ಬೆಂಗಳೂರು: ಯಾವುದೇ ಕಾರಣಕ್ಕೂ ಕಾಂಗ್ರೆಸ್ಗೆ ವಾಪಾಸಾಗುವುದಿಲ್ಲ. ಅಲ್ಲಿನ ವ್ಯವಸ್ಥೆಯ ಬೇಸರದಿಂದಾಗಿಯೇ ಹೊರ ಬಂದಿದ್ದೇನೆ ಎಂದು ಮಸ್ಕಿ ಅನರ್ಹ ಶಾಸಕ ಪ್ರತಾಪ್ಗೌಡ ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ಇಲ್ಲಿನ ಡಾಲರ್ಸ್ ಕಾಲೋನಿಯಲ್ಲಿ ಸಿಎಂ ಯಡಿಯೂರಪ್ಪ ನಿವಾಸಕ್ಕೆ ಇಂದು(ಅ.23) ಮಸ್ಕಿ ಅನರ್ಹ ಶಾಸಕ ಪ್ರತಾಪ್ ಗೌಡ ಪಾಟೀಲ್ ಭೇಟಿ ನೀಡಿದ ನಂತರ ಮಾಧ್ಯಮದವರರೊಂದಿಗೆ ಮಾತನಾಡಿದರು.
ಬಿಜೆಪಿಗೆ ಸೇರ್ಪಡೆ?: ಇನ್ನು ಬಿಜೆಪಿ ಪಕ್ಷಕ್ಕೆ ಸೇರ್ಪಡೆ ವಿಚಾರವಾಗಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಎಲ್ಲಾ ಒಟ್ಟಾಗಿ ಚರ್ಚೆ ಮಾಡಲಿದ್ದೇವೆ. ಈವರೆಗೂ ಬಿಜೆಪಿ ಪಕ್ಷ ಸೇರ್ಪಡೆ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ. ಆದರೆ, ಉಪಚುನಾವಣೆಗೆ ಸಹಕಾರ ಕೊಡುವಂತೆ ಯಡಿಯೂರಪ್ಪ, ಬಿ.ಎಲ್.ಸಂತೋಷ್ ಮತ್ತು ನಳೀನ್ ಕುಮಾರ್ ಕಟೀಲ್ ಜೊತೆ ಚರ್ಚೆ ಮಾಡಿದ್ದೇವೆ ಎಂದರು.
ಬಸನಗೌಡ ತುರವಿಹಾಳ ಅವರಿಗೆ ಕಾಡಾ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಬಿಜೆಪಿ ನಾಯಕರು ಅವರಿಗೆ ಮನವೊಲಿಕೆ ಮಾಡುತ್ತಿದ್ದಾರೆ. ಅವರು ಪಕ್ಷದ ತೀರ್ಮಾನಕ್ಕೆ ಬದ್ಧರಾಗಿರುತ್ತಾರೆ ಎಂದು ನಮಗೂ ವಿಶ್ವಾಸವಿದೆ ಎಂದು ಹೇಳಿದರು.
ಬಸನಗೌಡ ತುರವಿಹಾಳ ಕೂಡಾ ಮಸ್ಕಿ ಕ್ಷೇತ್ರದ ಉಪಚುನಾವಣೆ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.