ಬೆಂಗಳೂರು: ಕೋವಿಡ್ ನಿಯಮಾವಳಿಗಳನ್ನು ಮೀರಿ ಕಾಂಗ್ರೆಸ್ ಪಾದಯಾತ್ರೆ ಮಾಡುತ್ತಿದೆ ಎಂಬ ವಿಚಾರಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್ ಬಿಜೆಪಿ ವಿರುದ್ಧ ಪ್ರತಿಯಾಗಿ ವಾಗ್ದಾಳಿ ನಡೆಸಿದೆ.
ಬಿಜೆಪಿ ನಾಯಕರಿಗೆ ಕಾಂಗ್ರೆಸ್ ತನ್ನ ಸಾಮಾಜಿಕ ಜಾಲತಾಣದಲ್ಲಿ ತಿರುಗೇಟು ನೀಡಿದೆ. ಬಿಜೆಪಿ ನಾಯಕರು ನಡೆಸಿದ ಸಭೆ, ಸಮಾರಂಭದ ಲಿಸ್ಟ್ ಮಾಡಿರುವ ಕಾಂಗ್ರೆಸ್. ಮೇ 06 ರಿಂದ ಜನವರಿ 10 ರವರೆಗೂ ನಡೆದ ಸಭೆ, ಸಮಾರಂಭದ ಲಿಸ್ಟ್ ಪೋಸ್ಟ್ ಮಾಡಿದೆ. ಸಿಎಂ, ಮಿನಿಸ್ಟರ್, ಬಿಜೆಪಿಯ ಎಂಪಿ, ಎಂಎಲ್ಎ ಗಳು ನಡೆಸಿದ ಕಾರ್ಯಕ್ರಮಗಳ ಲಿಸ್ಟ್ ಇದಾಗಿದೆ.
ಕಾಂಗ್ರೆಸ್ ಪಕ್ಷ ಅಂದು-ಇಂದು ಮುಂದೆಂದೂ ಜನರ ಪರ. ಇದು ಅನೇಕ ಬಾರಿ ಸಾಬೀತಾಗಿದೆ. ಇದೀಗ ಮತ್ತೊಮ್ಮೆ ನಾಡಿನ ಹಿತಕ್ಕಾಗಿ ಹಾಗೂ ಕುಡಿಯುವ ನೀರಿಗಾಗಿ ಪಾದಯಾತ್ರೆ ನಡೆಸುತ್ತಿದೆ. ಇದಕ್ಕೆ ರಾಜ್ಯಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಆ ಬೆಂಬಲ ನಮ್ಮ ಹೋರಾಟದ ಛಲಕ್ಕೆ ಬಲ ತುಂಬುತ್ತಿದೆ. ಆದರೆ, ಇದನ್ನು ತಡೆಯುವ ದುರುದ್ದೇಶ ಹೊಂದಿರುವ ಬಿಜೆಪಿ ಸರ್ಕಾರ ಕಾಂಗ್ರೆಸ್ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡಿ ಎಫ್ಐಆರ್ ದಾಖಲಿಸಿದೆ ಎಂದು ಆರೋಪಿಸಿದೆ.
ನಾವು ಇಲ್ಲಿ ಬಿಜೆಪಿಗೆ ಒಂದು ವಿಷಯವನ್ನು ನೆನಪು ಮಾಡಿಕೊಳ್ಳಲಿ ಎಂದು ಬಯಸುತ್ತೇವೆ. ಕೋವಿಡ್ ವಿಚಾರದಲ್ಲಿ ಮೊದಲ ಅಲೆ ಇದ್ದಾಗಿನಿಂದ ಇವತ್ತಿನವರೆಗೂ ನಾವು ಶಿಸ್ತನ್ನು ಕಾಪಾಡಿಕೊಂಡು ಬಂದಿದ್ದೇವೆ. ಎಲ್ಲಿಯೂ ಜನರಿಗೆ ನಮ್ಮಿಂದ ತೊಂದರೆಯಾದಂತಹ ಉದಾಹರಣೆಗಳು ಇಲ್ಲ. ಅನಗತ್ಯ ಸಭೆ-ಸಮಾರಂಭ, ಖಾಸಗಿ ಕಾರ್ಯಕ್ರಮಗಳನ್ನು ಮಾಡಿ ಜನರಿಗೆ ತೊಂದರೆ ಮಾಡಿದ್ದು ಬಿಜೆಪಿಯೇ ಹೊರತು, ಕಾಂಗ್ರೆಸ್ ಅಲ್ಲ. ಹಾಗೇ ಕಾನೂನಿಗೆ ಭಂಗ ತಂದಿದ್ದು ಕೂಡಾ ಬಿಜೆಪಿಯೇ. ಅದರ ಪಟ್ಟಿಯನ್ನೂ ನಾವು ರಾಜ್ಯದ ಜನರ ಮುಂದೆ ಇಡುತ್ತಿದ್ದೇವೆ ಎಂದಿದೆ.
ಇಲ್ಲಿ ನಮ್ಮದು ಶಿಸ್ತಿನ ಸರ್ಕಾರ ಎಂದು ಬೆನ್ನು ತಟ್ಟಿಕೊಳ್ಳುವ ಬಿಜೆಪಿ ಕಾನೂನು ಉಲ್ಲಂಘಿಸಿದ ನಾಯಕರ ವಿರುದ್ಧ ಎಫ್ಐಆರ್ ದಾಖಲಿಸಿಲ್ಲ. ಆದರೆ, ಜನರಿಗೆ ಕುಡಿಯುವ ನೀರು ತರಲು ಹೊರಟಿರುವ ಕಾಂಗ್ರೆಸ್ ನಾಯಕರ ಮೇಲೆ ಎಫ್ಐಆರ್ ದಾಖಲು ಮಾಡಿ ತನ್ನ ಸಣ್ಣತನವನ್ನು ಪ್ರದರ್ಶಿಸಿದೆ. ಇದು ರಾಜಕೀಯ ಪ್ರೇರಿತ ಅನ್ನುವುದರಲ್ಲಿ ಎರಡು ಮಾತಿಲ್ಲ. ಇದನ್ನು ರಾಜ್ಯದ ಜನರೇ ನಿರ್ಧಾರ ಮಾಡಲಿ. ಜೊತೆಗೆ ಮಾಧ್ಯಮಗಳು ಸಹಾ ಇದನ್ನೆಲ್ಲಾ ಬಹಿರಂಗ ಪಡಿಸುತ್ತವೆ ಅನ್ನುವುದು ನಮ್ಮ ಭಾವನೆ ಆಗಿದೆ.
ನಮ್ಮ ವಿರುದ್ಧ ಎಫ್ಐಆರ್ ದಾಖಲು ಮಾಡಿ ಹೆದರಿಸುತ್ತೇವೆ ಅನ್ನುವುದು ಬಿಜೆಪಿ ಸರ್ಕಾರದ ಭ್ರಮೆ ಹಾಗೂ ಕನಸಷ್ಟೇ. ಆದರೆ, ನಮಗೆ ಸಿಗುತ್ತಿರುವ ಈ ಜನಬಲ ನೋಡಿ ಬಿಜೆಪಿ ದಿಕ್ಕೆಟ್ಟಿರುವಂತಿದೆ. ಇದರಿಂದಲೇ ಎಫ್ಐಆರ್ ಅನ್ನುವ ಅಸ್ತ್ರ ಹೂಡಿ ನಮ್ಮ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಆದರೆ, ಇದು ಯಾವತ್ತಿಗೂ ಸಾಧ್ಯವಿಲ್ಲ ಅನ್ನುವುದನ್ನು ಬಿಜೆಪಿ ಅರ್ಥ ಮಾಡಿಕೊಳ್ಳಬೇಕು. ಈ ಕೂಡಲೇ ಜಲಾಶಯ ನಿರ್ಮಾಣ ಮಾಡುತ್ತೇವೆ ಎಂದು ಬಿಜೆಪಿ ಸರ್ಕಾರ ಅಧಿಸೂಚನೆ ಹೊರಡಿಸಲಿ. ಇಲ್ಲವೆಂದರೆ ಆ ಕೆಲಸವನ್ನು ನಾವು ಮಾಡಿ ತೋರಿಸುತ್ತೇವೆ. ನೀವು ಅಧಿಕಾರ ಬಿಟ್ಟು ಮನೆಗೆ ಹೊರಡಿ ಎಂದಿದೆ ಕಾಂಗ್ರೆಸ್.
ಓದಿ: ಮೊರಾರ್ಜಿ ಶಾಲೆಯಲ್ಲಿ ಕೋವಿಡ್ ಸೆಂಟರ್: ವಿದ್ಯಾರ್ಥಿಗಳು, ಪೋಷಕರಿಂದ ವಿರೋಧ