ಬೆಂಗಳೂರು: ಚಿಲುಮೆ ಸಂಸ್ಥೆಯಿಂದ ಮತದಾರರ ಮಾಹಿತಿ ಅಕ್ರಮ ಸಂಗ್ರಹ ಆರೋಪದ ಹಿನ್ನೆಲೆ ಕೇಂದ್ರ ಚುನಾವಣಾ ಆಯೋಗಕ್ಕೆ ಶನಿವಾರ ಕಾಂಗ್ರೆಸ್ ನಾಯಕರು ದೂರು ಸಲ್ಲಿಸಿದರು.
ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೇತೃತ್ವದ ನಿಯೋಗ ದೂರು ಸಲ್ಲಿಸಿತು. ಮಾಜಿ ಸಚಿವ ಕೃಷ್ಣ ಬೈರೇಗೌಡ, ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ, ಶಾಸಕರಾದ ಸೌಮ್ಯ ರೆಡ್ಡಿ, ರಿಜ್ವಾನ್ ಹರ್ಷದ್ ಸಾಥ್ ನೀಡಿದರು.
ಪೊಲೀಸ್ ಬಿಗಿ ಭದ್ರತೆ: ಮತದಾರರ ಮಾಹಿತಿ ಅಕ್ರಮವಾಗಿ ಸಂಗ್ರಹಿಸಿರುವುದು ಚುನಾವಣೆ ಪ್ರಕ್ರಿಯೆ ಭ್ರಷ್ಟಾಚಾರಗೊಳಿಸುವ ಹುನ್ನಾರ ಎಂದು ಆರೋಪಿಸಿ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕರು ದೂರು ಸಲ್ಲಿಸಲು ಆಗಮಿಸಿದ ಹಿನ್ನೆಲೆ ಸ್ಥಳದಲ್ಲಿ ದಿಢೀರ್ ಪ್ರತಿಭಟನೆಗೆ ಕೈ ನಾಯಕರು ಮುಂದಾಗಬಹುದು ಎಂಬ ಕಾರಣಕ್ಕೆ ಪೊಲೀಸ್ ಇಲಾಖೆ ವಿಶೇಷ ಎಚ್ಚರಿಕೆ ವಹಿಸಿತ್ತು. ಸ್ಥಳದಲ್ಲಿ ಹೆಚ್ಚುವರಿ ಪೊಲೀಸ್ ರನ್ನು ಭದ್ರತೆಗೆ ನಿಯೋಜಿಸಿತ್ತು. ಬ್ಯಾರಿಕೇಡ್ ಹಾಕಿ ಬಂದೋಬಸ್ತ್ ಮಾಡಿರುವ ಪೊಲೀಸರು ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದರು. ನಿನ್ನೆ ಧರಣಿ ಮಾಡುವುದಾಗಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿತ್ತು.
ಎಫ್ ಐಆರ್ ದಾಖಲಿಸಲು ಆಗ್ರಹ: ಕಾಂಗ್ರೆಸ್ ದೂರು ಸಲ್ಲಿಸಿದ ಬಳಿಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಇದುವರೆಗೂ ಚುನಾವಣಾ ಅಕ್ರಮದಲ್ಲಿ ಭಾಗಿಯಾದವರನ್ನೂ ಅರೆಸ್ಟ್ ಮಾಡಿಲ್ಲ. ನೆಪಕ್ಕೆ ಮಾತ್ರ ವಶಕ್ಕೆ ಪಡೆದಿದ್ದಾರೆ. ಯಾರೋ ಒಬ್ಬ ಇಬ್ಬರ ಮೇಲೆ ಮಾಡಿದ್ರೆ ಆಗಲ್ಲ. ಅದರಲ್ಲಿ ಭಾಗಿಯಾದವರ ಎಲ್ಲರ ಮೇಲೆಯೂ ಎಫ್ ಐಆರ್ ದಾಖಲಿಸಬೇಕು. ಐಡಿ ಕಾರ್ಡ್ ಯಾರು ಪಡೆದಿದ್ದಾರೆ ಕೇಸ್ ಹಾಕಬೇಕು. ಚೀಫ್ ಜಸ್ಟೀಸ್ ಅವರು ಸುಮೊಟೋ ಅಡಿ ಕೇಸ್ ದಾಖಲಿಸಿ, ಅವರ ಮಾರ್ಗದರ್ಶನದಲ್ಲೇ ತನಿಖೆಯಾಗಬೇಕು. ಅವರು ಏನು ತಪ್ಪು ಮಾಡಿದ್ದಾರೆ ಗೊತ್ತಾಗಬೇಕು. ಬಿಬಿಎಂಪಿ ವಿಶೇಷ ಆಯುಕ್ತ ತುಷಾರ್ ಗಿರಿನಾಥ್ ಗೆ ಯಾರೇ ಇನ್ವಾಲ್ವ್ ಆಗಿರಲಿ. ಯಾರು ಕಾರ್ಡ್ ಎಷ್ಟೂ ಮಾಡಿದರೂ ಅವರ ಮೇಲೆ ಕೇಸ್ ಹಾಕಬೇಕು ಎಂದರು.
ಮಾಜಿ ಸಿಎಂ ಕುಮಾರಸ್ವಾಮಿ ಬೇರೆ ಪಾರ್ಟಿಯವರು. ನಾನು ಒಬ್ಬ ಜನಪ್ರತಿನಿಧಿಯಾಗಿ ಮಾತನಾಡುತ್ತಿದ್ದೇನೆ. ಇದು ಕ್ರಿಮಿನಲ್ ಅಫೆನ್ಸ್. ಮತದಾನದ ಹಕ್ಕನ್ನು ಕಿತ್ತುಕೊಂಡಿದ್ದಾರೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ. ಇದಕ್ಕೆ ಸಿಎಂ ಬೊಮ್ಮಾಯಿ ಗ್ಯಾರೆಂಟಿ ಆಗಬಹುದಲ್ಲ. ಅವರ ಫೋನ್ ನಂಬರ್ ತೆಗೆಯಿರಿ. ಯಾರ್ಯಾರು ಇದ್ದಾರೆ ಅವರು ಹೊರಬರ್ತಾರೆ. ಎಷ್ಟು ದಿನ ಎಷ್ಟು ಗಂಟೆ ಫೋನ್ ಸಂಪರ್ಕದಲ್ಲಿದ್ದಾರೆ, ಅಲ್ಲಿ ಕೆಲಸ ಮಾಡುವವರೇ ನಮಗೆ ದಾಖಲೆಗಳನ್ನ ತಂದುಕೊಟ್ಟಿದ್ದಾರೆ ಎಂದು ಹೇಳಿದರು.
ಧರಣಿ ನಡೆಸಿದ ಕಾರ್ಯಕರ್ತರು: ಕಾಂಗ್ರೆಸ್ ಕಾರ್ಯಕರ್ತರು ಚುನಾವಣಾ ಆಯೋಗದ ಎದುರು ಧರಣಿ ನಡೆಸಿದರು. ಒಂದೆಡೆ ಕಾಂಗ್ರೆಸ್ ನಾಯಕರ ನಿಯೋಗ ದೂರು ಸಲ್ಲಿಸಲು ಒಳಗೆ ತೆರಳಿದರೆ, ಕಾರ್ಯಕರ್ತರು ಹೊರಗೆ ಧರಣಿ ನಡೆಸಿದರು. ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂಓದಿ:ಕಾಂಗ್ರೆಸ್ನಿಂದ 1.50 ಲಕ್ಷಕ್ಕೂ ಹೆಚ್ಚು ಅಲ್ಪಸಂಖ್ಯಾತ ಮತದಾರರ ಹೆಸರು ಅಕ್ರಮ ಸೇರ್ಪಡೆ: ಎನ್ ಆರ್ ರಮೇಶ್