ಬೆಂಗಳೂರು: ಕಾಂಗ್ರೆಸ್ನ ಚುನಾವಣಾ ಚಾಣಾಕ್ಷ ಸುನೀಲ್ ಕನುಗೋಳು ಅವರನ್ನು ಮುಖ್ಯಮಂತ್ರಿಗಳ ಮುಖ್ಯ ಸಲಹೆಗಾರರನ್ನಾಗಿ ನೇಮಕ ಮಾಡಲಾಗಿದೆ. ಈ ಸಂಬಂಧ ಆದೇಶ ಹೊರಡಿಸಿರುವ ಸಿಎಂ ಸಿದ್ದರಾಮಯ್ಯ, ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಮುಖ್ಯಮಂತ್ರಿಗಳ ಮುಖ್ಯ ಸಲಹೆಗಾರರು ಎಂದು ನೇಮಿಸಿ ಸಂಪುಟ ದರ್ಜೆಯ ಸಚಿವರ ಸ್ಥಾನಮಾನದೊಂದಿಗೆ, ಲಭ್ಯವಿರುವ ಎಲ್ಲ ಸೌಲಭ್ಯಗಳನ್ನು ಒದಗಿಸಲು ಆದೇಶ ಹೊರಡಿಸಲು ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದಾರೆ.
ಸುನೀಲ್ ಕನುಗೋಳು ಕಾಂಗ್ರೆಸ್ ಚುನಾವಣಾ ಸ್ಟ್ರೇಟಜಿಸ್ಟ್ ಆಗಿದ್ದು, ಕಾಂಗ್ರೆಸ್ ಅಧಿಕಾರದ ಗದ್ದುಗೆ ಹಿಡಿಯುವಲ್ಲಿ ಮುಖ್ಯ ಪಾತ್ರವಹಿಸಿದ್ದರು. ಚುನಾವಣಾ ಪೂರ್ವ ಗ್ಯಾರಂಟಿ ಕಾರ್ಡ್‌ಗಳನ್ನು ಹಂತ ಹಂತವಾಗಿ ಘೋಷಿಸಿ ಜನರ ಮನಮುಟ್ಟುವಂತೆ ಮಾಡುವಲ್ಲಿ ಕನುಗೋಳು ಪಾತ್ರ ಪ್ರಮುಖವಾಗಿದೆ. ಹೀಗಾಗಿ ಇದೀಗ ಸಿದ್ದರಾಮಯ್ಯ ಚುನಾವಣಾ ತಂತ್ರಗಾರನಿಗೆ ತಮ್ಮ ಮುಖ್ಯ ಸಲಹೆಗಾರನಾಗಿ ಮಣೆ ಹಾಕಿದ್ದಾರೆ.
ಪೇಸಿಎಂ, ಸೇಸಿಎಂ ಅಭಿಯಾನ, ಉಚಿತ ಗ್ಯಾರಂಟಿಗಳ ಹಿಂದಿನ ಸೂತ್ರಧಾರಿ ಸುನೀಲ್ ಕನುಗೋಳು ಅವರೇ ಎನ್ನಲಾಗಿದೆ. ಪಕ್ಷ ಗೆಲ್ಲುವಲ್ಲಿ ತೆರೆಮರೆಯಲ್ಲಿ ತಂತ್ರಗಾರಿಕೆ ಹೆಣೆದಿದ್ದ ಸುನೀಲ್ ಈಗ ಆಡಳಿತದಲ್ಲೂ ಸಿಎಂಗೆ ಮುಖ್ಯ ಸಲಹೆಗಾರರಾಗಿ ಜವಾಬ್ದಾರಿ ನಿಭಾಯಿಸಲಿದ್ದಾರೆ. ಐದು ಗ್ಯಾರಂಟಿ ಸ್ಕೀಂಗಳ ಸುಗಮ ಅನುಷ್ಠಾನಕ್ಕಾಗಿ ಇವರು ಸಿಎಂ ಸಿದ್ದರಾಮಯ್ಯಗೆ ಸಲಹೆಗಳನ್ನು ನೀಡಲಿದ್ದಾರೆ ಎಂದು ವಿಶ್ವಸನೀಯ ಮೂಲಗಳು ಮಾಹಿತಿ ನೀಡಿವೆ. ಇವರು ಪಂಚ ಗ್ಯಾರಂಟಿ ಜಾರಿಯಲ್ಲಿ ಯಾವುದೇ ಎಡವಟ್ಟು, ಗೊಂದಲ, ವಿವಾದ ಸೃಷ್ಟಿಯಾಗದಂತೆ ನೋಡಿಕೊಳ್ಳುವ ಸಾಧ್ಯತೆ ಇದೆ.
ಇದನ್ನೂ ಓದಿ: 40% ಕಮಿಷನ್ ಆರೋಪ; ಕಮಲ ವಿರುದ್ಧ ಕಾಂಗ್ರೆಸ್ ಹೋರಾಟ ಯಶಸ್ವಿ
ಯಾರು ಈ ಸುನೀಲ್ ಕನುಗೋಳು?: ಸುನೀಲ್ ಕನುಗೋಳು ಟೀಂ ಚುನಾವಣಾ ಪೂರ್ವ ಕಾಂಗ್ರೆಸ್ ಸ್ಥಿತಿಗತಿ ಕುರಿತು ಮಾಡಿದ ಸಮೀಕ್ಷೆ ಆಧಾರದಲ್ಲೇ ಚುನಾವಣಾ ರಣತಂತ್ರ ಹೆಣೆಯಲಾಗಿತ್ತು ಎನ್ನಲಾಗಿದೆ. ಅಭ್ಯರ್ಥಿಗಳ ಆಯ್ಕೆ, ಕ್ಷೇತ್ರದ ಸ್ಥಿತಿಗತಿ, ರಾಜಕೀಯ ದಾಳ, ಬಿಜೆಪಿ ತಂತ್ರಗಾರಿಕೆಗಳಿಗೆ ಪ್ರತಿತಂತ್ರ ಹೆಣೆಯುವ ಮೂಲಕ ಕನುಗೋಳು ಕಾಂಗ್ರೆಸ್ನ ಭರ್ಜರಿ ಗೆಲುವಿಗೆ ಕಾರಣರಾಗಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಚುನಾವಣಾ ತಂತ್ರಗಾರಿಕೆಯ ಚಾಣಾಕ್ಷ ಪ್ರಶಾಂತ್ ಕಿಶೋರ್ ಟೀಮ್‌ನಲ್ಲಿ ಕೆಲಸ ಮಾಡಿದ್ದ ಅನುಭವ ಇವರಿಗಿದೆ. 2017 ರ ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿ ಜೊತೆ ಸುನಿಲ್ ಕನುಗೋಳು ಕೆಲಸ ಮಾಡಿದ್ದರು. ಕರ್ನಾಟಕ ಚುನಾವಣೆಯ ಆರೇಳು ತಿಂಗಳ ಹಿಂದೆ ಕಾಂಗ್ರೆಸ್ ಟಾಸ್ಕ್ ಫೋರ್ಸ್ ಸೇರಿದ್ದರು. ಬಳ್ಳಾರಿ ಮೂಲದ ಇವರು ಹಿಂದಿನ ಬಿಜೆಪಿ ಸರ್ಕಾರದ ಕಮಿಷನ್ ಆರೋಪವನ್ನು ಜನರ ಬಳಿಗೆ ತಲುಪಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಮಾಡಿದ್ದ ಪೇಸಿಎಂ ಅಭಿಯಾನದ ಹಿಂದಿನ ರೂವಾರಿ. ಬಿಜೆಪಿ ವಿರುದ್ಧ ಡಿಜಿಟಲ್ ಅಭಿಯಾನ, ಚುನಾವಣಾ ತಂತ್ರಗಾರಿಕೆ ಹಿಂದಿನ ರೂವಾರಿಯಾಗಿದ್ದ ಚುನಾವಣಾ ಚಾಣಕ್ಯನನ್ನು ಈಗ ಕರ್ನಾಟಕ ಮುಖ್ಯಮಂತ್ರಿಯ ಮುಖ್ಯ ಸಲಹೆಗಾರನಾಗಿ ನೇಮಿಸಲಾಗಿದೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಕಾಂಗ್ರೆಸ್ ದಿಗ್ವಿಜಯ: ಅದ್ವಿತೀಯ ಸಾಧನೆಯ ಹಿಂದಿನ ರೂವಾರಿ ಇವರೇ ಅಂತೆ!