ಬೆಂಗಳೂರು: ಜನರ ಸಂಕಷ್ಟದಲ್ಲಿ ಭಾಗಿಯಾಗಿ, ಅವರ ಧ್ವನಿಯಾಗಲು ಕಾಂಗ್ರೆಸ್ ಸಂಕಲ್ಪ ಮಾಡಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಬೆಂಗಳೂರಿನ ಮಲ್ಲೇಶ್ವರ ವಿಧಾನಸಭೆ ಕ್ಷೇತ್ರದ ಗಾಯತ್ರಿ ನಗರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಜೊತೆಯಾಗಿ ಬಡವರಿಗೆ ಆಹಾರ ಕಿಟ್ ವಿತರಿಸಿ ಮಾತನಾಡಿದರು.
ಕಷ್ಟದಲ್ಲಿರುವ ಜನರಿಗೆ ನೆರವಾಗಬೇಕು ಎಂದು ಕಾಂಗ್ರೆಸ್ ರಾಜ್ಯಾದ್ಯಂತ ಅಮೋಘ ಸೇವೆ ಮಾಡುತ್ತಿದೆ. ಬೆಂಗಳೂರಿನ ಹಲವೆಡೆ ನಮ್ಮ ಶಾಸಕರಿಲ್ಲದಿದ್ದರೂ ಬಡವರಿಗೆ ಆಹಾರ ಕಿಟ್ ನೀಡುವ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಿದ್ದೇನೆ. ನಮ್ಮ ನಾಯಕರು, ಕಾರ್ಯಕರ್ತರು ಕೋಟ್ಯಂತರ ರೂಪಾಯಿ ಸ್ವಂತ ಹಣ ಖರ್ಚು ಮಾಡಿ ಆಹಾರ ಕಿಟ್ ವಿತರಿಸುತ್ತಿದ್ದಾರೆ ಎಂದರು.
ಅನೇಕ ಕಡೆ 1 ಸಾವಿರ ರೂ. ಆರ್ಥಿಕ ನೆರವು ಮತ್ತೆ ಹಲವೆಡೆ ಲಸಿಕೆಗೆ ಹಣ ನೀಡಿ ನಮ್ಮವರು ನೆರವಾಗುತ್ತಿದ್ದಾರೆ. ನಮಗೆ ರಾಜಕೀಯ ಮುಖ್ಯವಲ್ಲ. ಸರ್ಕಾರದ ಆಹಾರ ಕಿಟ್ಗಳ ಮೇಲೆ ನಮ್ಮ ಫೋಟೋ ಹಾಕಿಕೊಂಡು ಹಂಚುತ್ತಿಲ್ಲ. ನಮ್ಮ ನಾಯಕರು ಸ್ವಂತ ಹಣದಿಂದ ನೆರವು ನೀಡುತ್ತಿದ್ದು, ಅವರ ಹೃದಯ ಶ್ರೀಮಂತಿಕೆಯನ್ನು ಗಮನಿಸಬೇಕು. ಕಾಂಗ್ರೆಸ್ ಅವರಿಗೆ ಅಭಿನಂದನೆ ಸಲ್ಲಿಸುತ್ತದೆ ಎಂದಿದ್ದಾರೆ.
ಉಚಿತ ಲಸಿಕೆಗೆ ಒತ್ತಾಯಿಸಿದ್ದು ನಾವು
ನಾವು ಲಸಿಕೆಗೆ ಒತ್ತಾಯ ಮಾಡಿದ ಮೇಲೆ ಸರ್ಕಾರ ಉಚಿತ ಲಸಿಕೆ ಘೋಷಿಸಿದೆ. ಅನೇಕ ಖಾಸಗಿ ಆಸ್ಪತ್ರೆಗಳ ಜತೆಗೆ ಕೈಜೋಡಿಸಿ ಲಸಿಕೆಗೆ ತಲಾ ಸಾವಿರ ರೂಪಾಯಿ ವಸೂಲಿ ಮಾಡಿದ್ದಾರೆ. ಲಸಿಕೆಯನ್ನು ನಮ್ಮವರಿಗೆ ನೀಡುವ ಬದಲು ವಿದೇಶಕ್ಕೆ ಕಳುಹಿಸಲಾಗಿತ್ತು ಎಂದು ಮೋದಿ ವಿರುದ್ಧ ಹರಿಹಾಯ್ದರು.
ಈ ವಿಚಾರವಾಗಿ ನಾವು ಹೋರಾಟ ಮಾಡಿದಾಗ ಕೋರ್ಟ್ ಮಧ್ಯಪ್ರವೇಶಿಸಿತು. ಕೊರೊನಾ ಸಮಯದಲ್ಲಿ ಎಲ್ಲದಕ್ಕೂ ಸಾಲಿನಲ್ಲಿ ನಿಲ್ಲಿಸಲಾಯಿತು. ಬಡವರು ತಮ್ಮ ಚಿನ್ನಾಭರಣ ಅಡವಿಟ್ಟು, ಸಾಲ ಮಾಡಿ, ಆಸ್ಪತ್ರೆಗೆ ಹಣ ಕಟ್ಟಿದ್ದಾರೆ. ಜನ ಆಸ್ಪತ್ರೆಗೆ ಕಟ್ಟಿರುವ ಹಣವನ್ನು ಸರ್ಕಾರ ಹಿಂದಿರುಗಿಸಬೇಕು. ನೊಂದವರಿಗೆ ಪರಿಹಾರ ನೀಡಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಎಂದು ಆಗ್ರಹಿಸಿದ್ದಾರೆ.