಪರಿಚಯವಿದ್ದ ಇರ್ಫಾನ್ ಎಂಬಾತ ಆತನ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ. ಆದರೆ ಹಣಕಾಸಿನ ಅವ್ಯವಹಾರದ ಆರೋಪದಡಿ ಇರ್ಫಾನ್ ವಿರುದ್ಧ ಭಾವಿನ್ ಮುಂಬೈ ಎಸಿಬಿಗೆ ದೂರು ನೀಡಿದ್ದ. ಅದರನ್ವಯ ಮುಂಬೈ ಎಸಿಬಿ ಪೊಲೀಸರು ಇರ್ಫಾನ್ನನ್ನು ಬಂಧಿಸಿದ್ದರು.
ಸೇಡು ತೀರಿಸಿಕೊಳ್ಳಲು ಪ್ಲ್ಯಾನ್: ಅಂದಿನಿಂದಲೂ ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದ ಇರ್ಫಾನ್, ಅಲ್ಲಿನ ಸ್ಥಳೀಯ ಪಿಸ್ತೂಲ್ ಡೀಲರ್ ರಾಹುಲ್, ಸಮೀರ್ ಹಾಗೂ ಚಿಂತನ್ ಎಂಬಾತನ ಜೊತೆ ಸೇರಿ ಭಾವಿನ್ ವಿರುದ್ಧ ಸಂಚು ರೂಪಿಸಿದ್ದ. ಅದರಂತೆ ಬೆಂಗಳೂರಿಗೆ ಬಂದು ಪೊಲೀಸರ ಬಳಿ ಸಿಕ್ಕಿಹಾಕಿಕೊಂಡಿದ್ದ ರಾಹುಲ್ ಭಾವಿನ್ ಹೆಸರು ಪ್ರಸ್ತಾಪಿಸಿದ್ದ.
ಇದನ್ನೂ ಓದಿ: ಕೆ.ಪಿ ಅಗ್ರಹಾರದಲ್ಲಿ ವ್ಯಕ್ತಿಯ ಬರ್ಬರ ಹತ್ಯೆ ಪ್ರಕರಣ: ತಿಂಗಳ ಬಳಿಕ ಪ್ರಮುಖ ಆರೋಪಿ ಬಂಧನ
ತಕ್ಷಣ ಮುಂಬೈಗೆ ತೆರಳಿ ಇರ್ಫಾನ್ ಹಾಗೂ ಚಿಂತನ್ನನ್ನು ಬಂಧಿಸಿರುವ ಪೊಲೀಸರು ಸದ್ಯ ಮೂವರೂ ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಮತ್ತೋರ್ವ ಆರೋಪಿ ಸಮೀರ್ಗಾಗಿ ಶೋಧಕಾರ್ಯ ಮುಂದುವರೆದಿದೆ ಎಂದು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ತಿಳಿಸಿದ್ದಾರೆ.