ಬೆಂಗಳೂರು: ಕಾಂಗ್ರೆಸ್ ಹಿರಿಯ ಶಾಸಕ ಬಿ.ಆರ್.ಪಾಟೀಲ್ ಮತ್ತೆ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿದ್ದಾರೆ. ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ ವತಿಯಿಂದ ಕಾಮಗಾರಿ ಕುಂಠಿತವಾಗಿ, ವಿಳಂಬವಾಗಿರುವ ಕುರಿತು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಪತ್ರದ ವಿವರ: ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ಪತ್ರದಲ್ಲಿ, ನಾನು ಈ ಹಿಂದೆ 2013ರಲ್ಲಿ ಶಾಸಕನಾಗಿದ್ದಾಗ ತಮ್ಮ ನೇತೃತ್ವದಲ್ಲಿ ಸರ್ಕಾರಿ ಅಭಿವೃದ್ಧಿ ಕಾಮಗಾರಿಗಳಿಗೆ ಸಾಕಷ್ಟು ಅನುದಾನ ನೀಡಿದ್ದೀರಿ. ನಾನು ಕೆಲವು ಕಾಮಗಾರಿಗಳನ್ನು ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಯಮಿತಕ್ಕೆ ನೀಡಿದ್ದು ನಿಜ. ಚುನಾವಣೆ ಹತ್ತಿರ ಬರುತ್ತಿದ್ದಂತೆ ಬೇರೆ ಸಂಸ್ಥೆಗಳಿಗೆ ಕೊಟ್ಟರೆ ಟೆಂಡರ್ ಪ್ರಕ್ರಿಯೆ ಮುಗಿಸಿ ಕಾಮಗಾರಿಗಳು ಪ್ರಾರಂಭವಾಗಲು ವಿಳಂಬವಾಗುವ ಕಾರಣಕ್ಕೆ ಭೂಸೇನೆಗೆ (ಲ್ಯಾಂಡ್ ಆರ್ಮಿ) ಕಾಮಗಾರಿ ವಹಿಸಲಾಗಿತ್ತು. ಆದರೆ, ಇಲ್ಲಿಯವರೆಗೂ ಕಾಮಗಾರಿಗಳು ಮುಗಿದಿಲ್ಲ. ಅರ್ಧಂಬರ್ಧ ಕೆಲಸ ಮಾಡಿದ್ದಾರೆ. ಮಾಡಿರುವುದು ಕೂಡಾ ಕಳಪೆ ಕಾಮಗಾರಿ.
ಈ ವಿಷಯಕ್ಕೆ ಸಂಬಂಧಿಸಿದಂತೆ ಕಳೆದ ಅಧಿವೇಶನದಲ್ಲಿ ಸಂಬಂಧಪಟ್ಟ ಸಚಿವರಾದ ಪ್ರಿಯಾಂಕ್ ಖರ್ಗೆ ಅವರ ಗಮನ ಸೆಳೆಯಲಾಗಿತ್ತು. ಆದರೆ, ಅವರ ಅನುಪಸ್ಥಿತಿಯಲ್ಲಿ ಸಚಿವರಾದ ಕೃಷ್ಣಭೈರೇಗೌಡರು, ಇಷ್ಟೆಲ್ಲಾ ಗೊತ್ತಿದ್ದರೂ ಕಾಮಗಾರಿಗಳನ್ನು ಯಾಕೆ ಕೊಟ್ಟಿದ್ದೀರಿ ಎಂದು ನನ್ನ ಮೇಲೆ ಅನುಮಾನ ಬರುವಂತೆ ಆರೋಪ ಮಾಡಿದ್ದಾರೆ. ಇದರರ್ಥ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಯಮಿತ ಕಡೆಯಿಂದ ನಾನು ಹಣ ಪಡೆದುಕೊಂಡಿದ್ದೇನೆ ಎಂಬಂತೆ ಸದನದಲ್ಲಿ ಮಾತನಾಡಿದ್ದಾರೆ.
ಇದಕ್ಕೆ ನಾನು ಪ್ರತಿಭಟಿಸಿ, ನೀವು ನನ್ನ ಮೇಲೆ ಗೂಬೆ ಕೂರಿಸುತ್ತಿದ್ದೀರಿ ಎಂದು ವಾದಿಸಿದ್ದೆ. ಅಂದು ನನಗೆ ಸದನದಲ್ಲಿ ಶಾಸಕರಾದ ಶಿವಲಿಂಗೇಗೌಡರು ಸಹ ಧ್ವನಿಗೂಡಿಸಿದರು. ಸಮಯದ ಇತಿಮಿತಿ ಇರುವುದರಿಂದ ಸಭಾಧ್ಯಕ್ಷರು ಬೇರೆ ವಿಷಯಕ್ಕೆ ಹೋದ ಕಾರಣಕ್ಕಾಗಿ ನಾನು ಕೂರಬೇಕಾಯಿತು. ಸದನದಲ್ಲಿ ನಡೆದ ವಿಷಯಗಳು ಎಲ್ಲಾ ಮಾಧ್ಯಮಗಳಲ್ಲಿ ಬಿತ್ತರವಾಗಿರುವ ಕಾರಣ ಈ ಪತ್ರವನ್ನು ಬರೆಯಲೇಬೇಕಾಗಿದೆ. ಅಂದು ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಸಚಿವರಾದ ಪ್ರಿಯಾಂಕ್ ಖರ್ಗೆ ಕಾಮಗಾರಿಗಳ ಬಗ್ಗೆ ಗಮನವಹಿಸಿ ಪ್ರತ್ಯೇಕವಾಗಿ ಪ್ರಗತಿ ಪರಿಶೀಲನಾ ಸಭೆ ಮಾಡುವುದಾಗಿ ಹೇಳಿದ್ದರು. ಆದರೆ, ಕಾರಣಾಂತರಗಳಿಂದ ಸಭೆ ನಡೆದಿಲ್ಲ.
ಆರೋಪ ಸಾಬೀತಾದರೆ ರಾಜೀನಾಮೆ: ಈಗ ಮತ್ತೆ ಡಿಸೆಂಬರ್ 4ರಿಂದ 15ರವರೆಗೆ ಸುವರ್ಣಸೌಧ ಬೆಳಗಾವಿಯಲ್ಲಿ ಅಧಿವೇಶನ ನಡೆಯಲಿದೆ. ಈ ಆರೋಪಗಳನ್ನು ಹೊತ್ತು ಸದನಕ್ಕೆ ಬಂದರೆ ಆರೋಪಗಳನ್ನು ಒಪ್ಪಿಕೊಂಡಂತಾಗುತ್ತದೆ. ಇದು ನೈತಿಕ ದೃಷ್ಟಿಯಿಂದ ಸರಿಯಲ್ಲ. ಆದ ಕಾರಣ ತಾವು ಇದರ ಬಗ್ಗೆ ತನಿಖೆ ನಡೆಸಿ ಸತ್ಯಾಸತ್ಯತೆಯನ್ನು ಹೊರಗೆ ಬರುವಂತೆ ತನಿಖೆ ಮಾಡಲು ಆದೇಶ ನೀಡಿ ನನ್ನನ್ನು ಆರೋಪದಿಂದ ಮುಕ್ತ ಮಾಡಿಕೊಡಬೇಕು. ಹಾಗೂ ನನ್ನ ಮೇಲಿನ ಈ ಆರೋಪ ಸಾಬೀತಾದರೆ ವಿಧಾನಸಭೆ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಕೊಡುವುದಕ್ಕೆ ನಿರ್ಧಾರ ಮಾಡಿದ್ದೇನೆ. ಪಂಚರಾಜ್ಯ ಚುನಾವಣೆ ಇರುವುದಿಂದ ಪಕ್ಷದ ಮೇಲೆ ಪ್ರತಿಕೂಲ ಪರಿಣಾಮ ಬೀರಬಾರದೆಂದು ಈಗ ಈ ಪತ್ರವನ್ನು ಬರೆಯುತ್ತಿದ್ದೇನೆ. ತಾವು ತುರ್ತು ತನಿಖೆ ಆಯೋಗ ರಚಿಸಬೇಕಾಗಿ ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ ಎಂದು ಸಿಎಂ ಸಿದ್ದರಾಮಯ್ಯಗೆ ಬರೆದ ಪತ್ರದಲ್ಲಿ ಬಿ.ಆರ್.ಪಾಟೀಲ್ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: MLA B R Patil : ಆತ್ಮಗೌರವಕ್ಕೆ ಧಕ್ಕೆಯಾದಲ್ಲಿ ರಾಜೀನಾಮೆ ನೀಡುವುದಾಗಿ ಹೇಳಿದ್ದು ನಿಜ: ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲ್
ಸಚಿವ ಕೃಷ್ಣ ಭೈರೇಗೌಡ ಸ್ಪಷ್ಟನೆ: ಬಿ.ಆರ್.ಪಾಟೀಲ್ ಆರೋಪಕ್ಕೆ ಸ್ಪಷ್ಟೀಕರಣ ನೀಡಿರುವ ಸಚಿವ ಕೃಷ್ಣ ಭೈರೇಗೌಡ, ಆ ಪತ್ರ ಸಿಎಂಗೆ ಬರೆದಿರುವುದಾಗಿದೆ. ಈ ವಿಚಾರವಾಗಿ ಮುಖ್ಯಮಂತ್ರಿಗಳು ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ನಾನು ವಿಧಾನಸಭೆಯಲ್ಲಿ ಮಾತನಾಡಿದ ವಿಚಾರ ಸಾರ್ವಜನಿಕವಾಗಿದೆ ಹಾಗೂ ದಾಖಲೆಯಲ್ಲಿದೆ. ಯಾರಾದರೂ ಅದನ್ನು ಪರಾಮರ್ಶಿಸಬಹುದು. ನಾನು ಅದನ್ನು ಸ್ವಾಗತಿಸುತ್ತೇನೆ. ಸದನದಲ್ಲಿ ಅಂತಹ ಹೇಳಿಕೆ ಕೊಟ್ಟಿಲ್ಲ. ಅವರು ನನ್ನ ಮಾತುಗಳನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.