ಬೆಂಗಳೂರು: ಕರ್ನಾಟಕ ಭೂ ಸುಧಾರಣೆ ಕಾಯಿದೆ ತಿದ್ದುಪಡಿ ವಿರೋಧಿಸಿ ವಿಧಾನಸಭೆಯಲ್ಲಿ ಇಂದು ಕಾಂಗ್ರೆಸ್ ಸದಸ್ಯರು ಬಿಲ್ ಪ್ರತಿಯನ್ನು ಹರಿದು ತಮ್ಮ ಆಕ್ರೋಶ ವ್ಯಕ್ತಪಡಿಸಿ ಸಭಾತ್ಯಾಗ ಮಾಡಿದರು.
ಸರ್ಕಾರ ರೈತ ವಿರೋಧಿಯಾಗಿದೆ ಎಂದು ಕಾಯ್ದೆ ವಿರುದ್ಧ ಘೋಷಣೆ ಕೂಗಿ ಗದ್ದಲದ ವಾತಾವರಣ ನಿರ್ಮಾಣ ಮಾಡಿದರು. ಇದರ ಮಧ್ಯೆಯೇ ಕರ್ನಾಟಕ ಭೂ ಸುಧಾರಣಾ ಕಾಯಿದೆಗೆ ತಿದ್ದುಪಡಿ ಕುರಿತು ಉತ್ತರ ನೀಡುತ್ತಿದ್ದ ಕಂದಾಯ ಸಚಿವ ಆರ್. ಅಶೋಕ್ ಅವರು, ಕಾಂಗ್ರೆಸ್ ಅವಧಿಯಲ್ಲಿ ಭೂ ಖರೀದಿ ಯುನಿಟ್ ಹೆಚ್ಚಳ ಮಾಡಿದ್ದಾರೆ. 79 ಎ ಹಾಗೂ 79ಬಿ ಅಪ್ರಸ್ತುತ ಎಂದು ಕಾಂಗ್ರೆಸ್ ಅವಧಿಯಲ್ಲಿ ಕ್ಯಾಬಿನೆಟ್ ಉಪ ಸಮಿತಿ ವರದಿ ಕೊಟ್ಟಿದೆ. 2014 ರಲ್ಲಿ 20 ಇದ್ದಿದ್ದನ್ನು 40 ಯುನಿಟ್ ಗೆ ಏರಿಕೆ ಮಾಡಿದ್ದು, ಕಾಂಗ್ರೆಸ್ ಎಂದಾಗ, ಕೆರಳಿದ ಕಾಂಗ್ರೆಸ್ ಸದಸ್ಯರು ಸದನದಲ್ಲಿ ಗದ್ದಲ ಉಂಟುಮಾಡಿದರು.
ಕಾಂಗ್ರೆಸ್ ಕಪಟ ನಾಟಕ ಮಾಡುವುದರಲ್ಲಿ ಎತ್ತಿದ ಕೈ. ಈ ಕಾಯ್ದೆಗೆ ಉಪ ಸಮಿತಿಯನ್ನು ರಚಿಸಿದ್ದೇ ಕಾಂಗ್ರೆಸ್ ನವರು. ಬಿಜೆಪಿ ಸರ್ಕಾರ ಈ ಕಾಯ್ದೆ ತಂದಿದೆ ಎಂದು ಗೂಬೆ ಕೂರಿಸುವ ಯತ್ನ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಬಿಡದಿಯಲ್ಲಿ ಯಾವುದೋ ಸಕ್ಕರೆ ಕಾರ್ಖಾನೆಗೆ ಸಹಾಯ ಮಾಡಲು ಮುಂದಾಗಿದ್ರು. ಅದರ ಬಗ್ಗೆ ಸಂಪೂರ್ಣ ಮಾಹಿತಿ ನನ್ನ ಹತ್ತಿರ ಇದೆ ಎಂದರು.
ಒಮ್ಮತ ಇಲ್ಲದ ಕಾಂಗ್ರೆಸ್:
ಕಾಂಗ್ರೆಸ್ ನವರಲ್ಲಿ ಒಮ್ಮತವೇ ಇಲ್ಲ. ಅದೇ ಜೆಡಿಎಸ್‌ನಲ್ಲಿ ನೋಡಿ ಕುಮಾರಸ್ವಾಮಿ ಅವರು ಹೇಳಿದ್ದನ್ನು ಎಲ್ಲರೂ ಕೇಳುತ್ತಾರೆ. ಯಡಿಯೂರಪ್ಪನವರು ಹೇಳಿದ್ದನ್ನು ನಾವೆಲ್ಲಾ ಕೇಳುತ್ತೇವೆ. ಆದರೆ, ಕಾಂಗ್ರೆಸ್ ನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಮಾತನ್ನು ಸಿದ್ದರಾಮಯ್ಯ ನವರು ಕೇಳಲ್ಲ. ಸಿದ್ದರಾಮಯ್ಯ ಮಾತನ್ನು ಶಿವಕುಮಾರ್ ಕೇಳಲ್ಲ. 168 ವರ್ಷದ ಇತಿಹಾಸ ಇರುವ ಪಕ್ಷ ಇದು ಎಂದು ವ್ಯಂಗ್ಯವಾಡಿದರು.
ರವಿಶಂಕರ್ ಗುರೂಜಿ ಆಶ್ರಮ ಬೇನಾಮಿ ಹೆಸರಿನಲ್ಲಿದೆ:
ಭೂಮಿಯನ್ನು ಬೇರೆಯವರ ಹೆಸರಿನ ಮೇಲೆ ಪಡೆದುಕೊಳ್ಳಲಾಗಿದೆ. ರವಿಶಂಕರ್ ಗುರೂಜಿ ಆಶ್ರಮದ ಬಗ್ಗೆ ಸದನದಲ್ಲಿ ಅಶೋಕ್ ಪ್ರಸ್ತಾಪಿಸಿ ರವಿಶಂಕರ್ ಗುರೂಜಿ ಆಶ್ರಮ ಬೇನಾಮಿ ಹೆಸರಿನಲ್ಲಿದೆ ಎಂದು ಹೇಳಿದರು.
ಯಡಿಯೂರಪ್ಪನವರೇ ನಮಗೆ ಮಹಾರಥರು: ನಮಗೆ ಯಡಿಯೂರಪ್ಪನವರೇ ಅತಿರಥ, ಮಹಾರಥರು. ಜೆಡಿಎಸ್ ನವರಿಗೆ ಕುಮಾರಣ್ಣನೇ ಮಹಾರಥ. ಆದರೆ, ಕಾಂಗ್ರೆಸ್ ನಲ್ಲಿ ಎಲ್ಲರೂ ಅತಿರಥ, ಮಹಾರಥರೇ, 12 ಅಕ್ಷೋಹಿಣಿ ಸೈನ್ಯವೆಲ್ಲಾ ಅಲ್ಲೇ ಇದೆ ಎಂದು ಟೀಕಿಸಿದರು.
ಕಾಂಗ್ರೆಸ್ ನವರು ಹೇಳ್ತಾರೆ ವಿಧಾನಸೌಧ ಕಟ್ಟಿಸಿದ್ದು ಕೆಂಗಲ್ ಹನುಮಂತಯ್ಯ, ವಿಕಾಸಸೌಧ ಕಟ್ಟಿಸಿದ್ದು ಎಸ್. ಎಂ. ಕೃಷ್ಣ ಅವರು. ಬೆಂಗಳೂರನ್ನು ಕಟ್ಟಿದ್ದು ಪ್ರೈವೇಟ್ ಡೆವಲಪರ್ಸ್. ಇದನ್ನು ನಾನು ಹೇಳಿದ್ದಲ್ಲ ಹಿಂದೆ ಕಾಂಗ್ರೆಸ್ ಮುಖಂಡರೇ ಹೇಳಿದ್ದು ಎಂದು ಡಿಕೆ ಶಿವಕುಮಾರ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.