ಬೆಂಗಳೂರು: ಅಮುಲ್ ಮೇಲೆ ನಮ್ಗೂ ಒಂದು ಗೌರವ ಇದೆ. ಆದರೆ ಒಂದು ರಾಜ್ಯದ ಸಹಕಾರಿ ಸಂಸ್ಥೆಯ ಮೇಲೆ ಇನ್ನೊಂದು ಸಹಕಾರಿ ಸಂಸ್ಥೆ ಬೀಳಬಾರದು ಎಂದು ಸಂಸದ ಡಿ.ಕೆ.ಸುರೇಶ್ ಅಭಿಪ್ರಾಯಪಟ್ಟರು. ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.
ಇವತ್ತು ಈ ರಾಜ್ಯದಲ್ಲಿ 28 ಲಕ್ಷ ರೈತ ಕುಟುಂಬಗಳು ಕ್ಷೀರ ಕ್ಷೇತ್ರ ನಂಬಿ ಬದುಕುತ್ತಿದ್ದಾರೆ. ಕಷ್ಟವಿದ್ದರೂ ಅವರು 15 ದಿವಸಕ್ಕೆ ಹಣ ಬರುತ್ತದೆ ಎಂದು ಕುಟುಂಬಗಳು ಸಾಗುತ್ತಿವೆ. ಪ್ರತಿ ಸೊಸೈಟಿನಲ್ಲಿ ಕನಿಷ್ಠ ನಾಲ್ಕು ಜನ ಕೆಲಸ ಮಾಡುತ್ತಿದ್ದಾರೆ. ಒಟ್ಟಾರೆ 50 ಸಾವಿರ ಜನರಿಗೆ ಕೆಲಸ ಸಿಕ್ಕಿದೆ. ಈಗಾಗಲೇ ಕೆಲವೊಂದು ಸಾರ್ವಜನಿಕ ವಲಯದ ಕಂಪನಿಗಳನ್ನು ಸೇಲ್ ಮಾಡಿದ್ದಾರೆ. ಕನ್ನಡಿಗರು ಕಟ್ಟಿದ ಬ್ಯಾಂಕ್ಗಳನ್ನು ವಿಲೀನ ಮಾಡಿದ್ದಾರೆ.
ಈಗಾಗಲೇ ನಂದಿನಿ ಸಂಸ್ಥೆ ಒಳ್ಳೆಯ ಹೆಸರು ಮಾಡಿದೆ. ಹೈನುಗಾರಿಕೆಯನ್ನು ಕೃಷಿಕರು ನಂಬಿದ್ದಾರೆ. ಕೆಎಂಎಫ್‌ನಲ್ಲಿ 2.5 ಲಕ್ಷ ಜನ ಉದ್ಯೋಗದಲ್ಲಿದ್ದಾರೆ. ಹಾಲು ಉತ್ಪಾದಕರ ಸಂಘಗಳಲ್ಲಿ 50 ಲಕ್ಷ ಜನ ಇದ್ದಾರೆ. ಕೆಲವರಿಗೆ ಕರ್ನಾಟಕದ ಮೇಲೆ ಕಣ್ಣು ಬಿದ್ದಿದೆ. ಚುನಾವಣೆ ವೇಳೆ ಬಿಲ ತೋಡೋ ಕೆಲಸಕ್ಕೆ ಹೊರಟಿದ್ದಾರೆ. ಅಮುಲ್ ಅನ್ನೋ ಸಂಸ್ಥೆಯನ್ನು ಇಲ್ಲಿ ತರ್ತಿದ್ದಾರೆ. ಅಮುಲ್ ಬಗ್ಗೆ ನಮ್ಮ ವಿರೋಧವಿಲ್ಲ. ನಾವು ಖಾಸಗಿಯವರ ಜೊತೆ ಪೈಪೋಟಿ ಮಾಡಬೇಕು. ಸಹಕಾರಿ ಸಂಸ್ಥೆ ಮತ್ತೊಂದು ಸಂಸ್ಥೆ ಮೇಲಲ್ಲ.
ನರೇಂದ್ರ ಮೋದಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಪಬ್ಲಿಕ್ ಸೆಕ್ಟರ್ ಮುಚ್ಚಲಾಗುತ್ತಿದೆ. ಬ್ಯಾಂಕುಗಳ ಅವನತಿಯೂ ಆಗಿ ಹೋಯ್ತು. ಸಿಂಡಿಕೇಟ್ ಬ್ಯಾಂಕ್, ಕೆನರಾ ಬ್ಯಾಂಕ್ ಎಂಬ ಹೆಸರಿನಿಂದ ಕರೆಯುವಂತಿಲ್ಲ. ಇಷ್ಟೆಲ್ಲ ಆದರೂ ಸುಮ್ಮನಿದ್ದೀರಲ್ಲ. ಈಗ ನಂದಿನಿ ಪ್ರಾಡಕ್ಟ್ ಮೇಲೆ ಕಣ್ಣು ಹಾಕಿದ್ದಾರೆ. ನಂದಿನಿಯಿಂದ ರಾಜ್ಯ, ವಿಶ್ವದ ಗಮನ ಸೆಳೆದಿದ್ದೇವೆ. ಈಗ ಅಮುಲ್ ಅನ್ನು ಕರ್ನಾಟಕದಲ್ಲಿ ಬಿಟ್ಟು ಏನನ್ನು ಸಾಧಿಸೋಕೆ ಹೊರಟಿದ್ದೀರಾ. ನೆರೆ, ಬರ ಬಂದಾಗ ನೀವು ಇರಲಿಲ್ಲ. ಭೂ ಕುಸಿತ ಆದಾಗ ನೀವು ಬರಲ್ಲ. ಕೋವಿಡ್ ಸಂದರ್ಭದಲ್ಲಿ ನೀವು ನೋಡಲಿಲ್ಲ. ಈಗ ಒಕ್ಕೂಟ ವ್ಯವಸ್ಥೆಯನ್ನು ನುಂಗೋಕೆ ಹೊರಟಿದ್ದೀರಾ ಎಂದು ಪ್ರಶ್ನಿಸಿದರು.
ಕೇಂದ್ರ ಸಹಕಾರ ಸಚಿವರಾದ ಅಮಿತ್ ಶಾ ಇದನ್ನು ಹೇಳಬೇಕು. ನಮ್ಮ ಸಂಸ್ಥೆಯನ್ನು ಮುಳುಗಿಸಿ, ಕೇಂದ್ರ ನಾಯಕರನ್ನು ಮೆಚ್ಚಿಸಲು ರಾಜ್ಯ ನಾಯಕರ ಪ್ರಯತ್ನ ನಡೆದಿದೆ. ಇಡೀ ವ್ಯವಸ್ಥೆಯನ್ನು ವ್ಯಾಪಾರೀಕರಣ ಮಾಡಿ ಲಾಭ ಮಾಡಿಕೊಳ್ತಿದ್ದಾರೆ. ಕನ್ನಡಿಗರ ಕೆಎಂಎಫ್, ರೈತರು ಏನು ಅನ್ಯಾಯ ಮಾಡಿದ್ದಾರೆ. ಇನ್ನೊಂದು ರಾಜ್ಯವನ್ನು ಮುಳುಗಿಸಲು ಅಮಿತ್ ಶಾ ಪ್ರಯತ್ನ ಮಾಡಿದ್ದಾರೆ. ರಾಜ್ಯದಲ್ಲಿ ರೈತರ ಆತ್ಮಹತ್ಯೆ ಹೆಚ್ಚಳವಾದರೆ ಅದಕ್ಕೆ ನೇರ ಹೊಣೆ ಬಿಜೆಪಿ ನಾಯಕರೇ ಎಂದು ಎಚ್ಚರಿಸಿದರು.
ನಂದಿನಿಯಿಂದ 150 ಪ್ರಾಡಕ್ಟ್ ಇವತ್ತು ತಯಾರಾಗ್ತಿವೆ. ನಮಗೆ ಹಾಲಿನ ಅಭಾವ ಇಲ್ಲ. 39 ರೂ ನಮ್ಮ ಹಾಲಿನ ದರವಿದೆ. ಬೇರೆ ರಾಜ್ಯಗಳಲ್ಲಿ 50, 60ರೂ ಇದೆ. ನಮ್ಮ ಹಾಲಿನ ಗುಣಮಟ್ಟದಲ್ಲಿ ವ್ಯತ್ಯಾಸ ಬಂದಿಲ್ಲ. ಕಡಿಕೆ ದರದಲ್ಲಿ ನಾವು ಹಾಲು ಮಾರಾಟ ಮಾಡ್ತಿದ್ದೇವೆ. ನಮ್ಮನ್ನು ಕಂಟ್ರೋಲ್ ಮಾಡೋ ಹುನ್ನಾರ ಬಿಡಿ. ಕೇಂದ್ರದ ಸಹಕಾರಿ ಸಚಿವರು ಉತ್ತರ ಹೇಳಬೇಕಾಗುತ್ತದೆ. ರೈತರ ಸ್ವಾವಲಂಬಿ ಬದುಕಿಗೆ ಅವಕಾಶ ಕೊಡಿ ಎಂದು ಮನವಿ ಮಾಡಿದರು.
ಇದನ್ನೂ ಓದಿ: ಶಿವಮೊಗ್ಗ: ಅಮುಲ್ ಉತ್ಪನ್ನಗಳ ಆನ್ಲೈನ್ ಮಾರಾಟಕ್ಕೆ ರೈತ ಸಂಘ ವಿರೋಧ