ಬೆಂಗಳೂರು: ಬಿಬಿಎಂಪಿ ವಿಭಜನೆ ಕುರಿತ ಸಮಿತಿಯನ್ನು ಪುನರ್ ರಚಿಸುವ ಮೂಲಕ ಚುನಾವಣಾ ಪ್ರಕ್ರಿಯೆಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿರುವ ಬೆನ್ನಲ್ಲೇ ಈ ಸಂಬಂಧ ಚಟುವಟಿಕೆಗಳು ಗರಿಗೆದರಿವೆ. ರಾಜ್ಯ ಸರ್ಕಾರದಿಂದ ನಿನ್ನೆ ಬಿಬಿಎಂಪಿ ವಿಭಜನೆ ಕುರಿತ ಸಮಿತಿಯ ಪುನರ್ ರಚನಾ ಆದೇಶ ಹೊರ ಬಿದ್ದಿದೆ. ಹಂತ ಹಂತವಾಗಿ ಚುನಾವಣಾ ಪ್ರಕ್ರಿಯೆ ಆರಂಭವಾಗಿದ್ದು ಶತಾಯಗತಾಯ ಕಾಂಗ್ರೆಸ್ ಪಕ್ಷವನ್ನು ಈ ಬಾರಿ ಚುನಾವಣೆಯಲ್ಲಿ ಗೆಲ್ಲಿಸುವ ಉದ್ದೇಶದಿಂದ ಕಾಂಗ್ರೆಸ್ ರಾಷ್ಟ್ರೀಯ ನಾಯಕರು ವಿಶೇಷ ಆಸಕ್ತಿ ತೋರಿಸುತ್ತಿದ್ದಾರೆ.
ಕಾಂಗ್ರೆಸ್ ರಾಷ್ಟ್ರೀಯ ನಾಯಕರ ಪ್ರಯತ್ನದ ಭಾಗವಾಗಿ ಇಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಮಹತ್ವದ ಸಭೆ ಕರೆದಿದ್ದರು. ಸಭೆಯಲ್ಲಿ ಬೆಂಗಳೂರು ಉಸ್ತುವಾರಿ, ಡಿಸಿಎಂ ಡಿ.ಕೆ ಶಿವಕುಮಾರ್, ಬೆಂಗಳೂರಿನ ಸಚಿವರು, ಶಾಸಕರು ಸೇರಿದಂತೆ ರಾಜ್ಯ ಕಾಂಗ್ರೆಸ್ ನಾಯಕರು ಭಾಗಿಯಾಗಿದ್ದರು.
ಸಭೆಯಲ್ಲಿ ಚುನಾವಣೆ ಪೂರ್ವ ಸಿದ್ದತೆ ಕುರಿತು ಚರ್ಚೆ ನಡೆದಿದೆ. ವಾರ್ಡ್ ಮರು ವಿಂಗಡನೆ, ಮೀಸಲಾತಿ ಬಗ್ಗೆ ಚರ್ಚೆಯಾಗುತ್ತಿದೆ. ಶೀಘ್ರ ಚುನಾವಣೆ ನಡೆಸಲು ಕಾನೂನು ತೊಡಕುಗಳು ಇದೆ ಎಂದು ಡಿಸಿಎಂ ಡಿ. ಕೆ ಶಿವಕುಮಾರ್ ಹೇಳಿದ್ದ ಹಿನ್ನೆಲೆ ಎ.ಜಿ ಶಶಿಕಿರಣ್ ಶೆಟ್ಟಿ ಜತೆ ಕಾಂಗ್ರೆಸ್ ನಾಯಕರು ಗಂಭೀರ ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಸಭೆ ಬಳಿಕ ಕಾಂಗ್ರೆಸ್ ನಾಯಕರು ಪ್ರತಿಕ್ರಿಯಿಸಿದ್ದಾರೆ. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮಾತನಾಡಿ, ಪರಿಷತ್ ಚುನಾವಣೆ. ಇದೆ ಅದರ ಬಗ್ಗೆ ಚರ್ಚೆಯಾಯಿತು. ಬಿಬಿಎಂಪಿ ಚುನಾವಣೆ ಬಗ್ಗೆ ಕೂಡ ಚರ್ಚೆ ನಡೆಸಲಾಯಿತು. ಹೇಗೆ ಚುನಾವಣೆ ಮಾಡಬೇಕು ಎಂಬ ಬಗ್ಗೆಯೂ ಚರ್ಚೆಯಾಯಿತು. ಎಲ್ಲರೂ ಬೇಗ ಚುನಾವಣೆ ಮಾಡಬೇಕು ಎಂದು ಸಲಹೆ ನೀಡಿದರು. ವಾರ್ಡ್ ವಿಂಗಡಣೆ ಇದೆ. 198 ವಾರ್ಡ್ ಮೇಲೆ ಚುನಾವಣೆ ಮಾಡಲು ಆಗಲ್ಲ. ನವೆಂಬರ್ ವೇಳೆಗೆ ಚುನಾವಣೆ ಆಗಬೇಕು. ಬಿಜೆಪಿ ಮಾಡಿರುವ ವಾರ್ಡ್ ವಿಂಗಡಣೆ ಸರಿಯಿಲ್ಲ. ಅವರಿಗೆ ಅನುಕೂಲ ಆಗುವ ಹಾಗೆ ಮಾಡಿಕೊಂಡಿದ್ದಾರೆ. ನಾವು ಕೂಡ ಆಕ್ಷೇಪ ವ್ಯಕ್ತಪಡಿಸಿದ್ದೆವು. ಮೀಸಲಾತಿ ಕೂಡ ನೀಡಬೇಕಿದೆ. ಗಾಂಧಿ ನಗರದಲ್ಲಿ ಆರಕ್ಕೆ ಆರು ಮಹಿಳೆಯರಿಗೆ ಮೀಸಲಿಟ್ಟಿದ್ದರು. ಬಿಬಿಎಂಪಿ ಮೂರು ಭಾಗ ಮಾಡಬೇಕು ಎಂಬ ಚರ್ಚೆ ಇಲ್ಲ. ಆಡಳಿತಾತ್ಮಕವಾಗಿ ಅಭಿವೃದ್ಧಿ ಆಗಬೇಕು. ಪ್ರಣಾಳಿಕೆಯಲ್ಲಿ ಕೂಡ ಹೇಳಿದ್ದೆವು. ಬೆಂಗಳೂರು ಅಭಿವೃದ್ಧಿ ಆಗಬೇಕಿದೆ. 1.50 ಕೋಟಿ ಜನಸಂಖ್ಯೆ ಬೆಂಗಳೂರಿನಲ್ಲಿ ಇದೆ. ಹಾಗಾಗಿ ಅಭಿವೃದ್ಧಿ ಹೇಗೆ ಮಾಡಬೇಕು ಎಂಬ ಬಗ್ಗೆ ಚರ್ಚೆ ನಡೆದಿದೆ ಎಂದರು.
ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ "ಬೆಂಗಳೂರು ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಿದ್ದೇವೆ. ಬಿಬಿಎಂಪಿ ಚುನಾವಣೆ ಬಗ್ಗೆ ಸಲಹೆ ನೀಡಿದ್ದೇವೆ. ಬಿಬಿಎಂಪಿ ಆಡಳಿತಾತ್ಮಕವಾಗಿ ವಿಭಜನೆ ಆಗಬೇಕು. ಬೆಂಗಳೂರು ಅಭಿವೃದ್ಧಿಯಾಗಬೇಕು. ಈ ನಿಟ್ಟಿನಲ್ಲಿ ಸುರ್ಜೇವಾಲಾ ಅವರ ಜತೆ ಚರ್ಚೆ ಮಾಡಿದ್ದೇವೆ ಎಂದರು.
ಡಿಸಿಎಂ, ಸಚಿವರಿಗೆ ಮನವಿ: ಡಿಸಿಎಂ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ಗೆ ಮನವಿ ನೀಡಿರುವ ಕರ್ನಾಟಕ ರಾಜ್ಯ ಟ್ರಾನ್ಸ್ ಪೋರ್ಟ್ ಮತ್ತು ಅರ್ಥ್ ಮೂವರ್ಸ್ ಅಸೋಸಿಯೇಷನ್ ಸದಸ್ಯರು, ಬಿಬಿಎಂಪಿ ಮಾರ್ಷಲ್ಗಳು ಹಾಗೂ ಅಧಿಕಾರಿಗಳು ದಂಡ ಹಾಕುತ್ತಾರೆ ಎಂದು ದೂರಿದ್ದಾರೆ. ಟಿಪ್ಪರ್, ಲಾರಿಗಳನ್ನು ತಡೆದ ದಂಡ ಹಾಕುತ್ತಿದ್ದಾರೆ. 2500, 50,00 ಮತ್ತು 10,000 ರೂಪಾಯಿ ನಷ್ಟು ದಂಡ ಹಾಕುತ್ತಾರೆ. ಅಲ್ಲದೇ ಚಾಲಕರಿಗೆ ನಿಂದಿಸುವ ಕೆಲಸ ಮಾಡ್ತಾರೆ. ಟಿಪ್ಪರ್, ಲಾರಿಗಳಲ್ಲಿ ಸಾಗಿಸುವ ಡೆಮಾಲಿಶನ್ ತ್ಯಾಜ್ಯವನ್ನು ರಸ್ತೆ ಬದಿಯಲ್ಲಿ ಹಾಕುವುದಿಲ್ಲ. ಯಾರೋ ಒಬ್ಬರು ಮಾಡಿದ ಅಪರಾಧಕ್ಕೆ ಉಳಿದವರಿಗೆ ಯಾಕೆ ಶಿಕ್ಷೆ. ಇದನ್ನು ಸರಿಪಡಿಸುವಂತೆ ಡಿಸಿಎಂ ಡಿ.ಕೆ ಶಿವಕುಮಾರ್ ಅವರಿಗೆ ಮನವಿ ಮಾಡಿರುವ ಅಸೋಸಿಯೇಷನ್ ಸದಸ್ಯರು ಆದಷ್ಟು ಬೇಗ ತಮ್ಮ ಸಮಸ್ಯೆಯನ್ನು ಪರಿಹರಿಸುವಂತೆ ಕೋರಿದ್ದಾರೆ.
ಇದನ್ನೂ ಓದಿ: ಬಿಬಿಎಂಪಿ ಚುನಾವಣೆಗೆ ಸಿದ್ಧತೆ: ಗುಂಪುಗಾರಿಕೆ ಸಹಿಸುವುದಿಲ್ಲ, ನಿಷ್ಠೆಯಿಂದ ಪಕ್ಷದ ಕೆಲಸ ಮಾಡಿ ಎಂದ ಹೆಚ್ಡಿಕೆ