ಬೆಂಗಳೂರು: ಕಾಂಗ್ರೆಸ್ ಸರ್ಕಾರ 5 ವರ್ಷ ಪೂರ್ಣ ಅಧಿಕಾರ ನಡೆಸಿದರೂ, ಮೇಕೆದಾಟು ಯೋಜನೆ ಬಗ್ಗೆ ನಿರ್ದಿಷ್ಟ ನಿರ್ಧಾರ ತೆಗೆದುಕೊಳ್ಳಲಿಲ್ಲ. ಈಗ ಪಾದಯಾತ್ರೆ ಮಾಡೋದು ಎಷ್ಟರ ಮಟ್ಟಿಗೆ ಸರಿ ಎಂದು ಹಿರಿಯ ಸಾಹಿತಿ ಪ್ರೊ. ದೊಡ್ಡರಂಗೇಗೌಡ ಪ್ರಶ್ನಿಸಿದ್ದಾರೆ.
ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ನಮ್ಮ ನಾಡಿನಲ್ಲಿ ಯಾವಾಗ ಏನು ಮಾಡಬೇಕು ಅಂತ ಬಹಳಷ್ಟು ಜನರಿಗೆ ತಿಳಿದಿಲ್ಲ. ಅದು ರಾಜಕಾರಣಿಗಳಿಗೂ ಗೊತ್ತಿಲ್ಲದೆ ಇರೋದ್ರಿಂದ ಇಂತಹ ಪರಿಸ್ಥಿತಿ ಬಂದಿದೆ. ಮೇಕೆದಾಟು ಯೋಜನೆ ಇವತ್ತಿಗೆ ಹೊಸದಲ್ಲ. ಹಿಂದಿನ ಸರ್ಕಾರಗಳು ಬೇಕಂತಲೇ ಮುಂದೆ ತಳ್ಳಿವೆ ಎಂಬ ಅನುಮಾನ ವ್ಯಕ್ತವಾಗ್ತಿದೆ ಎಂದರು.
ಒಂದು ಕಡೆ ಕೊರೊನಾ, ಮತ್ತೊಂದೆಡೆ ಓಮಿಕ್ರಾನ್ ಇದೆ. ಇದು ಹೆಚ್ಚೆಚ್ಚು ಹರಡಿ ಜನರ ಜೀವಕ್ಕೆ ಹಾನಿಯಾಗೋ ಸಾಧ್ಯತೆ ಇದೆ. ಈ ಸಮಯದಲ್ಲಿ ಕಾಂಗ್ರೆಸ್ ನಾಯಕರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ಅವರ ಜೊತೆ ಬರುವ ಹಿಂಬಾಲಕರಲ್ಲಿ ಸ್ಯಾನಿಟೈಸ್, ಸಾಮಾಜಿಕ ಅಂತರ, ಗ್ಲೌಸ್, ಮಾಸ್ಕ್ ಇರೋದಿಲ್ಲ. ಇದರಿಂದ ಇನ್ನಷ್ಟು ಸೋಂಕು ಹರಡುತ್ತದೆ. ಅಂಕಿ ಅಂಶ ಗಮನಿಸಿದರೆ, ಸೋಂಕು ಉಲ್ಬಣಗೊಳ್ಳಲು ಇವರೇ ಕಾರಣ ಆಗುತ್ತಿದ್ದಾರೆ ಎಂದು ಆರೋಪಿಸಿದರು.
ಇದನ್ನೂ ಓದಿ: ಮೇಕೆದಾಟು ಪಾದಯಾತ್ರೆ: ಪ್ರತಿಪಕ್ಷ, ಸರ್ಕಾರಕ್ಕೆ ಹೈಕೋರ್ಟ್ ತರಾಟೆ
ಇದೊಂದು ರಾಜಕೀಯ ನಾಟಕ ಅಂತ ನನಗೆ ಅನಿಸುತ್ತಿದೆ. ಮೇಕೆದಾಟು ಯೋಜನೆ ನೆಪ ಮಾತ್ರ. ಇದು ಅವರ ಎಡಬಿಡಂಗಿತನ ತೋರಿಸುತ್ತಿದೆ. ಇದು ಅತ್ಯಂತ ಬಾಲಿಷತನ ತೋರಿಸುತ್ತಿದೆ. ಇದಕ್ಕೆ ಯಾರೆಲ್ಲ ಬೆಂಬಲಿಸುತ್ತಿದ್ದಾರೆ ಅಂತ ನೋಡಿದರೆ ಅಚ್ಚರಿ ಆಗುತ್ತದೆ. ಸಾಹಿತಿಗಳು, ಬುದ್ಧಿ ಜೀವಿಗಳು ವಿರೋಧಿಸಬೇಕಿತ್ತು. ಅಧಿಕಾರದಲ್ಲಿದ್ದಾಗ ಸುಮ್ಮನೆ ಕೂತು, ಈಗ ವ್ಯಥೆ ಪಡುತ್ತಿದ್ದಾರೆ. ಮೊದಲ ಎರಡು ದಿನದ ಉತ್ಸಾಹ ಅವರಲ್ಲಿ ಈಗ ಕಾಣುತ್ತಿಲ್ಲ. ಮೌನಕ್ಕೆ ಶರಣಾಗಿರೋದು ಕಂಡು ಬರುತ್ತಿದೆ ಎಂದರು.
ಒನ್ ಮ್ಯಾನ್ ಶೋ:
ಪಾದಯಾತ್ರೆ ಹೆಸರಿನಲ್ಲಿ ನೀವು ತೆರೆಗೆ ತರುತ್ತಿರೋ ಸಿನಿಮಾ ಫ್ಲಾಪ್ ಆಗಿದೆ. ನಿಮ್ಮ ಜವಾಬ್ದಾರಿ ಮರೆತಿದ್ದೀರಿ. ಇದು ಒನ್ ಮ್ಯಾನ್ ಶೋ ಅನ್ನೋದು ಎಲ್ಲರಿಗೂ ತಿಳಿದಿದೆ ಎಂದು ನಟಿ ಶ್ರುತಿ ವ್ಯಂಗ್ಯವಾಡಿದ್ದಾರೆ.
ನಾನು ಕೇವಲ ಪಕ್ಷದ ಕಾರ್ಯಕರ್ತೆ ಮಾತ್ರ ಅಲ್ಲದೆ, ಕನ್ನಡ ಚಲನಚಿತ್ರ ನಟಿಯಾಗಿಯೂ ಬಂದಿದ್ದೇನೆ. ಸಾಮಾಜಿಕ ಕಳಕಳಿ ಇಲ್ಲದಿರೋ ಹೋರಾಟಕ್ಕೆ ನೈತಿಕತೆ ಇರೋದಿಲ್ಲ. ಯಾವುದೇ ಹೋರಾಟ ಆಗಲಿ, ಸಮಾಜಕ್ಕೆ ಒಳ್ಳೆಯದಾಗಬೇಕು. ನಂತರ ಪಕ್ಷ, ವ್ಯಕ್ತಿ ಅಂತ ಬಿಜೆಪಿ ನಮಗೆ ಕಲಿಸಿದೆ. ಜನರಿಗಾಗಿ ಮಾಡುವ ಹೋರಾಟದಲ್ಲಿ ಕಾಂಗ್ರೆಸ್ ಏನು ಮಾಡುತ್ತಿದೆ. ವೀಕೆಂಡ್ ಕರ್ಫ್ಯೂ, ನೈಟ್ ಕರ್ಫ್ಯೂ ತಡೆದುಕೊಳ್ಳಲು ಆಗುತ್ತಿಲ್ಲ. ಚಿತ್ರರಂಗದ ಅನೇಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಆದರೆ ನಮ್ಮೆಲ್ಲರ ಕಷ್ಟಕ್ಕೆ ಆಗಬೇಕಿರೊ ಕಾಂಗ್ರೆಸ್ ಪಕ್ಷ ಏನು ಮಾಡುತ್ತಿದೆ. ಜನರಿಗೆ ಕಷ್ಟ ಬಂದಾಗ ಬೀದಿಗಿಳಿಯಬೇಕು ಅಂತ ಅಪ್ಪಾಜಿ ರಾಜ್ ಕುಮಾರ್ ಹೇಳಿದ್ದಾರೆ. ಈ ಹೋರಾಟ ಅಣೆಕಟ್ಟು ಕಟ್ಟೋಬದಲು, ಪಕ್ಷ ಕಟ್ಟುತ್ತಿದ್ದಾರೆ ಅನಿಸುತ್ತಿದೆ ಎಂದರು.
ಇದನ್ನೂ ಓದಿ: ಸಮರ್ಥ ಭಾರತ ನಿರ್ಮಾಣವೇ ರಾಷ್ಟ್ರೀಯ ಶಿಕ್ಷಣ ನೀತಿಯ ಗುರಿ: ಸಚಿವ ಅಶ್ವತ್ಥ್ ನಾರಾಯಣ
ಕಾವೇರಿ ಅಂದರೆ ನಮ್ಮ ತಾಯಿ ಅಂತ ಭಾವನೆ ಇದೆ. ಆದರೆ ಕಾವೇರಿ, ಕನ್ನಡ ಅಂತ ಬಂದಾಗ ನಮ್ಮಲ್ಲಿ ಬಿರುಕು ತರುವ ಕೆಲಸವಾಗುತ್ತಿದೆ. ರಾಜ್ಯ ಮತ್ತೊಂದು ಲಾಕ್ ಡೌನ್ ನೋಡುವ ಪರಿಸ್ಥಿತಿ ಬೇಡ. ಇನ್ನೆರಡು ದಿನ ತಡೆದುಕೊಳ್ಳಿ, ಮೂರನೇ ಅಲೆ ಮುಗಿಯಲಿದೆ ಅಂತ ಹೇಳುತ್ತಿದ್ದಾರೆ. ನಿಮ್ಮ ಹೋರಾಟಕ್ಕೆ ನಮ್ಮ ವಿರೋಧ ಇಲ್ಲ. ಇಂತಹ ಜಾಥಾದಿಂದ ಪಕ್ಷ ಕಟ್ಟಬಹುದೇ ಹೊರತು, ಜನರ ಪ್ರಾಣ ಉಳಿಸಲಾಗಲ್ಲ ಎಂದರು.
ಪಾದಯಾತ್ರೆಗೆ ಎಲ್ಲಾ ಕಲಾವಿದರ ಬೆಂಬಲ ಇದೆ ಅಂತ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳುತ್ತಿದ್ದಾರೆ. ಆದರೆ ಸಿನಿಮಾ ಯಶಸ್ವಿ ಆಗಬೇಕು ಅಂದರೆ, ಕಥೆ, ಚಿತ್ರಕಥೆ ಎಲ್ಲವೂ ಸರಿ ಇರಬೇಕು. ಬಿಡುಗಡೆ ಮಾಡುವ ದಿನವೂ ಶುಭವಾಗಿರಬೇಕು. ಆದರೆ ನೀವು ತೆರೆಗೆ ತರುತ್ತಿರೋ ಸಿನಿಮಾ ಫ್ಲಾಪ್ ಆಗಿದೆ ಅನ್ನೋದು ಎಲ್ಲರಿಗೂ ತಿಳಿದಿದೆ. ನಿಮ್ಮಲ್ಲಿ ವಿನಂತಿ ಮಾಡಿ ಕೇಳಿಕೊಳ್ಳುತ್ತೇನೆ. ಮತ್ತೊಂದು ಲಾಕ್ ಡೌನ್ ಆಗೋದು ಬೇಡ, ಜನ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕೊರೊನಾ ವೈರಸ್ ಮರೆಯಾದ ಬಳಿಕ ನಿಮ್ಮ ರಾಜಕೀಯ ಹೋರಾಟ ಮುಂದುವರೆಸಿ. ನಾನು ಚಿತ್ರರಂಗದ ಕಲಾವಿದೆ ಆಗಿ, ಹಲವಾರು ವ್ಯಕ್ತಿಗಳನ್ನ ಕಳೆದುಕೊಂಡಿದ್ದೇನೆ. ಎಲ್ಲರೂ ಬದುಕುವಂತಾಗಬೇಕು. ಈ ಜಾಥಾ ನೋಡಿದರೆ, ಹಾರರ್ ಶೋ ರೀತಿಯಲ್ಲಿ ಇದೆ. ಪ್ರಬುದ್ಧವಾಗಿ ಯೋಚಿಸಿ, ನಿರ್ಧಾರ ಕೈಗೊಳ್ಳಿ ಅಂತ ಮನವಿ ಮಾಡಿದ್ರು.