ಬೆಂಗಳೂರು: ಕಾಂಗ್ರೆಸ್ ಕಾರ್ಯಕ್ರಮವೊಂದರಲ್ಲಿ ಬಿಜೆಪಿಯನ್ನು ಟೀಕೆ ಮಾಡುವ ಭರದಲ್ಲಿ ಬೆಂಗಳೂರು ಕರಗದ ಕುರಿತಂತೆ ಶಾಸಕ ಎನ್ ಎ ಹ್ಯಾರಿಸ್ ನೀಡಿದ್ದ ಹೇಳಿಕೆಯು ತೀವ್ರ ವಿರೋಧಕ್ಕೆ ಕಾರಣವಾಗಿತ್ತು. ಈ ಸಂಬಂಧ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಶಾಂತಿನಗರ ಶಾಸಕ ಹ್ಯಾರಿಸ್ ಅವರು ನಗರದ ತಿಗಳರಪೇಟೆಯಲ್ಲಿರುವ ಧರ್ಮರಾಯಸ್ವಾಮಿ ದೇವಸ್ಥಾನಕ್ಕೆ ತೆರಳಿ ಕ್ಷಮೆ ಯಾಚಿಸಿದ್ದಾರೆ.
ದೇವಸ್ಥಾನಕ್ಕೆ ತೆರಳಿ ಮಾತನಾಡಿರುವ ಹ್ಯಾರಿಸ್, ದೇವರ ಮೇಲೆ ನನಗೆ ಅಪಾರ ಭಕ್ತಿ, ಗೌರವವಿದೆ. ಧರ್ಮರಾಯಸ್ವಾಮಿ ದೇವಾಲಯದಲ್ಲಿಯೇ ಕ್ಷಮೆ ಕೋರಿದ್ದೇನೆ. ಪ್ರತಿ ವರ್ಷವೂ ಬೆಂಗಳೂರು ಕರಗ ಉತ್ಸವದಲ್ಲಿ ಭಾಗಿಯಾಗುತ್ತೇನೆ. ಈ ಬಾರಿಯೂ ಪಾಲ್ಗೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಇದಕ್ಕೂ ಮುನ್ನ ಹ್ಯಾರಿಸ್ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮೂಲಕ ಕ್ಷಮೆ ಕೋರಿದ್ದರು. 'ನಾನು ಯಾರಿಗೂ ಸಹ ನೋವುಂಟು ಮಾಡಿಲ್ಲ. ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪ್ರೇರಿತವಾಗಿ ಹೀಗೆಲ್ಲ ಆರೋಪ ಮಾಡಲಾಗುತ್ತಿದೆ' ಎಂದಿದ್ದರು. ಆದರೂ ತಿಗಳ ಸಮಾಜದ ಮುಖಂಡರು ಪ್ರತಿಭಟನೆ ಮುಂದುವರೆಸಿದ್ದರು. ಬುಧವಾರ ಜೋಗುಪಾಳ್ಯದ ಹಲಸೂರು ಪೊಲೀಸ್ ಠಾಣೆ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ನಡೆದಿತ್ತು. ಬಿಜೆಪಿ ಮುಖಂಡ, ಮಾಜಿ ಮಹಾಪೌರ ಎಂ. ಗೌತಮ್ ಕುಮಾರ್ ಮತ್ತು ಮಾಜಿ ಮಹಾನಗರ ಪಾಲಿಕೆ ಸದಸ್ಯ ಲಕ್ಷ್ಮೀನಾರಾಯಣ್ ಹಾಗೂ ನೂರಾರು ಬಿಜೆಪಿ ಪ್ರಮುಖರು ಮುಖಂಡರು, ಕಾರ್ಯಕರ್ತರು, ಪಾದಯಾತ್ರೆ ಮೂಲಕ ತೆರಳಿ ಹಲಸೂರು ಪೊಲೀಸ್ ಠಾಣೆ ಬಳಿ ಮೌನ ಪ್ರತಿಭಟನೆ ನಡೆಸಿದ್ದರು.
ಪ್ರತಿಭಟನೆಯ ವೇಳೆ ಎಂ. ಗೌತಮ್ ಕುಮಾರ್ ಮಾತನಾಡಿ ಶತಮಾನಗಳ ಇತಿಹಾಸ ಹೊಂದಿರುವ ವಿಶ್ವಪ್ರಸಿದ್ದ ಬೆಂಗಳೂರು ಕರಗ ಹಿಂದೂಗಳ ಪಾಲಿಗೆ ಆರಾದ್ಯ ದೈವವಾಗಿದೆ. ನಮ್ಮ ಕರಗ ನೋಡಲು ಎಲ್ಲ ಧರ್ಮ, ವರ್ಗದ ಜನರು ಆಗಮಿಸುತ್ತಾರೆ. ಕರಗದ ದೈವದ ಮೊರೆ ಹೋದ ಕೋಟ್ಯಂತರ ಜನರು ತಮ್ಮ ಜೀವನದಲ್ಲಿ ಸುಖ, ಶಾಂತಿ ನೆಮ್ಮದಿ ಕಂಡು ದೇವಿಯ ಕೃಪೆಗೆ ಪಾತ್ರರಾಗಿದ್ದಾರೆ. ಶಾಸಕ ಹ್ಯಾರಿಸ್ ಅವರು ಕೂಡಲೇ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದರು. ಕರಗದ ದೈವ ಮಹಿಮೆ ಇತಿಹಾಸದ ಕುರಿತು ಅರಿವು ಇಲ್ಲದ ಶಾಸಕ ಎನ್.ಎ. ಹ್ಯಾರೀಸ್ ಅವಹೇಳನಕಾರಿ ಮಾತನಾಡಿರುವುದು ಅಕ್ಷಮ್ಯ ಅಪರಾಧ ಎಂದು ಖಂಡಿಸಿದ್ದರು.
ಇದನ್ನೂ ಓದಿ: ಸಿಟಿ ರವಿ ವಿರುದ್ಧ ಕಾಂಗ್ರೆಸ್ ಚುನಾವಣಾ ಟೂಲ್ ಕಿಟ್ ಬಳಕೆ:ಛಲವಾದಿ ನಾರಾಯಣಸ್ವಾಮಿ ಆರೋಪ