ಬೆಂಗಳೂರು: ರಾಜ್ಯ ಸರ್ಕಾರದ ನಿರ್ಬಂಧ ಹಾಗೂ ಕೋವಿಡ್ ನಿಯಮಾವಳಿಗಳ ಅಡೆತಡೆಯ ನಡುವೆಯೂ ಕಾಂಗ್ರೆಸ್ ಪಕ್ಷ ಮೇಕೆದಾಟು ಪಾದಯಾತ್ರೆಗೆ ಅಂತಿಮ ಸಿದ್ಧತೆ ಮಾಡಿಕೊಂಡಿದೆ.
ನೀರಿಗಾಗಿ ನಡಿಗೆ ಹೆಸರಿನಲ್ಲಿ ಮೇಕೆದಾಟುನಿಂದ ಬೆಂಗಳೂರುವರೆಗೆ ಪಾದಯಾತ್ರೆ ಕೈಗೊಳ್ಳಲು ಕಾಂಗ್ರೆಸ್ ನಿರ್ಧರಿಸಿದೆ. ಜನವರಿ 9ರಿಂದ 19ರವರೆಗೆ ಪಾದಯಾತ್ರೆ ನಡೆಯಲಿದ್ದು, ಇದರಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು ಭಾಗಿಯಾಗಲಿದ್ದಾರೆ.
ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯುವ ಪಾದಯಾತ್ರೆಗೆ ಸಕಲ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ. ವಿಶೇಷವಾಗಿ ಮಾಸ್ಕ್ ಹಾಗೂ ನೀರಿನ ಬಾಟಲಿಗಳನ್ನು ಮೇಕೆದಾಟು ಪಾದಯಾತ್ರೆಯ ಜನಪ್ರಿಯತೆಗೆ ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಮೇಕೆದಾಟು ಪಾದಯಾತ್ರೆ ವಿಶೇಷ ಸ್ಟಿಕ್ಕರ್ಗಳನ್ನು ಒಳಗೊಂಡ ನೀರಿನ ಬಾಟಲಿ ಹಾಗೂ ಮಾಸ್ಕ್ಗಳನ್ನು ಹೇರಳ ಪ್ರಮಾಣದಲ್ಲಿ ಸಂಗ್ರಹಿಸಿಡಲಾಗಿದೆ.
ಪಾದಯಾತ್ರೆಯ ಜನಪ್ರಿಯತೆಗೆ ಎಲ್ಲಾ ಅವಕಾಶಗಳನ್ನು ಸದ್ಭಳಕೆ ಮಾಡಿಕೊಳ್ಳುತ್ತಿರುವ ಪಕ್ಷ, ಕಚೇರಿಯ 4-5 ವಾಹನಗಳಿಗೆ ಪಾದಯಾತ್ರೆ ಹಾಗೂ ರಾಜ್ಯ ಕಾಂಗ್ರೆಸ್ ನಾಯಕರ ಭಾವಚಿತ್ರಗಳನ್ನು ಅಂಟಿಸಿ ವಿಶೇಷ ಅಲಂಕಾರ ಮಾಡಿದೆ. ಸದ್ಯ ಇದೇ ವಾಹನದಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು ಓಡಾಡುತ್ತಿದ್ದು, ಪಾದಯಾತ್ರೆ ಪ್ರಚಾರವನ್ನು ಸಹ ಈ ಮೂಲಕ ಮಾಡುತ್ತಿದ್ದಾರೆ.
ಕೋವಿಡ್ ನಿಯಮಾವಳಿಗಳು ಹಾಗೂ ವಾರಾಂತ್ಯ ಕರ್ಫ್ಯೂ ಜಾರಿಯಲ್ಲಿರುವ ಹಿನ್ನೆಲೆ ಕಾಂಗ್ರೆಸ್ ಪಾದಯಾತ್ರೆಗೆ ತೊಡಕು ಉಂಟಾಗಬಹುದು ಎಂದು ಅಂದಾಜಿಸಲಾಗಿದೆ. ಜನವರಿ 9ರಂದು ಮೇಕೆದಾಟು ಸಂಗಮದಲ್ಲಿ ಪಾದಯಾತ್ರೆಯನ್ನು ಆರಂಭಿಸಲು ಕಾಂಗ್ರೆಸ್ ನಾಯಕರು ತೀರ್ಮಾನಿಸಿದ್ದಾರೆ.
ಇದನ್ನೂ ಓದಿ:ಸಿದ್ದರಾಮಯ್ಯ ಸಿಎಂ ಆಗಿದ್ದವರು, ಕಾನೂನಿಗೆ ಗೌರವ ಕೊಡುವ ನಂಬಿಕೆಯಿದೆ: ಸಿಎಂ ಬೊಮ್ಮಾಯಿ
ಬೆಳಗ್ಗೆ 8.30 ಕ್ಕೆ ರಾಜ್ಯ ಕಾಂಗ್ರೆಸ್ ನಾಯಕರ ಸಮ್ಮುಖದಲ್ಲಿ ಪಾದಯಾತ್ರೆಗೆ ಚಾಲನೆ ಸಿಗಲಿದೆ. ಮಧ್ಯಾಹ್ನದ ಭೋಜನದ ವಿರಾಮದವರೆಗೂ ಪಾದಯಾತ್ರೆ ಮುಂದುವರೆದು 6.5 ಕಿಮೀ ದೂರದವರೆಗೆ ನಡೆಯುವ ಗುರಿ ಹೊಂದಲಾಗಿದೆ. ಕನಕಪುರ ತಾಲೂಕಿನ ಹೆಗ್ಗನೂರಿನಲ್ಲಿ ಮಧ್ಯಾಹ್ನದ ಭೋಜನ ಹಾಗೂ ವಿಶ್ರಾಂತಿ ಪಡೆಯುವ ನಾಯಕರು ಸಂಜೆ 8.5 ಕಿಲೋ ಮೀಟರ್ ದೂರ ಕ್ರಮಿಸಿ ದೊಡ್ಡ ಆಲಹಳ್ಳಿ ತಲುಪಲಿದ್ದಾರೆ. ಅಲ್ಲಿಯೇ ರಾತ್ರಿ ಭೋಜನ ಹಾಗೂ ವಾಸ್ತವ್ಯ ಮಾಡಲಿದ್ದಾರೆ. ಮೊದಲ ದಿನದ ಕಾರ್ಯಕ್ರಮದ ಮಾದರಿಯಲ್ಲಿ ಒಟ್ಟು 10 ದಿನಗಳ ಕಾರ್ಯಕ್ರಮಗಳ ಪಟ್ಟಿಯನ್ನು ಸಹ ಕಾಂಗ್ರೆಸ್ ಬಿಡುಗಡೆ ಮಾಡಿದೆ. ಕಡೆಯ ದಿನ ಅಂದರೆ ಜನವರಿ 19ರಂದು ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಮೇಕೆದಾಟು ಪಾದಯಾತ್ರೆ ಸಮಾರೋಪ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಒಂದು ಸಂಜೆ ಪಾದಯಾತ್ರೆ ಸಮಾರೋಪ ನಡೆಯಲಿದೆ.
ಆದರೆ ಕೋವಿಡ್ ನಿಯಮಾವಳಿಗಳನ್ನು ಮುಂದಿಟ್ಟು ಯಾವ್ಯಾವ ಕಾರ್ಯಗಳಿಗೆ ಯಾವ ದಿನ ತೊಡಕಾಗುತ್ತಿದೆ ಎನ್ನುವುದನ್ನು ಹೇಳಲು ಸಾಧ್ಯವಿಲ್ಲ. ಮೊದಲ ದಿನ ಪಾದಯಾತ್ರೆ ಆರಂಭವನ್ನೇ ತಡೆಯುವ ಚಿಂತನೆ ಸರ್ಕಾರದಿಂದ ನಡೆದಿದೆ. ಆದರೆ ಯಾವುದೇ ಕಾರಣಕ್ಕೂ ಎಷ್ಟೇ ತಡೆಯುತ್ತಿದ್ದರು ನಾವು ಮಾರನೇ ದಿನ ಅದೇ ಸ್ಥಳದಿಂದ ಪಾದಯಾತ್ರೆಯನ್ನು ಮುಂದುವರಿಸುತ್ತೇವೆ. ಭಾನುವಾರ ಒಂದಿಷ್ಟು ನಿರ್ಬಂಧ ವಿಧಿಸುವ ಅವಕಾಶ ಸರ್ಕಾರಕ್ಕೆ ಇದೆ. ಸೋಮವಾರದ ನಂತರ ಅನಿವಾರ್ಯವೆನಿಸಿದರೆ ನಾನು ಮತ್ತು ಸಿದ್ದರಾಮಯ್ಯ ಇಬ್ಬರೇ ಪಾದಯಾತ್ರೆ ನಡೆಸುತ್ತೇವೆ ಎಂದು ಸಹ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.