ಬೆಂಗಳೂರು: ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ನಿವಾಸದ ಮೇಲೆ ದಾಳಿಯ ತನಿಖೆಗೆ ರಚನೆಯಾಗಿರುವ ಕಾಂಗ್ರೆಸ್ ಸತ್ಯ ಶೋಧನಾ ಸಮಿತಿ ಸಭೆ ಆರಂಭವಾಗಿದೆ.
ಮಾಜಿ ಡಿಸಿಎಂ ಹಾಗೂ ಮಾಜಿ ಗೃಹ ಸಚಿವರಾಗಿರುವ ಡಾ. ಜಿ.ಪರಮೇಶ್ವರ್ ನೇತೃತ್ವದಲ್ಲಿ ಸಭೆ ಬೆಂಗಳೂರಿನ ಕ್ವೀನ್ ಸದಸ್ಯ ಕೆಪಿಸಿಸಿ ಕಚೇರಿಯಲ್ಲಿ ನಡೆಯುತ್ತಿದೆ.
ಸಭೆಯಲ್ಲಿ ಘಟನೆಯ ಕಾರಣ ಅರಿಯುವ ಕಾರ್ಯ ಆಗುತ್ತಿದ್ದು, ಪಕ್ಷದ ಶಾಸಕರಾಗಿರುವ ಅಖಂಡ ಶ್ರೀನಿವಾಸಮೂರ್ತಿ ನಿವಾಸದ ಮೇಲೆ ನಡೆದಿರುವ ದಾಳಿಯ ಹಿಂದಿರುವ ಕೈವಾಡದ ಕುರಿತು ಸಮಿತಿ ತನಿಖೆ ನಡೆಸಲಿದೆ. ಇದಕ್ಕೆ ಅಗತ್ಯವಿರುವ ಮಾಹಿತಿ ಸಂಗ್ರಹಿಸುವ ಕಾರ್ಯ ನಡೆಯುತ್ತಿದೆ.
ಸರ್ಕಾರವೇ ಈ ಗಲಭೆಯ ಹಿಂದೆ ಷಡ್ಯಂತ್ರ ರೂಪಿಸಿದೆ ಎಂದು ಹಲವು ಕಾಂಗ್ರೆಸ್ ನಾಯಕರು ಆರೋಪ ಮಾಡುತ್ತಿದ್ದು, ಸತ್ಯಶೋಧನಾ ಸಮಿತಿ ಎಲ್ಲ ಆಯಾಮಗಳನ್ನು ಮುಂದಿಟ್ಟುಕೊಂಡು ತನಿಖೆ ನಡೆಸಿ ತನ್ನ ವರದಿಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗೆ ಸಲ್ಲಿಸಲಿದೆ.
ನಿನ್ನೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಈ ಸಮಿತಿ ರಚನೆ ಮಾಡಿ ಇದರ ನೇತೃತ್ವವನ್ನು ಪರಮೇಶ್ವರ್ ಅವರಿಗೆ ವಹಿಸಿದ್ದು, ಇದು ಸಮಿತಿಯ ಮೊದಲ ಸಭೆ ಆಗಿದೆ. ಈಗಾಗಲೇ ಸ್ಥಳಕ್ಕೆ ತೆರಳಿ ಪರಿಶೀಲಿಸಿ ಬಂದಿರುವ ನಾಯಕರು ಪರಮೇಶ್ವರ್ ಅವರಿಗೆ ಸಂಪೂರ್ಣ ಮಾಹಿತಿ ಒದಗಿಸುತ್ತಿದ್ದಾರೆ.
ಸಭೆಯಲ್ಲಿ ಮಾಜಿ ಗೃಹ ಸಚಿವ ರಾಮಲಿಂಗಾರೆಡ್ಡಿ, ಕೃಷ್ಣ ಬೈರೇಗೌಡ, ಬಿ.ಕೆ ಹರಿಪ್ರಸಾದ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್, ಕೆ.ಜೆ ಜಾರ್ಜ್ ಉಪಸ್ಥಿತರಿದ್ದರು.