ಬೆಂಗಳೂರು: ವಿಧಾನಸಭೆ ಚುನಾವಣೆಗೆ 42 ಅಭ್ಯರ್ಥಿಗಳನ್ನು ಒಳಗೊಂಡ ಎರಡನೇ ಪಟ್ಟಿಯನ್ನು ಕಾಂಗ್ರೆಸ್ ಹೈಕಮಾಂಡ್ ಇಂದು ಬಿಡುಗಡೆ ಮಾಡಿದ್ದು, ಎರಡು ದಿನದಿಂದ ನಿರಂತರವಾಗಿ ನಡೆಸಿದ ಪ್ರಯತ್ನಕ್ಕೆ ಫಲ ಸಿಕ್ಕಿದೆ. ರಾಜ್ಯ ಕಾಂಗ್ರೆಸ್ ನಾಯಕರು ದಿಲ್ಲಿಯಲ್ಲಿ ಕಳೆದ ಎರಡು ದಿನಗಳಿಂದ ಹೈಕಮಾಂಡ್ ನಾಯಕರ ಜತೆ ಚರ್ಚಿಸಿ ಕೊನೆಗೂ ಪಟ್ಟಿ ಪ್ರಕಟಿಸುವಲ್ಲಿ ಸಫಲವಾಗಿದ್ದಾರೆ.
ಮೊದಲ ಪಟ್ಟಿಯಲ್ಲಿ 124 ಮಂದಿಯ ಹೆಸರು ಪ್ರಕಟವಾಗಿತ್ತು. ಎರಡನೇ ಪಟ್ಟಿಗಾಗಿ 100 ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಯತ್ನದಲ್ಲಿ ರಾಜ್ಯ ನಾಯಕರು ರಾಷ್ಟ್ರೀಯ ನಾಯಕರ ಜತೆ ಚರ್ಚಿಸಿ 42 ಸ್ಥಾನಗಳನ್ನು ಅಂತಿಮಗೊಳಿಸಿಕೊಳ್ಳುವಲ್ಲಿ ಸಫಲವಾಗಿದ್ದಾರೆ. ಇನ್ನು ಅಂತಿಮ ಹಾಗೂ ಮೂರನೇ ಪಟ್ಟಿಯಲ್ಲಿ 58 ಘಟಾನುಘಟಿಗಳ ಹೆಸರು ಪ್ರಕಟವಾಗಬೇಕಿದೆ.
ಕಾಂಗ್ರೆಸ್ ಎರಡನೇ ಪಟ್ಟಿಯಲ್ಲಿಯೂ ಸಿದ್ದರಾಮಯ್ಯ ಅವರ ಕೋಲಾರ ಸ್ಪರ್ಧೆ ಇನ್ನೂ ಸಸ್ಪೆನ್ಸ್ ಆಗಿಯೇ ಉಳಿದಿದೆ. ಪುಲಿಕೇಶಿನಗರ, ದಾಸರಹಳ್ಳಿ ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿಯೇ ಉಳಿದಿದೆ. ವಿಶೇಷ ಅಂದರೆ ತೀರ್ಥಹಳ್ಳಿಯ ಟಿಕೆಟ್ ಕೊನೆಗೂ ಕಿಮ್ಮನೆ ರತ್ನಾಕರ್ಗೆ ಘೋಷಣೆಯಾಗಿದೆ. ಇಲ್ಲಿಂದ ಪ್ರಬಲ ಆಕಾಂಕ್ಷಿಯಾಗಿದ್ದ ಮಂಜುನಾಥ್ ಗೌಡಗೆ ನಿರಾಸೆಯಾಗಿದೆ. ಮಂಜುನಾಥ ಗೌಡಗೆ ಎಂಎಲ್ಸಿ ಸ್ಥಾನದ ಭರವಸೆ ಸಿಕ್ಕಿದೆ. ಕಡೂರು ಟಿಕೆಟ್ ಡಿಕೆಶಿ ಆಪ್ತ ಕೆ.ಎಸ್ ಆನಂದ್ಗೆ ಲಭಿಸಿದ್ದು, ಬಹು ನಿರೀಕ್ಷೆಯೊಂದಿಗೆ ಕಾಂಗ್ರೆಸ್ ಸೇರಿದ್ದ ಜೆಡಿಎಸ್ ನಾಯಕ ವೈಎಸ್ವಿ ದತ್ತಗೆ ನಿರಾಸೆ ಕಾಡಿದೆ.
ಯಶವಂತಪುರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ ಆಗಿದ್ದು, ಎಸ್ ಬಾಲರಾಜಗೌಡಗೆ ಟಿಕೆಟ್ ಸಿಕ್ಕಿದೆ. ಈ ಹಿಂದೆ ಆಪರೇಷನ್ ಕಮಲಕ್ಕೆ ಒಳಗಾಗಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ ಸಚಿವರಾಗಿರುವ ಎಸ್.ಟಿ. ಸೋಮಶೇಖರ್ ಪಕ್ಷಕ್ಕೆ ಮರಳುತ್ತಾರೆ ಎಂಬ ಮಾತು ಈಗ ಬೆಲೆ ಕಳೆದುಕೊಂಡಿದೆ. ಸಚಿವ ಎಸ್ಟಿ ಸೋಮಶೇಖರ್ ವಿರುದ್ಧ ಬಾಲರಾಜಗೌಡ ಕಣಕ್ಕಿಳಿಯಲಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ನಿಂದ 42 ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ.. ಯಾವ ಕ್ಷೇತ್ರಕ್ಕೆ ಯಾರು ನೋಡಿ
ಬಾಬೂರಾವ್ ಚಿಂಚನಸೂರ್ಗೆ ಗುರುಮಠಕಲ್ನಿಂದ ಟಿಕೆಟ್ ಲಭಿಸಿದ್ದು, ಕಡೆಯ ಕ್ಷಣದಲ್ಲಿ ಬಿಜೆಪಿ ವಿಧಾನ ಪರಿಷತ್ ಸದಸ್ಯತ್ವ ತೊರೆದು ಬಂದಿದ್ದಕ್ಕೂ ಸಾರ್ಥಕತೆ ಸಿಕ್ಕಿದೆ. ಬಿಜೆಪಿ ಸೇರಿ 2019ರಲ್ಲಿ ಇಂದಿನ ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕಲಬುರುಗಿ ಲೋಕಸಭೆ ಚುನಾವಣೆಯಲ್ಲಿ ಸೋಲಲು ಕಾರಣರಾಗಿದ್ದರಿಂದ ಕೈ ಹಿಡಿದರೂ ಟಿಕೆಟ್ ಸಿಗುವುದು ಅನುಮಾನ ಎನ್ನಲಾಗಿತ್ತು. ಆದರೆ, ಎರಡನೇ ಪಟ್ಟಿಯಲ್ಲಿ ಅವರು ಅವಕಾಶ ಗಿಟ್ಟಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ.
ಧಾರವಾಡದಿಂದ ವಿನಯ್ ಕುಲಕರ್ಣಿ ಕಣಕ್ಕಿಳಿದಿದ್ದಾರೆ. ವಿನಯ್ ಕುಲಕರ್ಣಿ ಅವರ ಮೇಲೆ ಶಿಗ್ಗಾಂವಿಯಿಂದ ಸ್ಪರ್ಧೆ ಮಾಡಲು ಒತ್ತಡವಿತ್ತು. ಕೊನೆಗೂ ಅವರು ಬಯಸಿದಂತೆ ತವರು ಕ್ಷೇತ್ರದಲ್ಲೇ ಟಿಕೆಟ್ ಘೋಷಣೆ ಆಗಿದೆ. ಈ ಕ್ಷೇತ್ರದಲ್ಲಿ ಅತಿ ಹೆಚ್ಚು ಪಂಚಮಸಾಲಿಗಳಿದ್ದಾರೆ. ವಿನಯ್ ಕುಲಕರ್ಣಿ ಸ್ಪರ್ಧೆ ಮಾಡಿದ್ದರೆ ಶಿಗ್ಗಾಂವಿಯಲ್ಲಿ ಸಿಎಂಗೆ ಹೆಚ್ಚಿನ ಪ್ರತಿರೋಧ ಉಂಟಾಗಲಿದೆ ಎಂದು ವಿಶ್ಲೇಷಣೆ ಮಾಡಲಾಗಿತ್ತು. ಆದರೆ, ಈ ವಿಚಾರಕ್ಕೀಗ ಬ್ರೇಕ್ ಬಿದ್ದಿದೆ.
ಇನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬೆಂಬಲಿಗ ನಾಗರಾಜ್ ಛಬ್ಬಿಗೆ ನಿರಾಸೆ ಉಂಟಾಗಿದೆ. ಇಲ್ಲಿ ಸಿದ್ದರಾಮಯ್ಯ ಕೈ ಮೇಲಾಗಿದ್ದು, ತಮ್ಮ ಆಪ್ತ ಸಂತೋಷ್ ಲಾಡ್ಗೆ ಕಲಘಟಗಿ ಕೈ ಟಿಕೆಟ್ ಲಭಿಸುವಂತೆ ನೋಡಿಕೊಂಡಿದ್ದಾರೆ. ಮೇಲುಕೋಟೆ ಟಿಕೆಟ್ ದರ್ಶನ್ ಪುಟ್ಟಣ್ಣಯ್ಯಗೆ ಮೀಸಲಾಗಿದೆ. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ದರ್ಶನ್ ಪುಟ್ಟಣ್ಣಯ್ಯ ಕಳೆದ ಬಾರಿಯೂ ಸ್ಪರ್ಧಿಸಿ ಸೋತಿದ್ದರು. ಈ ಸಲವೂ ಅವರಿಗೆ ಬೆಂಬಲ ಸೂಚಿಸಲಾಗಿದೆ.
ಪುಲಕೇಶಿನಗರದ ಟಿಕೆಟ್ ಇನ್ನು ಕಂಗಂಟಾಗಿಯೇ ಉಳಿದಿದೆ. ಹಾಲಿ ಶಾಸಕ ಅಖಂಡ ಶ್ರೀನಿವಾಸ ಮೂರ್ತಿಗೆ ಟಿಕೆಟ್ ತಡೆ ಹಿಡಿಯಲಾಗಿದೆ. ಮೊದಲನೇ ಪಟ್ಟಿಯಲ್ಲಿ ಹೆಸರು ಕೈ ತಪ್ಪಿದ್ದ ಹಿನ್ನೆಲೆ ಸಾಕಷ್ಟು ಓಡಾಡಿ ರಾಜ್ಯ ನಾಯಕರ ಮನವೋಲಿಸುವ ಯತ್ನ ಮಾಡಿದ್ದ ಅಖಂಡಗೆ ಎರಡನೇ ಪಟ್ಟಿಯಲ್ಲಿ ಅವಕಾಶ ಸಿಗಬಹುದು ಎನ್ನಲಾಗಿತ್ತು. ಆದರೆ ಇದುವರೆಗೂ ಅವರಿಗೆ ಅವಕಾಶ ಸಿಕ್ಕಿಲ್ಲ. ಕಳೆದ ಬಾರಿ ಇದೇ ರೀತಿ ಶಾಂತಿನಗರ ಕಾಂಗ್ರೆಸ್ ಶಾಸಕ ಎನ್.ಎ. ಹ್ಯಾರಿಸ್ ಕಾಯುವ ಸ್ಥಿತಿ ಎದುರಾಗಿತ್ತು. ಅಂತಿಮ ಕ್ಷಣದಲ್ಲಿ ಇವರಿಗೆ ಪಕ್ಷ ಟಿಕೆಟ್ ಘೋಷಿಸಿತ್ತು. ಈಗ ಅಖಂಡ ವಿಚಾರದಲ್ಲಿಯೂ ಅದೇ ಸ್ಥಿತಿ ಮುಂದುವರೆದಿದ್ದು, ಅವರು ಮೂರನೇ ಪಟ್ಟಿ ಬಿಡುಗಡೆವರೆಗೂ ಕಾಯಬೇಕಾಗಿದೆ.
ಅಖಂಡ ಅವರು ಕಳೆದ ಸಾರಿ ಚುನಾವಣೆಯಲ್ಲಿ ನಿಂತು ಅತಿ ಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದರು. ರಾಜ್ಯದಲ್ಲಿಯೇ ದೊಡ್ಡ ಅಂತರದಲ್ಲಿ ಗೆದ್ದ ಶಾಸಕ ಎನಿಸಿಕೊಂಡಿದ್ದರು. ಆದರೆ, ಇಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಮ್ಮ ಬಣದಲ್ಲಿ ಗುರುತಿಸಿಕೊಂಡಿರುವ ಮಾಜಿ ಶಾಸಕ ಪ್ರಸನ್ನಕುಮಾರ್ ಇಲ್ಲವೇ ಮಾಜಿ ಮೇಯರ್ ಸಂಪತ್ರಾಜ್ಗೆ ಟಿಕೆಟ್ ಕೊಡಿಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬಣದಲ್ಲಿ ಅಖಂಡ ಗುರುತಿಸಿಕೊಂಡಿದ್ದಾರೆ.
ಜಾತಿವಾರು ಲೆಕ್ಕಾಚಾರ: ಎರಡನೇ ಪಟ್ಟಿಯಲ್ಲಿ ಕಾಂಗ್ರೆಸ್ ಪಕ್ಷ 42 ಅಭ್ಯರ್ಥಿಗಳ ಟಿಕೆಟ್ ಫೈನಲ್ ಮಾಡಿದ್ದು, ಜಾತಿವಾರು ಲೆಕ್ಕಾಚಾರ ಹಾಕಿದರೆ ಲಿಂಗಾಯಿತರಿಗೆ 10+1 (ರೆಡ್ಡಿ ಲಿಂಗಾಯತ) ಸೇರಿ 11, ಕುರುಬ - 3, ಒಕ್ಕಲಿಗ - 10+ ದರ್ಶನ್ ಪುಟ್ಟಣ್ಣಯ್ಯ ಸೇರಿ 11, ಮುಸ್ಲಿಂ - 3, ಒಬಿಸಿ - 1, ಮೊಗವೀರ - 2, ರೆಡ್ಡಿ - 1, ರಜಪೂತ - 1, ಮರಾಠಿ - 1, ನಾಯ್ದು- 1, ಈಡಿಗ - 1, ಎಸ್ ಸಿ ಎಡ- 2, ಎಸ್ ಸಿ ಬಲ - 2, ಎಸ್ ಟಿ - 2 ಮಂದಿಗೆ ಲಭಿಸಿದೆ.
ತುಮಕೂರು ಕಾಂಗ್ರೆಸ್ನಲ್ಲಿ ತೀವ್ರ ಅಸಮಾಧಾನ ಭುಗಿಲೆದ್ದಿದೆ. ನಿಜವಾದ ಕಾಂಗ್ರೆಸಿಗರಿಗೆ ಅನ್ಯಾಯ ಆಗಿದೆ ಎಂಬ ಆರೋಪ ಕೇಳಿ ಬಂದಿದೆ. ಅತೀಕ್ ಅಹ್ಮದ್, ರಫಿಕ್ ಅಹ್ಮದ್ಗೆ ಟಿಕೆಟ್ ಮಿಸ್ ಆಗಿದ್ದು, ಇಬ್ಬರ ಬೆಂಬಲಿಗರಿಂದ ಅಸಮಾಧಾನ ವ್ಯಕ್ತವಾಗಲಿದೆ ಎನ್ನಲಾಗಿದೆ. ಅತೀಕ್ ಅಹ್ಮದ್ ಸಂಪರ್ಕಿಸಿರುವ ಎಎಪಿ ನಾಯಕರು ಪಕ್ಷಕ್ಕೆ ಆಹ್ವಾನಿಸಿದ್ದಾರೆ. ಆಪ್ನಿಂದ ಸ್ಪರ್ಧೆಗೆ ಮುಂದಾಗ್ತಾರಾ ಅತೀಕ್ ಅಹ್ಮದ್? ಎಂಬ ಪ್ರಶ್ನೆ ಕಾಡಿದೆ. ಅತೀಕ್ ಅಹ್ಮದ್ ಜೊತೆ ಬೆಳಗ್ಗೆಯಿಂದ ಆಪ್ ಮುಖಂಡರು ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
ಎರಡನೇ ಪಟ್ಟಿಯಲ್ಲಿ ಸಿದ್ದು ಆಪ್ತರಿಗೆ ಟಿಕೆಟ್: ಎರಡನೇ ಪಟ್ಟಿಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಮ್ಮ ಬಹುತೇಕ ಆಪ್ತರಿಗೆ ಟಿಕೆಟ್ ಕೊಡಿಸುವಲ್ಲಿ ಸಕ್ಸಸ್ ಆಗಿದ್ದಾರೆ. ಅಖಂಡ ಶ್ರೀನಿವಾಸ ಮೂರ್ತಿ ಹೊರತುಪಡಿಸಿದರೆ ಉಳಿದವರಿಗೆ ಟಿಕೆಟ್ ಕೈತಪ್ಪದಂತೆ ನೋಡಿಕೊಂಡಿದ್ದಾರೆ. ತಮ್ಮವರಾದ ಕಿಮ್ಮನೆ ರತ್ನಾಕರ್, ಆರ್.ಬಿ.ತಿಮ್ಮಾಪೂರ, ಹೆಚ್.ಆಂಜನೇಯ, ಜೆ.ಟಿ.ಪಾಟೀಲ್, ಹೆಚ್.ವೈ.ಮೇಟಿ, ಎಂ.ವೈ.ಪಾಟೀಲ್, ಇಕ್ಬಾಲ್ ಅನ್ಸಾರಿ, ಬಿ.ಆರ್.ಯಾವಗಲ್, ವಿಜಯ್ ಸಿಂಗ್, ವಿನಯ್ ಕುಲಕರ್ಣಿ, ಸಂತೋಷ್ ಲಾಡ್, ಆನಂದ್ ಎಸ್., ದರ್ಶನ್ ಪುಟ್ಟಣ್ಣಯ್ಯ, ಬಿ.ಎಲ್.ದೇವರಾಜ್, ಮಂಥರ್ ಗೌಡ, ಸಿದ್ದೇಗೌಡಗೆ ಟಿಕೆಟ್ ಕೊಡಿಸುವಲ್ಲಿ ಸಿದ್ದರಾಮಯ್ಯ ಸಫಲವಾಗಿದ್ದಾರೆ ಎಂದು ಪಟ್ಟಿ ಬಳಿಕ ರಾಜಕೀಯ ವಿಶ್ಲೇಷಕರು ವಿಶ್ಲೇಷಣೆ ಮಾಡುತ್ತಿದ್ದಾರೆ.
ಬಾಕಿ ಉಳಿಸಿಕೊಂಡ ಕ್ಷೇತ್ರಗಳು: ತೀವ್ರ ಕುತೂಹಲಕ್ಕೆ ಕಾರಣವಾದ ಕ್ಷೇತ್ರಗಳು ಚನ್ನಪಟ್ಟಣ, ಮದ್ದೂರು, ತರಿಕೆರೆ, ಚಿಕ್ಕಮಗಳೂರು, ಶಿಗ್ಗಾಂವಿ, ಮೂಡಿಗೆರೆ, ಚಿಕ್ಕಪೇಟೆ, ಕೆಆರ್ ಪುರಂ, ಬೊಮ್ಮನಹಳ್ಳಿ, ದಾಸರಹಳ್ಳಿ, ಸಿವಿ ರಾಮನ್ ನಗರ, ಪುಲಿಕೇಶಿ ನಗರ, ಬೆಂಗಳೂರು ದಕ್ಷಿಣ ಕ್ಷೇತ್ರಗಳ ಟಿಕೆಟ್ ಇನ್ನೂ ಘೋಷಣೆಯಾಗಿಲ್ಲ. ಮಂಗಳೂರು ಉತ್ತರ, ಪುತ್ತೂರು, ಕುಮಟಾ, ಭಟ್ಕಳ, ಕೋಲಾರ, ಕಾರ್ಕಳ, ಶಿಕಾರಿಪುರ, ಶಿವಮೊಗ್ಗ ನಗರ ಈ ಕ್ಷೇತ್ರಗಳಲ್ಲಿ ವಲಸಿಗರಿಗೆ ಮಣೆಹಾಕಲು ಕಾಯುತ್ತಿರುವ ಕಾಂಗ್ರೆಸ್ ಮುಂದೆ ಯಾವ ನಿರ್ಧಾರ ಕೈಗೊಳ್ಳಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.
ಹಾಲಿ ಶಾಸಕರಿಗೆ ಘೋಷಣೆಯಾಗದ ಟಿಕೆಟ್: ಪಾವಗಡ ಶಾಸಕ ವೆಂಕಟರಮಣಪ್ಪ, ಶಿಡ್ಲಘಟ್ಟ ಶಾಸಕ ವಿ. ಮುನಿಯಪ್ಪ, ಕುಂದಗೋಳ ಶಾಸಕಿ ಕುಸುಮಾ ಶಿವಳ್ಳಿ, ಹರಿಹರ ಶಾಸಕ ರಾಮಪ್ಪ, ಪುಲಕೇಶಿನಗರ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ, ಸಿದ್ದರಾಮಯ್ಯಗೆ ಟಿಕೆಟ್ ನೀಡಿದ್ದರಿಂದ ವರುಣಾದಿಂದ ಟಿಕೆಟ್ ಕೈತಪ್ಪಿದ್ದ ಡಾ. ಯತೀಂದ್ರ ಸಿದ್ದರಾಮಯ್ಯಗೂ ಬೇರೆ ಕ್ಷೇತ್ರದಿಂದ ಟಿಕೆಟ್ ಘೋಷಣೆಯಾಗಿಲ್ಲ.
ಓದಿ: ಜನ ಸ್ವಾರ್ಥಿಗಳಾಗಿದ್ದು ಹಣ ಪಡೆದು ಮತ ಹಾಕುವ ಚಾಳಿ ಮುಂದುವರೆಸುತ್ತಿದ್ದಾರೆ: ಹೈಕೋರ್ಟ್ ಬೇಸರ