ಬೆಂಗಳೂರು: ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ಇಡಿ ವಿಚಾರಣೆ ಖಂಡಿಸಿ ಕಾಂಗ್ರೆಸ್ ನಾಯಕರು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಜನರಿಗೆ ತಪ್ಪು ಮಾಹಿತಿ ನೀಡುವ ಕಾರ್ಯವನ್ನು ಕೇಂದ್ರ ಸರ್ಕಾರ ಮಾಡುತ್ತಿದ್ದು, ಇಡೀ ದೇಶದ ಜನರನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ. ದೇಶದ ಸಂವಿಧಾನಕ್ಕಿಂತ ಮೇಲೆ ಯಾರೂ ಇಲ್ಲ. ಮೋದಿ ಅಧಿಕಾರಕ್ಕೆ ಬಂದ ನಂತರ ಯಾವುದೇ ತನಿಖಾ ಸಂಸ್ಥೆಗಳು ಮುಕ್ತವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಸೋನಿಯಾ ಜತೆ ನಾವಿದ್ದೇವೆ: ಇನ್ನೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿ, ಇಡಿ, ಐಟಿ, ಸಿಬಿಐ ಬರಲಿ, ಬಿಜೆಪಿ ಬರಲಿ ನಮ್ಮ ಸೋನಿಯಾ, ರಾಹುಲ್ ಗಾಂಧಿ ಮುಟ್ಟಲು ಸಾಧ್ಯವಿಲ್ಲ. ಇಡಿ ವಿಚಾರಣೆನಂತರವೂ ರಾಹುಲ್ ಗಾಂಧಿಯವರು ಕುಗ್ಗಿಲ್ಲ. ಇಂದು ಸೋನಿಯಾ ಗಾಂಧಿ ಮಾತ್ರ ಇಡಿ ಕಚೇರಿಯಲ್ಲಿ ಕುಳಿತಿಲ್ಲ. ನಾವೆಲ್ಲ ಅವರ ಬೆಂಬಲಕ್ಕೆ ಇದ್ದೇವೆ ಎಂಬುದನ್ನು ತಿಳಿಸಲು ನಾವಿಲ್ಲಿ ನಿಂತಿದ್ದೇವೆ. ರಾಜ್ಯ, ರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ತೊಲಗುವವರೆಗೂ ನಮ್ಮ ಹೋರಾಟ ನಡೆಯಬೇಕು ಎಂದರು.
ಜನರಿಗಾಗಿ ಹೋರಾಡಿದ ಕುಟುಂಬದ ಅವಹೇಳನವಾಗ್ತಿದೆ; ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಮಾತನಾಡಿ, ಜನರಿಗಾಗಿ ಹೋರಾಡಿದ ಗಾಂಧಿ ಕುಟುಂಬದ ಅವಹೇಳನ ಆಗುತ್ತಿದೆ. ಸೋನಿಯಾ ಗಾಂಧಿ ದೇಶದನ ಪ್ರತಿಷ್ಠೆಯ ಪ್ರತೀಕ. ಬಿಜೆಪಿ ಉದ್ದೇಶ ಅರಿಯಬೇಕಿದೆ. ತಮ್ಮ ವೈಫಲ್ಯ ಮುಚ್ಚಲು ಇಂತಹ ಪ್ರಯತ್ನ ನಡೆಸಿದ್ದಾರೆ. ಸಂವಿಧಾನ ಅಪಾಯದಲ್ಲಿದೆ ಎಂದರು.
ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಸರ್ವಾಧಿಕಾರಿಗಳಾಗಿ ಆಡಳಿತ ನಡೆಸುತ್ತಿದ್ದಾರೆ. ಅನ್ಯ ಪಕ್ಷ, ನಾಯಕರು ಉಳಿಯಬಾರದು ಎಂಬಂತೆ ನಡೆದುಕೊಳ್ಳುತ್ತಿದ್ದಾರೆ. ಇದರ ಭಾಗವಾಗಿ ಕಾಂಗ್ರೆಸ್ ನಾಯಕರ ವಿರುದ್ಧ ತನಿಖಾ ಸಂಸ್ಥೆಯ ಬಳಕೆ ಮಾಡಲಾಗುತ್ತಿದೆ. ಹಲವು ಕಡೆ ಪ್ರತಿಪಕ್ಷ ದುರ್ಭಲಗೊಳಿಸುವ ಯತ್ನ ಮಾಡಿದ್ದಾರೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆಕ್ರೋಶ ವ್ಯಕ್ತಪಡಿಸಿದರು.
ಜಿಎಸ್ಟಿ ಹೆಚ್ಚಿಸಿ ಜನರನ್ನ ಸಂಕಷ್ಟಕ್ಕೆ ದೂಡಿದೆ: ರಾಷ್ಟ್ರದ ಮಾದರಿ ವ್ಯಕ್ತಿ ಸೋನಿಯಾ ಗಾಂಧಿ. ಸರ್ಕಾರ ಜಿಎಸ್ಟಿ ಹೆಚ್ಚಿಸಿ ಜನರನ್ನು ಸಂಕಷ್ಟಕ್ಕೆ ಈಡು ಮಾಡಿದೆ. ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಹುರುಳಿಲ್ಲ. ಕಾಂಗ್ರೆಸ್ ನಾಯಕರ ಧೈರ್ಯ ಕೆಡಿಸಲು ಈ ಪ್ರಯತ್ನ ನಡೆದಿದೆ. ಮೋದಿ ಹಿಟ್ಲರ್ ರೀತಿ ವರ್ತಿಸುತ್ತಿದ್ದಾರೆ ಎಂದು ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ಕಿಡಿಕಾರಿದ್ದಾರೆ.
ಪ್ರತಿಭಟನಾ ಸಭೆಯಲ್ಲಿ ಕೇಂದ್ರದ ಮಾಜಿ ಸಚಿವ ಡಾ. ಎಂ. ವೀರಪ್ಪ ಮೊಯ್ಲಿ, ಮಾಜಿ ಸ್ಪೀಕರ್ ರಮೇಶ್ ಕುಮಾರ್, ಮಾಜಿ ಸಚಿವೆ ಉಮಾಶ್ರೀ, ರಾಷ್ಟ್ರೀಯ ನಾಯಕ ಅಭಿಷೇಕ್ ಸೇರಿದಂತೆ ಹಲವರು ಇದ್ದರು.
ವಶಕ್ಕೆ ಪಡೆದ ಪೊಲೀಸರು: ರಾಜಭವನಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಕಾಂಗ್ರೆಸ್ ನಾಯಕರು, ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು ದೂರಕ್ಕೆ ಕರೆದುಕೊಂಡು ಹೋದರು.
ಇದನ್ನೂ ಓದಿ: ನೂತನ ರಾಷ್ಟ್ರಪತಿ ಆಯ್ಕೆ : ಮೊದಲ ಸುತ್ತಿನ ಮತ ಎಣಿಕೆಯಲ್ಲಿ ದ್ರೌಪದಿ ಮುರ್ಮು ಮುನ್ನಡೆ