ಬೆಂಗಳೂರು: ಕಲಬುರುಗಿ ಜಿಲ್ಲೆಯ ಚಿಂಚೋಳಿ ಕ್ಷೇತ್ರದ ಉಪ ಚುನಾವಣೆಯನ್ನು ರಾಜ್ಯ ಕಾಂಗ್ರೆಸ್ ನಾಯಕರು ಕುಂದಗೋಳ ಕ್ಷೇತ್ರದಷ್ಟು ಗಂಭೀರವಾಗಿ ಪರಿಗಣಿಸಿಲ್ಲವಾ ಅನ್ನುವ ಅನುಮಾನ ಸ್ಥಳೀಯ ಕಾಂಗ್ರೆಸ್ ಮುಖಂಡರಲ್ಲಿ ಮೂಡುತ್ತಿದೆ.
ಚಿಂಚೋಳಿ ಕ್ಷೇತ್ರದ ಉಪ ಚುನಾವಣೆ ಟಿಕೆಟ್ ಗಿಟ್ಟಿಸಿಕೊಂಡಿರುವ ಸುಭಾಷ ರಾಠೋಡ್ಗೆ ಇದೀಗ ಈ ವಿಚಾರ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಪ್ರಚಾರಕ್ಕೆ ಬರಬೇಕಿದ್ದ 70 ನಾಯಕರ ಪೈಕಿ ಸ್ಥಳೀಯ ಏಳೆಂಟು ನಾಯಕರನ್ನು ಹೊರತುಪಡಿಸಿದರೆ ಉಳಿದವರಾರೂ ಕಾಣಿಸುತ್ತಿಲ್ಲ. ಒಬ್ಬೊಬ್ಬರೂ ಒಂದೊಂದು ಸಬೂಬು ಹೇಳಿಕೊಂಡು ಓಡಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಪ್ರತಿ ಗ್ರಾಮ ಪಂಚಾಯಯತ್ಗೆ ಓರ್ವ ಶಾಸಕ, ಪ್ರತಿ ಜಿಲ್ಲಾ ಪಂಚಾಯತ್ ಕ್ಷೇತ್ರಕ್ಕೆ ಓರ್ವ ಸಚಿವರನ್ನು ನಿಯೋಜಿಸಲಾಗಿದೆ. ಲೋಕಸಭೆಯ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಅವರ ಪುತ್ರ ಸಚಿವ ಪ್ರಿಯಾಂಕ್ ಖರ್ಗೆ ಪಾಲಿಗೆ ಅತ್ಯಂತ ಪ್ರತಿಷ್ಠೆಯ ಕಣವಾಗಿರುವ ಈ ಕ್ಷೇತ್ರದಲ್ಲಿ, ಉಳಿದವರಿಗೆ ಅಷ್ಟೇನು ಆಸಕ್ತಿ ಇರುವಂತೆ ಕಾಣಿಸುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.
ಮೂವರು ಪ್ರಮುಖರು
ಸದ್ಯ ಅಭ್ಯರ್ಥಿ ಸುಭಾಷ್ ರಾಠೋಡ್ ಪರ ಸಚಿವರಾದ ಪ್ರಿಯಾಂಕ್ ಖರ್ಗೆ, ಪಿ.ಟಿ. ಪರಮೇಶ್ವರ್ ನಾಯಕ್, ಮಾಜಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಹೊರತುಪಡಿಸಿದರೆ ಯಾರೊಬ್ಬರು ಇತ್ತ ಮುಖ ಮಾಡಿಲ್ಲ. ಪ್ರಮುಖವಾಗಿ ಉಪ ಚುನಾವಣೆಯ ಉಸ್ತುವಾರಿ ವಹಿಸಿಕೊಂಡಿರುವ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಗೃಹ ಸಚಿವ ಎಂ.ಬಿ. ಪಾಟೀಲ್ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಸಹ ಇತ್ತ ಸುಳಿದಿಲ್ಲ.
ಸದ್ಯ ಎಂ ಬಿ ಪಾಟೀಲರು ಎಲ್ಲಿದ್ದಾರೆ ಗೊತ್ತಿಲ್ಲ, ಈಶ್ವರ್ ಖಂಡ್ರೆ ಇಂದು ಬೆಂಗಳೂರಿಗೆ ಆಗಮಿಸುತ್ತಿದ್ದು ಕೆಪಿಸಿಸಿ ಕಚೇರಿಯಲ್ಲಿ ಸಂಜೆ ಸುದ್ದಿಗೋಷ್ಟಿ ಹಮ್ಮಿಕೊಂಡಿದ್ದಾರೆ. ಡಿಸಿಎಂ ಪರಮೇಶ್ವರ್ ಬೆಳಗ್ಗೆಯೇ ತುಮಕೂರಿನತ್ತ ಪ್ರಯಾಣ ಬೆಳೆಸಿದ್ದು, ಶ್ರೀ ಅಭಯ ಹಸ್ತ ಆದಿಲಕ್ಷ್ಮಿ ಸಂಸ್ಥಾನ ಮಠದ 3ನೇ ವರ್ಷದ ವಾರ್ಷಿಕ ಮಹೋತ್ಸವದಲ್ಲಿ ಭಾಗವಹಿಸಲಿದ್ದಾರೆ. ಮಧುಗಿರಿಯ ನಿಟ್ಟರಹಳ್ಳಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕೂಡ ಭಾಗವಹಿಸಲಿದ್ದಾರೆ. ಸಂಜೆಯರೆಗೂ ಅವರು ಕ್ಷೇತ್ರದಲ್ಲಿಯೇ ಇರಲಿದ್ದಾರೆ.
ಕುಂದಗೋಳದಂತೆ ರಂಗೇರದ ಅಖಾಡ:
ಒಟ್ಟಾರೆ ಹಲವು ಘಟಾನುಘಟಿ ನಾಯಕರು ಅಕ್ಕಪಕ್ಕದ ಜಿಲ್ಲೆಯಲ್ಲೇ ಇದ್ದರೂ ಪ್ರಚಾರಕ್ಕೆ ಬರದಿರುವುದು ಅಭ್ಯರ್ಥಿ ಸುಭಾಷ ರಾಠೋಡ್‍ಗೆ ಆತಂಕ ಮೂಡಿಸಿದೆ. ಇಂದು ಕೂಡ ಸಚಿವರಾದ ಪ್ರಿಯಾಂಕ್ ಖರ್ಗೆ, ಪರಮೇಶ್ವರ್ ನಾಯಕ್ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ. ಉಳಿದವರು ಸಹ ಶೀಘ್ರ ಕ್ಷೇತ್ರಕ್ಕೆ ಬರುತ್ತಾರೆ ಎನ್ನುವ ನಿರೀಕ್ಷೆ ಇದೆ. ಆದರೆ ಕುಂದಗೋಳದ ಪ್ರಮಾಣದಲ್ಲಿ ಇದು ನಿರೀಕ್ಷಿತ ಪ್ರಚಾರ, ಜನಪ್ರಿಯತೆ ಪಡೆಯುತ್ತಿಲ್ಲ. ಖರ್ಗೆ ಕುಟುಂಬಕ್ಕೆ ಉಮೇಶ್ ಜಾಧವ್ ವಿರುದ್ಧ ಸೇಡು ತೀರಿಸಿಕೊಳ್ಳುವ ತವಕ ಹೆಚ್ಚಾಗಿದ್ದು, ಇದಕ್ಕೆ ತಕ್ಕ ಪೋಷಣೆ ಪಕ್ಷದ ಕಡೆಯಿಂದ ಸಿಗುತ್ತಿಲ್ಲ ಎನ್ನಲಾಗುತ್ತಿದೆ.