ಬೆಂಗಳೂರು: 2020-21ನೇ ಸಾಲಿನ ಬಜೆಟ್ನ್ನು ನಿನ್ನೆ ಮುಖ್ಯಮಂತ್ರಿ ಯಡಿಯೂರಪ್ಪ ಮಂಡಿಸಿದ್ದು, ಇದರಲ್ಲಿ ಡೀಸೆಲ್ ಹಾಗೂ ಪೆಟ್ರೋಲ್ ಬೆಲೆ ಏರಿಕೆ ಹಾಗೂ ಬಡವರ ಅಕ್ಕಿಗೆ ಕನ್ನ ಹಾಕಿ ನೆರೆ ಸಂತ್ರಸ್ತರ ಸಮಸ್ಯೆಗೆ ಸ್ಪಂದಿಸದೇ ಸಾಲದ ಹೊರೆ ಹೆಚ್ಚಿಸಲಾಗಿದೆ ಎಂದು ಮಹಾತ್ಮ ಗಾಂಧಿ ಪ್ರತಿಮೆ ಬಳಿ ಕಾಂಗ್ರೆಸ್ ವತಿಯಿಂದ ವಿನೂತನವಾಗಿ ಪ್ರತಿಭಟನೆ ನಡೆಸಲಾಗಿದೆ.
ಇನ್ನು ಪ್ರತಿಭಟನೆಯಲ್ಲಿ ಬಿತ್ತಿ ಚಿತ್ರ ಪ್ರದರ್ಶನ ಮಾಡಿ, ರಾಜ್ಯ ಬಿಜೆಪಿ ಸರ್ಕಾರ ಮಂಡಿಸಿರುವ ಬಜೆಟ್ ಹಾಗೂ ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್ ರಾಜ್ಯದ ಅಭಿವೃದ್ಧಿಗೆ ಹಾಗೂ ರಾಷ್ಟ್ರದ ಅಭಿವೃದ್ಧಿಗೆ ಮಾರಕವಾಗಿವೆ. ಕೇಂದ್ರ ಸರ್ಕಾರ ದಿನನಿತ್ಯ ಅಗತ್ಯ ವಸ್ತುಗಳ ಬೆಲೆ ಹಾಗೂ ಡೀಸೆಲ್, ಪೆಟ್ರೋಲ್ ಬೆಲೆಯನ್ನು ನಿರಂತರವಾಗಿ ಏರಿಕೆ ಮಾಡುತ್ತಿದ್ದು, ರಾಜ್ಯ ಸರ್ಕಾರವೂ ಸಹ ಈ ಬಜೆಟ್ನಲ್ಲಿ ಡೀಸೆಲ್ ಮತ್ತು ಪೆಟ್ರೋಲ್ ಬೆಲೆಯ ತೆರಿಗೆಯನ್ನ ಏರಿಸುವ ಮೂಲಕ ರಾಜ್ಯದ ಜನತೆಗೆ ದ್ರೋಹ ಎಸಗಿದೆ ಎಂದು ಆರೋಪಿಸಿದ್ದಾರೆ.
ಕೇಂದ್ರ ಸರ್ಕಾರ ರಾಜ್ಯದ ಪಾಲಿನ ಹಣವನ್ನು ಕಡಿತಗೊಳಿಸಿದರೆ, ಇತ್ತ ರಾಜ್ಯ ಸರ್ಕಾರ ಸಾಲದ ಹೊರೆ ಹೆಚ್ಚಿಸಿಕೊಂಡಿದೆ. ಇದು ರಾಜ್ಯದ ಜನರಿಗೆ ಹಾಗೂ ಕರ್ನಾಟಕದ ಅಭಿವೃದ್ಧಿಗೆ ಮಾರಕವಾಗಿದೆ. ಸರ್ಕಾರ ರಾಜ್ಯದ ನೆರೆ ಸಂತ್ರಸ್ತರ ಬಗ್ಗೆ ಕಿಂಚಿತ್ತು ಕಾಳಜಿ ವಹಿಸದೆ ಪ್ರಸ್ತುತ ಬಜೆಟ್ನಲ್ಲಿ ನೆರೆ ಸಂತಸ್ತರಿಗೆ ಪರಿಹಾರ ಘೋಷಿಸದೆ, ನೆರೆ ಸಂತ್ರಸ್ತರನ್ನು ನಿರ್ಲಕ್ಷಿಸಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.