ಬೆಂಗಳೂರು: ಹಿಂದಿ ದಿವಸ್ ಆಚರಣೆ ಬಗ್ಗೆ ಕಾಂಗ್ರೆಸ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಬಿಜೆಪಿ ವಿರುದ್ಧ ಕಿಡಿಕಾರಿದೆ.
ಅಮಿತ್ ಶಾ ಅವರೇ ಭಾರತ ಜಾಗತಿಕ ಮಟ್ಟದಲ್ಲಿ ಯಾವತ್ತೂ ಒಂದು ಭಾಷೆ, ಒಂದು ಧರ್ಮ, ಒಂದು ಸಂಸ್ಕೃತಿಯಿಂದ ಗುರುತಿಸಿಕೊಂಡ ದೇಶವಲ್ಲ. ಬಹು ಭಾಷೆ, ಬಹು ಧರ್ಮ, ಬಹು ಸಂಸ್ಕೃತಿಯಂತಹ ವೈವಿಧ್ಯತೆಯೇ ಬಹುತ್ವ ಭಾರತದ ಜೀವಾಳ ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್ ಅಧಿಕೃತ ಟ್ವಿಟರ್ ಖಾತೆಯಲ್ಲಿ ಅಸಮಾಧಾನ ಹೊರಹಾಕಿದೆ.
ಜೊತೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಟ್ವೀಟ್ ಮೂಲಕ ತಮ್ಮ ಬೇಸರ ಹೊರಹಾಕಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಹಿಂದಿ ರಾಷ್ಟ್ರ ಭಾಷೆ ಎಂಬ ಸುಳ್ಳು ಪ್ರಚಾರ ನಿಲ್ಲಲಿ. ಅದು ಕನ್ನಡದಂತೆಯೇ 22 ಅಧಿಕೃತ ಭಾಷೆಗಳಲ್ಲಿ ಒಂದು ಎನ್ನುವುದು ತಿಳಿದಿರಲಿ. ಸುಳ್ಳು-ತಪ್ಪು ಮಾಹಿತಿ ಮೂಲಕ ಭಾಷೆಯನ್ನು ಬೆಳೆಸಲಾಗದು. ಭಾಷೆ ಪರಸ್ಪರ ಪ್ರೀತಿ ಮತ್ತು ಕೊಡು-ಕೊಳ್ಳುವಿಕೆಯಿಂದ ಬೆಳೆಯುತ್ತದೆ ಎಂದಿದ್ದಾರೆ.