ಬೆಂಗಳೂರು: ರಾಜ್ಯ ಸರ್ಕಾರ ಅಭಿವೃದ್ಧಿಯತ್ತ ದಾಪುಗಾಲು ಇಡುವ ಬದಲು, ಮಿತಿಮೀರಿದ ಭ್ರಷ್ಟಾಚಾರದ ಮೂಲಕ ಸುದ್ದಿ ಮಾಡುತ್ತಿದೆ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.ಟ್ವೀಟ್ ಮೂಲಕ ತನ್ನ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್, ರಾಜ್ಯ ಸಚಿವ ಸಂಪುಟದ ಸದಸ್ಯರು ಭ್ರಷ್ಟಾಚಾರದಲ್ಲಿ ತೊಡಗಿದ್ದು, ಇಂತಹ ಸರ್ಕಾರ ಇರುವುದಕ್ಕಿಂತ ತೊಲಗುವುದು ಲೇಸು ಎಂದು ಅಭಿಪ್ರಾಯಪಟ್ಟಿದೆ.
ರಾಜ್ಯದಲ್ಲಿ ಹಲವು ಸೋಂಕುಗಳು ತಾಂಡವವಾಡುತ್ತಿವೆ.,ಆದರೆ, ಬಿಜೆಪಿಗೆ ಭ್ರಷ್ಟಾಚಾರದ ಸೋಂಕು ತಗುಲಿದೆ. ಈ ಸೋಂಕಿತ ಸರ್ಕಾರದಿಂದ ರಾಜ್ಯ ನಲುಗುತ್ತಿದೆ. ಭ್ರಷ್ಟಾಚಾರವನ್ನೇ ಹಾಸಿ ಹೊದ್ದಿರುವ ಬಿಜೆಪಿಯಿಂದ ರಾಜ್ಯದ ಅಭಿವೃದ್ಧಿ ಕನಸು ಎಂದು ಹೇಳಿದೆ.
ರೈತರ ಸಂಕಷ್ಟಕ್ಕೆ ನಿಲ್ಲಬೇಕಾದ ಹೊತ್ತಿನಲ್ಲಿ ರೈತರ ಹೆಸರಲ್ಲಿ ಲೂಟಿಗೆ ಇಳಿದಿದೆ. ಈ ಹಿಂದೆ ಕೃಷಿ ಸಚಿವ ಬಿಸಿ ಪಾಟೀಲ್ ಅವರ ವಿರುದ್ಧ ಅಧಿಕಾರಿಗಳಿಂದ ಹಫ್ತಾ ವಸೂಲಿಯ ಆರೋಪ ಬಂದಿತ್ತು. ಈಗ ಕೃಷಿ ಯಂತ್ರೋಪಕರಣ ಖರೀದಿಯ 210 ಕೋಟಿ ಕಿಕ್ ಬ್ಯಾಕ್ ಪಡೆದ ಬಗ್ಗೆ ಎಸಿಬಿಗೆ ದೂರು ಸಲ್ಲಿಕೆಯಾಗಿದೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ರಾಜೀನಾಮೆ ಪಡೆದು ತನಿಖೆ ನಡೆಸುವರೇ? ಅಥವಾ ಭ್ರಷ್ಟಾಚಾರಕ್ಕೆ ತಮ್ಮ ಮೌನ ಸಮ್ಮತಿ ತೋರುವರೆ? ಎಂದು ಪ್ರಶ್ನಿಸಿದೆ.
ಭ್ರಷ್ಟ ಬಿಜೆಪಿ ಜನತೆಗೆ ಮೋಸ ಮಾಡುತ್ತಿದೆ. ಮೊಟ್ಟೆ ಖರೀದಿ ಲೂಟಿಯ ಮೂಲಕ ಮಕ್ಕಳಿಗೆ ಮೋಸ. ಸ್ವೆಟರ್ ಹಂಚಿಕೆ ಹಗರಣದ ಮೂಲಕ ಬಡ ಮಕ್ಕಳಿಗೆ ಮೋಸ. ಕೃಷಿ ಯಂತ್ರೋಪಕರಣ ಖರೀದಿ ಹಗರಣದ ಮೂಲಕ ರೈತರಿಗೆ ಮೋಸ. ನೆರೆ ಪರಿಹಾರದ ಲೂಟಿಯ ಮೂಲಕ ಸಂತ್ರಸ್ತರಿಗೆ ಮೋಸ. ಕೋವಿಡ್ ಪರಿಕರ ಖರೀದಿ ಹಗರಣದ ಮೂಲಕ ಸೋಂಕಿತರಿಗೆ ಮೋಸ ಆಗಿದೆ. ರೈತರನ್ನು 'ಹೇಡಿಗಳು' ಎಂದು ಕರೆದು ಅವಮಾನಿಸಿದ್ದ ಬಿ ಸಿ ಪಾಟೀಲ್ ಅವರೇ, ಈಗ ನಿಮ್ಮನ್ನ ನೀವು 'ಭ್ರಷ್ಟ' ಎಂದು ಕರೆದುಕೊಳ್ಳುವ ನೈತಿಕತೆ ತೋರುವಿರಾ? ಎಂದು ಹರಿಹಾಯ್ದಿದೆ.
ಹೆಚ್ಚಿನ ಓದಿಗೆ: ಯಂತ್ರೋಪಕರಣಗಳ ಖರೀದಿಯಲ್ಲಿ ₹210 ಕೋಟಿ ಕಿಕ್‌ಬ್ಯಾಕ್ ಪಡೆದ ಆರೋಪ.. ಕೃಷಿ ಸಚಿವರ ವಿರುದ್ಧ ಎಸಿಬಿಗೆ ದೂರು..
ರೈತರ ನೋವು ಆಲಿಸದ ಸಚಿವರು 210 ಕೋಟಿ ಕಿಕ್ ಬ್ಯಾಕ್ ಪಡೆಯುವುದರಲ್ಲಿ ಮಗ್ನರಾಗಿದ್ದರು. ಭ್ರಷ್ಟಾಚಾರದ ಸೋಂಕು ತಟ್ಟಿದ ಈ ಸೋಂಕಿತ ಸರ್ಕಾರದ ಸಂಪುಟದ ತುಂಬಾ ಭ್ರಷ್ಟರೇ ತುಂಬಿದ್ದಾರೆ. ಭ್ರಷ್ಟಾಚಾರದ ಸೋಂಕು ತಗುಲಿದ ರಾಜ್ಯ ಬಿಜೆಪಿ ಸರ್ಕಾರದ ಪ್ರತಿ ಇಲಾಖೆಯಲ್ಲಿಯೂ ಲೂಟಿ ಎಗ್ಗಿಲ್ಲದೆ ಸಾಗಿದೆ. ಸ್ವೆಟರ್ ಹಗರಣದಲ್ಲಿ ಆರ್ ಅಶೋಕ್ ಅವರ ಕೈವಾಡ, ಮೊಟ್ಟೆ ಹಗರಣದ ಶಶಿಕಲಾ ಜೊಲ್ಲೆ ಅವರ ಕಿಕ್ ಬ್ಯಾಕ್,ಯಂತ್ರ ಖರೀದಿಯಲ್ಲಿ ಕಿಕ್ ಬ್ಯಾಕ್ ಪಡೆದ ಬಿಸಿ ಪಾಟೀಲ್ ಇದ್ದಾರೆ. ಇವರ ತನಿಖೆ ನಡೆಸದೆ ಹಗರಣ ಮುಚ್ಚಿ ಹಾಕಲಾಗುತ್ತಿದೆ ಎಂದು ಆರೋಪ ಮಾಡಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ.. ನಿಮ್ಮದು ಭ್ರಷ್ಟರೇ ತುಂಬಿದ ಕಳಂಕಿತ ಸಂಪುಟವಾಗಿದೆ. ಕಿಕ್ ಬ್ಯಾಕ್ ಪಡೆದವರನ್ನ ಕಿಕ್ ಔಟ್ ಮಾಡುವುದ ಬಿಟ್ಟು ಭ್ರಷ್ಟಾಚಾರಕ್ಕೆ ಮೌನ ಸಮ್ಮತಿ ನೀಡುತ್ತಿದ್ದೀರಾ? ಬಿಜೆಪಿ ಸರ್ಕಾರ ವಿದ್ಯಾರ್ಥಿಗಳ ಪಾಲಿನ ಸ್ವೆಟರ್‌ಗಳನ್ನೂ ಬಿಡಲಿಲ್ಲ. ಬಡಮಕ್ಕಳ ಮೊಟ್ಟೆಯನ್ನೂ ಬಿಡಲಿಲ್ಲ. ಈಗ ರೈತರನ್ನೂ ಬಿಡದೆ ಲೂಟಿಗಿಳಿದಿದೆ, ಕೃಷಿ ಯಂತ್ರೋಪಕರಣ ಖರೀದಿ ಹಗರಣ ನಡೆದಿದ್ದರೂ ಬಸವರಾಜ ಬೊಮ್ಮಾಯಿ ಅವರು ಏನೂ ನಡೆದೇ ಇಲ್ಲವೆಂಬಂತೆ ವರ್ತಿಸಿ ಭ್ರಷ್ಟರಿಗೆ ಬೆಂಬಲ ಸೂಚಿಸಿದ್ದಾರೆ ಎಂದು ಆಕ್ರೋಶ ಹೊರಹಾಕಲಾಗಿದೆ.