ಬೆಂಗಳೂರು: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪರಾಜಿತ ಅಭ್ಯರ್ಥಿಗಳ ಜೊತೆ ಶುಕ್ರವಾರ ಕಾಂಗ್ರೆಸ್ ಮಹತ್ವದ ಸಭೆ ನಡೆಸಿತು. ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್ ಸೇರಿದಂತೆ ಸಂಪುಟ ಸದಸ್ಯರು ಹಾಗೂ ಶಾಸಕರು ಭಾಗಿಯಾಗಿದ್ದರು.
ಸಭೆಯ ಬಳಿಕ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಪರಾಜಿತ ಅಭ್ಯರ್ಥಿಗಳನ್ನು ಕರೆಸಿ ಅವರಿಗೆ ಆದ ಸಮಸ್ಯೆಯನ್ನ ಕೇಳಿದ್ದೇವೆ. ಮುಂಬರುವ ದಿನಗಳಲ್ಲಿ ಇವರಿಗೆ ಶಕ್ತಿ ತುಂಬುವ ಕೆಲಸವನ್ನು ಜಿಲ್ಲಾ ಉಸ್ತುವಾರಿ ಸಚಿವರು ಯಾವ ರೀತಿ ಮಾಡಬೇಕು ಬಗ್ಗೆ ಚರ್ಚೆಯಾಗಿದೆ. ಸೋತರೂ ಸಹ ನಮಗೆ ನಮ್ಮ ಕಾರ್ಯಕರ್ತರು ಹಾಗೂ ಅಭ್ಯರ್ಥಿಗಳು ಅತ್ಯಂತ ಪ್ರಮುಖ. ಹೀಗಾಗಿ ಎಲ್ಲರನ್ನು ಕರೆಸಿ ಅವರ ದುಃಖ ದುಮ್ಮಾನವನ್ನು ಕೇಳಿದ್ದೇವೆ. ಮುಂಬರುವ ದಿನಗಳಲ್ಲಿ ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಹಾಗೂ ಪಕ್ಷ ಬಲವರ್ಧನೆ ಮಾಡಬೇಕು ಎಂಬ ಗುರಿಯನ್ನು ನೀಡಿದ್ದೇವೆ. ಜಿಲ್ಲಾ ಉಸ್ತುವಾರಿ ಸಚಿವರ ಸಂಪರ್ಕದಲ್ಲಿದ್ದು ಅವರೊಂದಿಗೆ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಮಾಡಬೇಕು ಮತ್ತು ಪಕ್ಷದ ಗ್ಯಾರಂಟಿಯನ್ನು ಪ್ರತಿಯೊಬ್ಬರಿಗೂ ತಲುಪಿಸುವ ಕಾರ್ಯ ಮಾಡಬೇಕು. ಪಕ್ಷ, ಜಾತಿ ಮತ್ತು ಧರ್ಮ ಭೇದವನ್ನು ಮರೆತು ಎಲ್ಲರನ್ನ ಒಂದೇ ರೀತಿ ಪರಿಗಣಿಸಿ ಕಾರ್ಯ ನಿರ್ವಹಿಸುವಂತೆ ಸೂಚನೆ ಕೊಟ್ಟಿದ್ದೇವೆ ಎಂದರು.
ಒಟ್ಟು 224 ವಿಧಾನಸಭಾ ಕ್ಷೇತ್ರಗಳ ಪೈಕಿ 135 ಕ್ಷೇತ್ರಗಳಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಕಾಂಗ್ರೆಸ್ ಪೂರ್ಣ ಬಹುಮತದೊಂದಿಗೆ ಸರ್ಕಾರ ರಚನೆ ಮಾಡಿದೆ. 89 ಕ್ಷೇತ್ರಗಳಲ್ಲಿ ಹಿನ್ನಡೆ ಅನುಭವಿಸಿರುವುದಕ್ಕೆ ಸಕಾರಣ ಅರಿಯುವ ಪ್ರಯತ್ನವನ್ನು ಇಂದಿನ ಸಭೆಯಲ್ಲಿ ಮಾಡಿದೆ. ಒಂದೆಡೆ ಐದು ಗ್ಯಾರಂಟಿ ಪೋಷಣೆಗಳು ಹಾಗೂ ಅಭ್ಯರ್ಥಿಗಳ ವೈಯಕ್ತಿಕ ವರ್ಚಸ್ಸಿನ ಮೇಲೆ ಬಹುತೇಕ ಕ್ಷೇತ್ರಗಳನ್ನು ಗೆದ್ದುಕೊಂಡಿರುವ ಕಾಂಗ್ರೆಸ್ ಪಕ್ಷ ಅದಾಗಿಯೂ ಕೆಲವೆಡೆ ಹಿನ್ನಡೆ ಅನುಭವಿಸಿದೆ.
ಸಚಿವರಾದ ಡಾ ಜಿ ಪರಮೇಶ್ವರ, ಕೆ ಹೆಚ್ ಮುನಿಯಪ್ಪ, ಕೆ ಜೆ ಜಾರ್ಜ್, ಹೆಚ್ ಸಿ ಮಹದೇವಪ್ಪ, ಶಿವರಾಜ್ ತಂಗಡಗಿ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಮ್ ಅಹ್ಮದ್, ಬಿ ಎನ್ ಚಂದ್ರಪ್ಪ, ಸಚಿವರಾದ ಬೋಸರಾಜ್, ಆರ್ ಬಿ ತಿಮ್ಮಾಪುರ, ಮಧು ಬಂಗಾರಪ್ಪ, ಲಕ್ಷ್ಮಿ ಹೆಬ್ಬಾಳ್ಕರ್, ಬೈರತಿ ಸುರೇಶ್ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.
ಡಿಕೆ ಶಿವಕುಮಾರ್ ಸಭೆ: ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ ಕೆ ಶಿವಕುಮಾರ್ ಅವರು ಭಾರತ-ಫ್ರೆಂಚ್ ಕೈಗಾರಿಕೆ ಮತ್ತು ವಾಣಿಜ್ಯ ಮಂಡಳಿ (IFCCI) ಪ್ರತಿನಿಧಿಗಳ ಜೊತೆ ಕುಮಾರಕೃಪಾ ಅತಿಥಿ ಗೃಹದಲ್ಲಿ ಶುಕ್ರವಾರ ಸಮಾಲೋಚನೆ ನಡೆಸಿದರು. ಮಂಡಳಿಯ ಸಾರ್ವಜನಿಕ ವ್ಯವಹಾರಗಳ ಸಲಹೆಗಾರ ಹಾಗೂ ಲೂಮಿಪ್ಲ್ಯಾನ್ ಸಂಸ್ಥೆಯ ಎಂಡಿ, ಸಿಇಓ ಶಾನ್ ವೆಂಕಟ್, ದಸ್ಸಾಲ್ಟ್ ಸಿಸ್ಟಮ್ಸ್ ಎಂಡಿ ದೀಪಕ್, ಸೀನಿಯರ್ ಸೇಲ್ಸ್ ಮ್ಯಾನೇಜರ್ ರಾಜಶೇಖರ್ ಸ್ವಾಮಿ, IFCCI ಭಾರತದ ಉಪಾಧ್ಯಕ್ಷ ಪ್ರಿಯಾಂಕ್, ಜೆ.ಸಿ. ಡೇಕಕ್ಸ್ ಸಂಸ್ಥೆಯ ಎಂ.ಡಿ. ಫ್ರೆಡಿರಿಕ್ ಬ್ರನ್, ಕಾರ್ಯನಿರ್ವಾಹಕ ಅಧ್ಯಕ್ಷ ಪ್ರಮೋದ್ ಭಂದುಲಾ, ಅಷ್ಟ್ರಕ್ಸ್ ಸ್ಥಾಪಕ ಮತ್ತು ಸಿಇಓ ಫ್ರೆಡಿರಿಕ್ ಮೆರಿ ಲಾಕೊಲ್ಲೆ, ಅಸ್ಟೋಮ್ ಸಂಸ್ಥೆಯ ಭಾರತದ ಎಂಡಿ ಭಾರತದ ಎಂಡಿ ಒಲಿವರ್ ಲೂಸಿನ್, ಬಿಡಿಎ ಅಧ್ಯಕ್ಷ ರಾಕೇಶ್ ಸಿಂಗ್, ಬಿಬಿಎಂಪಿ ಕಮಿಷನರ್ ತುಷಾರ್ ಗಿರಿನಾಥ್, ವಿಶೇಷ ಆಯುಕ್ತ ತ್ರಿಲೋಕ್ ಚಂದ್ರ, ಬಿಡಿಎ ಕಾರ್ಯದರ್ಶಿ ಶಾಂತರಾಜು, ಟೌನ್ ಪ್ಲಾನಿಂಗ್ ಜಂಟಿ ನಿರ್ದೇಶಕ ನಾರಾಯಣಗೌಡ ಮತ್ತಿತರರು ಭಾಗವಹಿಸಿದ್ದರು.
ಇದನ್ನೂ ಓದಿ: ಸಿದ್ದು ಲೆಕ್ಕ: ಅತ್ತ ಪಂಚ ಗ್ಯಾರಂಟಿ ವ್ಯಾಪ್ತಿಯ ಇಲಾಖೆಗಳಿಗೆ ಹೆಚ್ಚಿನ ಅನುದಾನ, ಇತ್ತ ಕೆಲ ಇಲಾಖೆಗಳ ಅನುದಾನ ಕಟ್