ಬೆಂಗಳೂರು: ಮಾಜಿ ಸಚಿವರು, ಕಾಂಗ್ರೆಸ್ ನಾಯಕರು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕಾವೇರಿ ನಿವಾಸಕ್ಕೆ ಭೇಟಿ ನೀಡಿ ಚರ್ಚೆ ನಡೆಸಿದ್ದಾರೆ.
ಇಂದು ಮಾಜಿ ಸಚಿವರುಗಳಾದ ಎಂ.ಬಿ.ಪಾಟೀಲ್, ಜಮೀರ್ ಅಹ್ಮದ್, ಚೆಲುವರಾಯಸ್ವಾಮಿ ಹಾಗೂ ಮುಖಂಡರಾದ ಮಾಗಡಿ ಬಾಲಕೃಷ್ಣ, ಬಸವರಾಜ ಹೊರಟ್ಟಿ, ಸಿ.ಎಂ.ಇಬ್ರಾಹಿಂ, ಎಲ್.ಹನುಮಂತಯ್ಯ, ಭೈರತಿ ಸುರೇಶ್ ಸೇರಿದಂತೆ ಹಲವರು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕಾವೇರಿ ನಿವಾಸಕ್ಕೆ ಭೇಟಿ ನೀಡಿ ಚರ್ಚೆ ನಡೆಸಿದರು.
ಸಿದ್ದರಾಮಯ್ಯ ಭೇಟಿ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಮಾಜಿ ಸಚಿವ ಚಲುವರಾಯಸ್ವಾಮಿ, ರಾಜ್ಯಕ್ಕೆ ಕೇಂದ್ರದ ನೆರವು ವಿಳಂಬವಾಗಿದೆ. ರಾಜ್ಯದ ದುರದೃಷ್ಟ ಯಾವಾಗಲೂ ಹೀಗೆಯೇ. ಜನ 25 ಸಂಸದರನ್ನ ಆರಿಸಿ ಕಳಿಸಿದ್ದಾರೆ. ಇವರು ಕೇಂದ್ರದ ಮೇಲೆ ಒತ್ತಡ ಹೇರುವುದು ಬೇಡ. ಕನಿಷ್ಠಪಕ್ಷ ಮನವೊಲಿಸೋಕೂ ಆಗಲ್ವಾ?. ಸಂಸದರು ಬೇರೆಯವರನ್ನ ತೆಗಳೋದು ಬಿಟ್ಟು ಇಲ್ಲಿನ ಸಮಸ್ಯೆಗಳನ್ನ ಮೋದಿಯವರಿಗೆ ಹೇಳಲಿ. ಹೆಚ್ಚಿನ ಪರಿಹಾರವನ್ನ ತರಲಿ ಎಂದರು. ಜೊತೆಗೆ, ಸಂಸದರಾದ ಪ್ರತಾಪ್ ಸಿಂಹ, ತೇಜಸ್ವಿ ಸೂರ್ಯ ಇನ್ನೂ ಚಿಕ್ಕವರು. ಅವರು ಇಲ್ಲಸಲ್ಲದ ಹೇಳಿಕೆ ನೀಡುವುದು ಬೇಡ ಎಂದರು.
ಯೋಗೇಶ್ವರ್ ಭೇಟಿ ಮಾಡಿದ ಬಗ್ಗೆ ಮಾತನಾಡಿದ ಚೆಲುವರಾಯಸ್ವಾಮಿ, ನಾನು ಯೋಗೇಶ್ವರ್ ಭೇಟಿ ಮಾಡಿದ್ದು ನಿಜ. ನಾವಿಬ್ಬರೂ ಉತ್ತಮ ಸ್ನೇಹಿತರು. ಟೀ ಕುಡಿಯೋಕೆ, ತಿಂಡಿ ತಿನ್ನೋಕೆ ಸೇರ್ತಿರ್ತೀವಿ. ಇದರಲ್ಲಿ ಬೇರೆ ಯಾವ ವಿಶೇಷವೂ ಇಲ್ಲ. ನೀವೆಲ್ಲ ಅಂದುಕೊಂಡಂತೆ ನಾನವರನ್ನು ಕಾಂಗ್ರೆಸ್ಗೆ ಕರೆದಿಲ್ಲ. ಅವರೂ ನನ್ನನ್ನ ಬಿಜೆಪಿಗೆ ಕರೆದಿಲ್ಲ. ಅವರು ಬಿಜೆಪಿ ಪಕ್ಷ ಕಟ್ತೇನೆ ಅಂತ ಹೋಗಿದ್ದಾರೆ ಅಷ್ಟೇ. ಸುಮ್ಮನೆ ಏನೇನೋ ಕಲ್ಪಿಸಿಕೊಳ್ಳೋದು ಬೇಡ ಎಂದರು.
ಕೋಡಿಹಳ್ಳಿ ಶ್ರೀ ಭವಿಷ್ಯ:
ಸಿದ್ದರಾಮಯ್ಯ ಮತ್ತೆ ಸಿಎಂ ಎಂಬ ಕೋಡಿಹಳ್ಳಿ ಶ್ರೀ ಭವಿಷ್ಯ ವಿಚಾರ ಮಾತನಾಡಿ, ಹಿಂದೆಯೂ ಅವರಿಗೆ ಸಿಎಂ ಅಗುವ ಅವಕಾಶ ಕೈತಪ್ಪಿತ್ತು. ಮುಂದೆ ಮತ್ತೆ ಅವಕಾಶ ಬರುತ್ತೆ ಅನ್ನೋ ವಿಶ್ವಾಸವಿದೆ. ಜನ ಮತ್ತೆ ಚುನಾವಣೆಯಲ್ಲಿ ಕೈ ಹಿಡಿಯುವ ನಂಬಿಕೆಯಿದೆ. ಈಗ ಯಡಿಯೂರಪ್ಪ ಸಿಎಂ ಆಗಿದ್ದಾರೆ. ಅವರ ಅವಧಿ ಮುಗಿಯಬೇಕು. ಈಗಲೇ ಬರುತ್ತೆ ಅಂತ ಹೇಳೋಕೆ ನಾನೇನು ಭವಿಷ್ಯ ಹೇಳುವವನೇ? ಶ್ರೀಗಳು ಭವಿಷ್ಯ ನುಡಿದಿದ್ದಾರೆ ಅಷ್ಟೆ ಎಂದರು.