ಬೆಂಗಳೂರು: ಭ್ರಷ್ಟಾಚಾರ ಆರೋಪದ ಕಾರಣ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿಗಳು ರಾಜೀನಾಮೆ ನೀಡುವಂತೆ ಆಗ್ರಹಿಸಿ ಕಾಂಗ್ರೆಸ್ ನಾಯಕರು ಇಂದು ಮುಖ್ಯಮಂತ್ರಿ ನಿವಾಸಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಿದ್ದಾರೆ. ಚನ್ನಗಿರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಪುತ್ರ ದಾಖಲೆ ಸಮೇತ ಲೋಕಾಯುಕ್ತರ ಬಲೆಗೆ ಬಿದ್ದಿದ್ದು, ಅವರ ನಿವಾಸದಲ್ಲಿ 8 ಕೋಟಿ ನಗದು ಸಿಕ್ಕಿದೆ, ಬಿಜೆಪಿ ಸರ್ಕಾರದ 40% ಕಮೀಷನ್ ದಂಧೆ ಬಟಾಬಯಲಾಗಿದೆ. ಹೀಗಾಗಿ ಮುಖ್ಯಮಂತ್ರಿಗಳ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ಭವನದಿಂದ ತೆರಳಿ ರೇಸ್ ಕೋರ್ಸ್ ರಸ್ತೆಯಲ್ಲಿನ ಮುಖ್ಯಮಂತ್ರಿಗಳ ನಿವಾಸಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಇಡೀ ದೇಶದಲ್ಲೇ ಕರ್ನಾಟಕದಲ್ಲಿ ಭ್ರಷ್ಟಾಚಾರ ತಾಂಡವ ಆಡುತ್ತಿದೆ. ಕಳೆದ ಮೂರು ವರ್ಷಗಳಿಂದ ಈ ಬಗ್ಗೆ ಹೇಳುತ್ತಾ ಬರುತ್ತಿದ್ದೇವೆ. ಕರ್ನಾಟಕ ಕರೆಪ್ಷನ್ ಕ್ಯಾಪಿಟಲ್ ಎಂಬ ಹೆಸರನ್ನು ಬಿಜೆಪಿ ಸರ್ಕಾರ ಕೊಟ್ಟಿದೆ. ಮುಖ್ಯಮಂತ್ರಿ ಸಾಕ್ಷಿ ಕೊಡಿ ಅಂತ ಕೇಳುತ್ತಿದ್ದರು. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಶೇಕಡಾ 40ರಷ್ಟು ಕಮಿಷನ್ ಇದೆ ಎಂದು ಎರಡು ಲಕ್ಷ ಗುತ್ತಿಗೆದಾರರು ಜೊತೆಗೂಡಿ ಪ್ರತಿಭಟನೆ ನಡೆಸಿದರು. ಈ ಬಗ್ಗೆ ಪ್ರಧಾನಮಂತ್ರಿಗೆ ಪತ್ರವನ್ನು ಬರೆದರು. ಶಾಸಕರುಗಳು, ಅಧಿಕಾರಿಗಳು, ಸಾರ್ವಜನಿಕರು ತಮ್ಮ ನೋವನ್ನು ವ್ಯಕ್ತಪಡಿಸಿದರು. ಈಗ ಒಬ್ಬ ಬಿಜೆಪಿ ಶಾಸಕರ ಮನೆ ಮೇಲೆ ದಾಳಿ ಮಾಡಲಾಗಿದೆ. ಸುಮಾರು ಎಂಟು ಕೋಟಿ ಸಿಕ್ಕಿದೆ ಅಂತ ಲೋಕಾಯುಕ್ತರು ತಿಳಿಸಿದ್ದಾರೆ ಎಂದು ಡಿಕೆಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಲೋಕಾಯುಕ್ತರಿಗೆ ಡಿಕೆಶಿ ಅಭಿನಂದನೆ: ನಾನು ಲೋಕಾಯುಕ್ತರಿಗೆ ಕೈಜೋಡಿಸಿ ಅಭಿನಂದಿಸುತ್ತೇನೆ. ರಾಜ್ಯವನ್ನು ರಕ್ಷಿಸಲು ಲೋಕಾಯುಕ್ತರು ಸಹಕಾರವನ್ನು ಕೊಡುತ್ತಿದ್ದಾರೆ. ಇವತ್ತು ನಾವು ನೀವೆಲ್ಲ ಮುಖ್ಯಮಂತ್ರಿಗಳ ರಾಜೀನಾಮೆಗೆ ಒತ್ತಾಯಿಸುತ್ತಿದ್ದೇವೆ. ಮುಖ್ಯಮಂತ್ರಿಗಳು ರಾಜೀನಾಮೆ ನೀಡಲೇಬೇಕಾಗಿದೆ. ಹೀಗಾಗಿ ಶನಿವಾರ ಕಾಂಗ್ರೆಸ್ ಕಚೇರಿಯ ಬಳಿ ಎಲ್ಲರೂ ಸೇರಿ ಸಿಎಂ ವಜಾಕ್ಕೆ ಆಗ್ರಹಿಸೋಣ ಎಂದು ವಿಡಿಯೋ ಹೇಳಿಕೆ ಮೂಲಕ ಕರೆ ನೀಡಿದ್ದಾರೆ. ಈ ಪ್ರತಿಭಟನೆಯಲ್ಲಿ ರಾಜ್ಯ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿಯ ರಣದೀಪ್ ಸಿಂಗ್ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷರುಗಳು, ಪಕ್ಷದ ಹಿರಿಯ ಮುಖಂಡರುಗಳು, ಸಂಸದರು, ಶಾಸಕರುಗಳು, ಕೆಪಿಸಿಸಿ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.
ಇದನ್ನೂ ಓದಿ: ಲೋಕಾಯುಕ್ತ ದಾಳಿ ವಿಚಾರ... ಬಿಜೆಪಿ ಮೇಲೆ ಯಾವುದೇ ಪರಿಣಾಮ ಬೀರಲ್ಲ: ಆರಗ ಜ್ಞಾನೇಂದ್ರ
ಬಿಜೆಪಿ ಸರ್ಕಾರ ವಜಾಕ್ಕೆ ರಾಜ್ಯಪಾಲರಿಗೆ ಮನವಿ: ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಲೋಕಾಯುಕ್ತರ ಬಲೆಗೆ ಸಿಕ್ಕಿಬಿದ್ದ ಹಿನ್ನೆಲೆ ಕೂಡಲೇ ಬಿಜೆಪಿ ಸರ್ಕಾರವನ್ನು ವಜಾಗೊಳಿಸುವಂತೆ ಕೆಪಿಸಿಸಿ ನಿಯೋಗವು ಶುಕ್ರವಾರ ರಾಜ್ಯಪಾಲರನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಿದೆ. ಪ್ರಶಾಂತ್ ಮಾಡಾಳ್ ಲಂಚ ಪಡೆಯುತ್ತಿರುವ ಸಂದರ್ಭದಲ್ಲಿ ನೇರವಾಗಿ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಕೂಡಲೇ ಭ್ರಷ್ಟ ಬಿಜೆಪಿ ಸರ್ಕಾರವನ್ನು ವಜಾಗೊಳಿಸಬೇಕು ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಕಾಂಗ್ರೆಸ್ನ ಎಸ್. ಮನೋಹರ್ ನೇತೃತ್ವದ ನಿಯೋಗ ಮನವಿ ಸಲ್ಲಿಸಿದೆ.
'ಕರ್ನಾಟಕ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಪ್ರತಿ ಹಂತದಲ್ಲೂ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ. ಈ ಸರ್ಕಾರದಿಂದ ಪ್ರಾಮಾಣಿಕವಾಗಿ ಆಡಳಿತ ನಡೆಸುವ ಪ್ರಯತ್ನ ಇದುವರೆಗೂ ನಡೆದಿಲ್ಲ ಎಂದು ಬಿಜೆಪಿಯ ಮಂತ್ರಿಗಳು, ಶಾಸಕರು, ನಿಗಮ ಮಂಡಳಿ ಅಧ್ಯಕ್ಷರು ಸಹ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ. ಇನ್ನು, ಅಧಿಕಾರಿಗಳ ಮಟ್ಟದಲ್ಲಿ ದಿನನಿತ್ಯದ ಭ್ರಷ್ಟಾಚಾರದ ಪ್ರಕರಣಗಳು ವರದಿಯಾಗುತ್ತಲೇ ಇದ್ದರೂ ಇದುವರೆಗೂ ಸೂಕ್ತ ಕ್ರಮವನ್ನು ಸರ್ಕಾರ ಕೈಗೊಂಡಿರುವುದಿಲ್ಲ' ಎಂದು ಮನವಿ ಪತ್ರದಲ್ಲಿ ದೂರಲಾಗಿದೆ.