ಬೆಂಗಳೂರು: ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರ ಅಕ್ಕಿ ನೀಡಲು ನಿರಾಕರಿಸಿದೆ ಎಂದು ಆರೋಪಿಸಿ ರಾಜ್ಯ ಕಾಂಗ್ರೆಸ್ ನಾಯಕರು ಇಂದು ಪ್ರತಿಭಟನೆ ನಡೆಸಿದರು. ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ನೇತೃತ್ವದಲ್ಲಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಲಾಯಿತು. ಸಚಿವ ರಾಮಲಿಂಗ ರೆಡ್ಡಿ ಸೇರಿದಂತೆ ಹಲವು ನಾಯಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಬೆಂಗಳೂರಿನಲ್ಲಿ ಇಂದು ಬೆಳಗ್ಗೆಯಿಂದಲೂ ಮಳೆ ಸುರಿಯುತ್ತಿದ್ದು, ಈ ಮಳೆಯ ನಡುವೆಯೇ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪ್ರತಿಭಟನೆಗೆ ಚಾಲನೆ ನೀಡಿದರು. ಈ ವೇಳೆ ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಬಡವರ ವಿರುದ್ಧ ಕೇಂದ್ರ ಸರ್ಕಾರ ಯುದ್ಧ ಸಾರಿದೆ. ಕೇಂದ್ರ ಸರ್ಕಾರ ಮೊದಲು ಅಕ್ಕಿ ಕೊಡ್ತೀವಿ ಅಂತಾ ಹೇಳಿತ್ತು. ಈಗ ನಮ್ಮ ಕಾಂಗ್ರೆಸ್ ಸರ್ಕಾರಕ್ಕೆ ಒಳ್ಳೆಯ ಹೆಸರು ಬರುತ್ತೆ ಅಂತಾ ಅಕ್ಕಿ ಕೊಡಲಿಲ್ಲ. ಹಿಂದೆ ನಮ್ಮ ಸರ್ಕಾರ ಏಳು ಕೆಜಿ ಅಕ್ಕಿ ಕೊಡ್ತಿತ್ತು. ಅದನ್ನ ಬಿಜೆಪಿ ನಾಲ್ಕು ಕೆಜಿಗೆ ಇಳಿಸಿತ್ತು. ಈಗ ನಾವು 10 ಕೆಜಿ ಕೊಡ್ತೀವಿ ಅಂತಾ ಹೇಳಿದ್ದೇವೆ. ನಮ್ಮ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಕುತಂತ್ರ ಮಾಡ್ತಿದ್ದಾರೆ. ಅವರ ಕುತಂತ್ರ ರಾಜಕಾರಣಕ್ಕೆ ಕೊನೆಯೇ ಇಲ್ಲ ಎಂದು ಕಿಡಿಕಾರಿದರು.
ಅವರು ನಮ್ಮ ವಿರುದ್ಧ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ಮಾಡ್ತಿದ್ದಾರಂತೆ. ಈ ಅಕ್ಕಿ ತಿನ್ನುವವರು ಬಡವರು. ಬಿಜೆಪಿಯವರು ಸೋನಾ ಮಸೂರಿ ಅಕ್ಕಿ ತಿಂತಾರೆ. ಬಿಜೆಪಿಯವರು ವಚನ ಭ್ರಷ್ಟರು ಏಕೆಂದ್ರೆ ಎರಡು ಕೋಟಿ ಉದ್ಯೋಗ ಕೊಡಲಿಲ್ಲ, 15 ಲಕ್ಷ ಅಕೌಂಟ್ಗೆ ಹಾಕಿದ್ರಾ..? ನಾವು ತಪ್ಪು ಮಾಡಿದಾಗ ಕಿವಿ ಹಿಂಡಿ. ಬಡವರಿಗೆ ಅಕ್ಕಿಕೊಡಲು ಹೋದ್ರೆ ರಾಜಕೀಯ ಮಾಡ್ತೀರಾ. ಇದು ಬಡವರು ಶ್ರೀಮಂತರ ನಡುವಿನ ಹೋರಾಟ. ಕಾಂಗ್ರೆಸ್ ಬಡವರ ಪರ ಇದೆ ಎಂದರು.
ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮಾತನಾಡಿ, ಯಾರೂ ಲಂಚ ಕೇಳದೇ ಸರ್ಕಾರದ ಎಲ್ಲಾ ಸವಲತ್ತುಗಳನ್ನು ಮಾಡಿಕೊಡಬೇಕು. ನಾವು ಕಾಲ್ ಸೆಂಟರ್ ಮಾಡ್ತೀವಿ. ನಮ್ಮ ಕಾರ್ಯಕರ್ತರು ಲಂಚ ಕೇಳಿದ್ರೂ ಕೇಸ್ ಹಾಕೋದೇ. ಲಂಚ ಮುಕ್ತ ಕರ್ನಾಟಕ ಆಗಬೇಕು ಎಂದರು. ಉಚಿತ ವಿದ್ಯುತ್ಗೆ ನೋಂದಣಿ ಆರಂಭ ಆಗಿದೆ. ಬಹಳ ಆತುರ ಪಡಬೇಡಿ, ನೂಕುನುಗ್ಗಲು ಮಾಡಬೇಡಿ. ಸರ್ವರ್ ಕೂಡ ಕಡಿಮೆ ಆಗಿದೆ. ಅದಕ್ಕೆ ಗೃಹಲಕ್ಷ್ಮೀ ಯೋಜನೆಗೆ ನಾವು ಸ್ವಲ್ಪ ಟೈಮ್ ತೆಗೆದುಕೊಂಡಿದ್ದೀವಿ ಎಂದರು.
ಸರ್ಕಾರದ ಸವಲತ್ತು ಬೇಡ ಅಂದೋರಿಗೆ ಬೇಡ, ಬೇಕು ಅಂದೋರಿಗೆ ಕೊಡೋಣ. ರಾಮಲಿಂಗಾರೆಡ್ಡಿ ಅವರ ಮನೆಯವರು ಬಸ್ನಲ್ಲಿ ಓಡಾಡಲ್ಲ ಅಂದ್ರೆ ಬೇಡ. ನಾರಾಯಣಸ್ವಾಮಿ ನಿಮ್ಮ ಮನೆಯವರನ್ನ ಕರೆದುಕೊಂಡು ಓಡಾಡಿ. ನಮ್ಮ ಮನೆಯವರು ಬೇಕಾದ್ರೂ ಅರ್ಜಿ ಹಾಕಲಿ ನಾನು ಬೇಡ ಎನ್ನಲ್ಲ. ಎರಡು ಸಾವಿರ ಬೇಕು, ಸಂಸಾರ ನಡೆಸಬೇಕು ಅಂತಿದ್ರೆ ಅರ್ಜಿ ಹಾಕಿಕೊಳ್ಳಲಿ ಎಂದು ಡಿಸಿಎಂ ತಿಳಿಸಿದರು.
ಕೇಂದ್ರ ಸರ್ಕಾರ ನಮಗೆ ಅಕ್ಕಿ ಕೊಡ್ತೀವಿ ಎಂದಿದ್ರು. ಪುಕ್ಸಟ್ಟೆ ಅಲ್ಲ, ಕಾಸು ಕಟ್ಟಿಸಿಕೊಂಡು ಕೊಡೋದು. ಈಗ ಎಫ್ಸಿಐನಿಂದ ರದ್ದು ಮಾಡಿದ್ದಾರೆ. ನಾವು ಬಿಬಿಎಂಪಿ ಮತ್ತು ಜಿಲ್ಲಾ ಪಂಚಾಯತ ಚುನಾವಣೆ ಮಾಡ್ತೇವೆ. ಮಾತು ಕೊಟ್ಟಂತೆ ಚುನಾವಣೆ ಮಾಡ್ತೇವೆ. ಅದು ನಮ್ಮ ಬದ್ಧತೆ. ಸಿಎಂ ಕೂಡ ಪ್ರತಿಭಟನೆಗೆ ಬರುತ್ತಾರೆ. ನಾನು ಬರೋದು ಬೇಡ, ನಾವು ಮಾತ್ರ ಪ್ರತಿಭಟನೆ ಮಾಡ್ತೇವೆ ಅಂದೆ. ಜಗದೀಶ್ ಶೆಟ್ಟರ್ಗೆ ಪರಿಷತ್ ಸ್ಥಾನ ನೀಡಿದ್ದೇವೆ ಎಂದರು.
ಕಾಂಗ್ರೆಸ್ ವಿರುದ್ಧ ಬಿಜೆಪಿ ಪ್ರತಿಭಟನೆ ಮಾಡಲು ನೈತಿಕತೆ ಇಲ್ಲ. ಮೊದಲು ಹದಿನೈದು ಲಕ್ಷ ಜನರ ಅಕೌಂಟ್ಗೆ ಹಾಕಿ. ಕೇಂದ್ರ ಸರ್ಕಾರದ ಜೊತೆ ಮಾತನಾಡಿ ಅಕ್ಕಿ ಕೊಡಿಸಿ. ಅದು ಬಿಟ್ಟು ರಾಜಕೀಯ ಮಾಡೋದು ಬೇಡ ಎಂದು ಬಿಜೆಪಿಗೆ ಟಾಂಗ್ ನೀಡಿದರು. ಮಳೆಯಲ್ಲೂ ಕಾರ್ಯಕರ್ತರು ಪ್ರತಿಭಟನೆಗೆ ಬಂದಿದ್ದಾರೆ. ಪಾಪ ಮಹಿಳೆಯರ ಮೇಕಪ್ ಎಲ್ಲ ಹೊಯ್ತು. ನಮ್ಮ ಸಲೀಂ ಅಹ್ಮದ್ ಮೇಕಪ್ ಕೂಡ ಹೊಯ್ತು. ರಾಮಲಿಂಗರೆಡ್ಡಿ ಮೇಕಪ್ ಹಾಕಿಲ್ಲ. ಮಳೆಗೆ ಚಳಿಗೆ ನಾವು ಹೆದರಲ್ಲ ಎಂದು ಡಿಕೆಶಿ ತಿಳಿಸಿದರು.
ಇದನ್ನೂ ಓದಿ: ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯಿಂದ ಸಾಂಕೇತಿಕ ಪ್ರತಿಭಟನೆ: ಬೊಮ್ಮಾಯಿ, ಅಶೋಕ್ ಸೇರಿ ಕಾರ್ಯಕರ್ತರು ಪೊಲೀಸ್ ವಶಕ್ಕೆ