ಬೆಂಗಳೂರು: ಮಹಾತ್ಮ ಗಾಂಧೀಜಿ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಅನಂತ್ ಕುಮಾರ್ ಹೆಗಡೆ ಅವರನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಮರ್ಥಿಸಿಕೊಂಡಿದ್ದಾರೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಆರೋಪಿಸಿದ್ದಾರೆ.
ಇಲ್ಲಿನ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಉಗ್ರಪ್ಪ, ಸಂಸತ್ನಲ್ಲಿ ಗಾಂಧೀಜಿ ಕುರಿತ ಹೇಳಿಕೆಗೆ ಹೆಗಡೆ ಕ್ಷಮೆಯಾಚಿಸುತ್ತಾರೆ ಎಂದು ಕೊಂಡಿದ್ದೆವು. ಆದರೆ, ಆ ವಿಷಯ ಪ್ರಸ್ತಾಪವಾಗುತ್ತಿದ್ದಂತೆ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೆಗಡೆ ಹಾಗೇ ಹೇಳಿಕೆ ನೀಡಿಲ್ಲ ಎಂದು ಸಮರ್ಥಿಕೊಂಡಿರುವುದು ಬಿಜೆಪಿಯ ಕುಮ್ಮಕ್ಕನ್ನು ಎತ್ತಿತೋರಿಸುತ್ತದೆ ಎಂದು ಕಿಡಿಕಾರಿದ್ದಾರೆ.
ಸುಮೋಟು ಅಡಿ ಹೆಗಡೆ ವಿರುದ್ಧ ದೂರು ದಾಖಲಿಸಬೇಕು. ಮೊದಲು ಸಂವಿಧಾನದ ಮೇಲೆ ದಾಳಿ, ಈಗ ರಾಷ್ಟ್ರಪಿತ ಗಾಂಧೀಜಿ ಮೇಲೆ ದಾಳಿ ನಡೆಸಿರುವ ಮನುವಾದಿಗಳಿಗೆ ತಕ್ಕ ಉತ್ತರ ನೀಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಮಾತನಾಡಿದ ಶಾಸಕ ಖಾದರ್, ಸಿದ್ದಗಂಗಾ ಮಠದ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ 73 ಸಾವಿರ ಕೆಜಿ ಅಕ್ಕಿ, 36 ಸಾವಿರ ಕೆಜಿ ಗೋಧಿಗೆ ಈಗಿನ ಬಿಜೆಪಿ ಸರ್ಕಾರ ಕತ್ತರಿ ಹಾಕಿದೆ ಎಂದು ಕಿಡಿಕಾರಿದರು.