ಬೆಂಗಳೂರು: ನಾಲ್ಕು ರಾಜ್ಯಗಳಲ್ಲಿ ನಮಗೆ ಜಯ ಸಿಗಲಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸದಾಶಿವನಗರ ತಮ್ಮ ನಿವಾಸದಲ್ಲಿ ಇಂದು ಪಂಚ ರಾಜ್ಯಗಳ ಚುನಾವಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಎಲ್ಲಾ ರಾಜ್ಯಗಳಲ್ಲೂ ಚುನಾವಣೆ ಚೆನ್ನಾಗಿ ಆಗಿದೆ. ನಮಗೆ ಬಂದಿರುವ ಫೀಡ್ ಬ್ಯಾಕ್ ಚೆನ್ನಾಗಿದೆ. ನಾಲ್ಕು ರಾಜ್ಯಗಳಲ್ಲಿ ನಮಗೆ ಜಯ ಸಿಗುತ್ತೆ. ಮಿಜೋರಾಂನಲ್ಲಿ ಅತಂತ್ರ ಆಗಬಹುದು ಎಂದರು.
ನಾವು ಊಹಿಸಿದಂತೆ ಫಲಿತಾಂಶ ಬರಲಿದೆ. ನಮಗೆ ಬಹುಮತ ಬರಲಿದೆ. ಆಯಾ ರಾಜ್ಯಗಳ ನಾಯಕರ ಜೊತೆ ಮಾತಾಡಿದ್ದೇನೆ. ಕಮಲ್ ನಾಥ್ ಜೊತೆಗೂ ಸಂಪರ್ಕದಲ್ಲಿದ್ದೇನೆ. ವಿಪಕ್ಷ ನಾಯಕರ ಜೊತೆ ಮಾತನಾಡಿದ್ದೇನೆ. ಝೂಂ ಮೀಟಿಂಗ್‌ಗಳನ್ನು ಮಾಡಿದ್ದೇವೆ. ಎಲ್ಲ ಕಡೆಯೂ ನಮಗೆ ಬಹುಮತ ಬರುತ್ತೆ ಅಂದಿದ್ದಾರೆ. ನಮ್ಮವರೆಲ್ಲರೂ ತುಂಬ ಆತ್ಮವಿಶ್ವಾಸದಲ್ಲಿದ್ದಾರೆ ಎಂದು ತಿಳಿಸಿದರು.
ಡಿಕೆಶಿ ತೆಲಂಗಾಣಕ್ಕೆ ಪ್ರಯಾಣ ಬೆಳೆಸುತ್ತಿರುವುದು ಪಕ್ಷದ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನನಾ ಅನ್ನೋ ಪ್ರಶ್ನೆಗೆ ಖರ್ಗೆ ಗರಂ ಆಗಿ ಪ್ರತಿಕ್ರಿಯಿಸಿದರು. ಎಐಸಿಸಿ ಅಧ್ಯಕ್ಷರಿಗೆ ಈ ಪ್ರಶ್ನೆ ಕೇಳ್ತೀರಲ್ಲ ಎಂದು ಸಿಟ್ಟಾದರು.
ಇದನ್ನೂ ಓದಿ: ರಾಜ್ಯಕ್ಕೆ ಐಜಿಎಸ್ಟಿ ಕಡಿತ ಆಘಾತ: ಸ್ಪಷ್ಟನೆ ಕೋರಿ ಕೇಂದ್ರ ಸಚಿವರಿಗೆ ಸಿಎಂ ಪತ್ರ
ತೆಲಂಗಾಣಕ್ಕೆ ಡಿಸಿಎಂ ಡಿ ಕೆ ಶಿವಕುಮಾರ್: ಡಿಸೆಂಬರ್ 3 ರಂದು ತೆಲಂಗಾಣ ಸೇರಿ ನಾಲ್ಕು ರಾಜ್ಯಗಳ ಫಲಿತಾಂಶ ಪ್ರಕಟವಾಗುವ ಹಿನ್ನೆಲೆಯಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್ ಇಂದು ಹೈದರಾಬಾದ್ಗೆ ತೆರಳುತ್ತಿದ್ದಾರೆ. ರಾಜಸ್ಥಾನ ಸೇರಿದಂತೆ ಚುನಾವಣೆ ನಡೆಯಲಿರುವ ಎಲ್ಲ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷ ಆರಾಮಾಗಿ ಗೆಲುವು ಸಾಧಿಸಿ, ಸರ್ಕಾರ ರಚಿಸಲಿದೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದರು.
119 ಸದಸ್ಯ ಬಲದ ತೆಲಂಗಾಣ ವಿಧಾನಸಭೆ ಚುನಾವಣೆಗೆ ಗುರುವಾರ ನಡೆದ ಮತದಾನ ಬಹುತೇಕ ಶಾಂತಿಯುತವಾಗಿ ನಡೆದಿದ್ದು, ಶೇ.70.60 ರಷ್ಟು ಮತದಾನ ದಾಖಲಾಗಿದೆ. ಡಿಸೆಂಬರ್ 3ರಂದು ಭಾನುವಾರ ಮತ ಎಣಿಕೆ ನಡೆಯಲಿದ್ದು, ಬಹುತೇಕ ಮತಗಟ್ಟೆ ಸಮೀಕ್ಷೆಗಳು ಈ ಬಾರಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯಬಹುದು ಎಂದು ಭವಿಷ್ಯ ನುಡಿದಿವೆ.
ಬಿಆರ್‌ಎಸ್ ರಾಜ್ಯದಲ್ಲಿ ಸತತ ಮೂರನೇ ಅವಧಿಗೆ ಅಧಿಕಾರ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಇನ್ನೊಂದೆಡೆ, ಪ್ರತಿಪಕ್ಷ ಕಾಂಗ್ರೆಸ್ ಅಧಿಕಾರದಿಂದ ಬಿಆರ್‌ಎಸ್ ಕೆಳಗಿಳಿಸಲು ಸರ್ವಪ್ರಯತ್ನ ನಡೆಸಿದೆ.
ಪೋಲ್ ಟ್ರೆಂಡ್ಸ್ ಮತ್ತು ಸ್ಟ್ರಾಟಜಿ ಆರ್ಗನೈಸೇಶನ್ (ಪಿಟಿಎಸ್ ಗ್ರೂಪ್) ಬಿಡುಗಡೆ ಮಾಡಿದ ಎಕ್ಸಿಟ್ಪೋಲ್ ಪ್ರಕಾರ, ಬಿಆರ್‌ಎಸ್ 35 ರಿಂದ 40 ಸ್ಥಾನ, ಕಾಂಗ್ರೆಸ್ 65 ರಿಂದ 70 ಸ್ಥಾನ ಜಯಿಸಲಿದೆ ಎಂದು ತಿಳಿಸಿದೆ. ಬಿಜೆಪಿ 7-10, ಎಂಐಎಂ 6-7 ಹಾಗೂ ಇತರರು 1-2 ಸ್ಥಾನ ಗೆಲ್ಲುವ ಸಾಧ್ಯತೆ ಇದೆ. ಆರಾ ಮಸ್ತಾನ್ ಸಮೀಕ್ಷೆಯ ಪ್ರಕಾರ, ಬಿಆರ್‌ಎಸ್‌ಗೆ 41-49, ಕಾಂಗ್ರೆಸ್‌ಗೆ 58-67, ಬಿಜೆಪಿಗೆ 5-7 ಮತ್ತು ಇತರರು 7 ರಿಂದ 9 ಸ್ಥಾನ ಪಡೆಯಬಹುದು ಎಂದು ಅಂದಾಜಿಸಲಾಗಿದೆ.