ಬೆಂಗಳೂರು: ನಗರದ ಕೆಪಿಸಿಸಿ ಕಚೇರಿಯಲ್ಲಿ ಇಂದು ನಡೆದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ರಾಜ್ಯ ನಾಯಕರ ನಡುವಿನ ಸಭೆ ಯಶಸ್ವಿಯಾಗಿದೆ.
ಜಿಲ್ಲಾ ನಾಯಕರ ಜೊತೆ ಬೆಳಗ್ಗೆಯೇ ನೂರಾರು ಸಂಖ್ಯೆಯಲ್ಲಿ ಬೆಂಗಳೂರಿಗೆ ಆಗಮಿಸಿದ್ದ ಕಾಂಗ್ರೆಸ್ ಕಾರ್ಯಕರ್ತರು ಮೊದಲು ಸಿದ್ದರಾಮಯ್ಯ ಅವರ ನಿವಾಸ ಕಾವೇರಿಗೆ ತೆರಳಿ ಅಲ್ಲಿ ಕೆಲ ಕಾಲ ಚರ್ಚಿಸಿ, ನಂತರ ಕೆಪಿಸಿಸಿ ಕಚೇರಿಗೆ ಆಗಮಿಸಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮತ್ತಿತರ ನಾಯಕರ ಜೊತೆ ಮತ್ತೊಂದು ಸುತ್ತಿನ ಸಭೆ ನಡೆಸಿದರು.
ಜಿಲ್ಲಾ ಜೆಡಿಎಸ್ ನಾಯಕರು ಹಾಗೂ ಸಚಿವ ಹೆಚ್.ಡಿ. ರೇವಣ್ಣ ಜೊತೆ ಚರ್ಚಿಸಿ ತಮ್ಮ ಸಮಸ್ಯೆಗಳನ್ನು ಪರಿಹರಿಸುವ ಭರವಸೆಯನ್ನು ರಾಜ್ಯ ಕಾಂಗ್ರೆಸ್ ನಾಯಕರು ನೀಡಿದ ಹಿನ್ನೆಲೆ ಆಗಮಿಸಿದ್ದ ಹಾಸನ ಜಿಲ್ಲಾ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಸಮಾಧಾನಗೊಂಡು ವಾಪಸ್ ತೆರಳಿದ್ದಾರೆ.
ಸಭೆಯ ನಂತರ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ಹಾಸನದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಮುಖಂಡರ ನಡುವೆ ಭಿನ್ನಮತ ಒಂದು ಹಂತಕ್ಕೆ ಶಮನವಾಗಿದೆ. ಹಾಸನ ಕಾರ್ಯಕರ್ತರು ಹಾಗೂ ಮುಖಂಡರ ಜೊತೆ ಇಂದು ಮಾತುಕತೆ ಮಾಡಿದ್ದೇವೆ. ಎರಡೂ ಪಕ್ಷದ ನಡುವೆ ವಿಶ್ವಾಸ ಹಾಗೂ ನಂಬಿಕೆ ಸೃಷ್ಟಿ ಮಾಡಬೇಕಿದೆ. ಈ ಬಗ್ಗೆ ಇಂದಿನ ಸಭೆಯಲ್ಲಿ ಮಾತುಕತೆ ನಡೆದಿದೆ. ನಮ್ಮ ಕಾರ್ಯಕರ್ತರಿಗೆ ಹಾಸನದಲ್ಲಿ ಕೆಲವೊಂದು ಸಮಸ್ಯೆಗಳಿವೆ. ಈ ಬಗ್ಗೆ ಜೆಡಿಎಸ್ ಮುಖಂಡರ ಜೊತೆ ಚರ್ಚೆ ಮಾಡುತ್ತೇವೆ. ನಾಳೆ ಸಚಿವ ರೇವಣ್ಣ ಜೊತೆಗೆ ಸಿದ್ದರಾಮಯ್ಯ ಚರ್ಚೆ ಮಾಡಲಿದ್ದಾರೆ. ಹಾಸನದಲ್ಲಿ ಕಾರ್ಯಕರ್ತರ ನಡುವಿನ ಸಮಸ್ಯೆ ಮತ್ತೆ ಪುನರಾವರ್ತನೆ ಆಗಬಾರದು. ಮುಂದಿನ ದಿನಗಳಲ್ಲಿ ಜೊತೆಗೂಡಿ ಚುನಾವಣಾ ಪ್ರಚಾರ ಯಾವ ರೀತಿ ಮಾಡಬೇಕು ಅನ್ನೋದನ್ನ ಚರ್ಚೆ ಮಾಡುತ್ತೇವೆ ಎಂದರು.
ಕೈ ಬಾವುಟ ಪ್ರದರ್ಶಿಸಿದ ಬಗ್ಗೆ ಮಾಹಿತಿ ಇಲ್ಲ :
ಮಂಡ್ಯದಲ್ಲಿ ಸುಮಲತಾ ಆಂಬರೀಶ್ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಕಾಂಗ್ರೆಸ್ ಬಾವುಟ ಹಾರಾಟ ವಿಚಾರ ಪ್ರಸ್ತಾಪಿಸಿ, ನಾಮಪತ್ರ ಸಲ್ಲಿಕೆ ವೇಳೆ ಯಾರು ಯಾರು ಹೋಗಿದ್ದಾರೆ ಮಾಹಿತಿ ಇಲ್ಲ. ಸುಮಲತಾ ಅಂಬರೀಶ್ ಸ್ವತಂತ್ರ ಅಭ್ಯರ್ಥಿ. ನಾವು ಮೈತ್ರಿ ಆಧಾರದಲ್ಲಿ ಚುನಾವಣೆ ಎದುರಿಸುತ್ತೇವೆ. ಎರಡೂ ಪಕ್ಷದ ಕಾರ್ಯಕರ್ತರ ನಡುವೆ ಸಂಬಂಧ ತಿಳಿಗೊಳಿಸೋ ಅಗತ್ಯ ಇದೆ. ಇದನ್ನು ಸರಿಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಭರವಸೆ ನೀಡಿದರು.
ದೇಶ ರಾಜ್ಯದತ್ತ ನೋಡುತ್ತಿದೆ :
ಸಭೆ ಬಳಿಕ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮಾತನಾಡಿ, ಹಾಸನ ಜಿಲ್ಲೆಯ ಎಲ್ಲಾ ಕಾಂಗ್ರೆಸ್ ಮುಖಂಡರ ಸಭೆ ಮಾಡಿದ್ದೇವೆ. ಮುಂಜಾನೆ ಸಿದ್ದರಾಮಯ್ಯ ಜೊತೆ ವಿವರವಾಗಿ ಚರ್ಚೆ ಮಾಡಿ ಅಲ್ಲಿನ ಮುಖಂಡರು ತಮ್ಮ ಅನಿಸಿಕೆ ತಿಳಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಮತ್ತೊಮ್ಮೆ, ನಮ್ಮೆಲ್ಲರ ಜೊತೆ ಚರ್ಚೆ ನಡೆಸಿದ್ದಾರೆ. ಇಡೀ ದೇಶ ಇವತ್ತು ಕರ್ನಾಟಕದ ಕಡೆ ನೋಡುತ್ತಿದೆ. ಹೀಗಾಗಿ ಮೈತ್ರಿ ಧರ್ಮ ಪಾಲನೆ ಮಾಡಿ ರಾಹುಲ್ ಗಾಂಧಿ ಕೈ ಬಲಪಡಿಸುವುದು ನಮ್ಮ ಸಂಕಲ್ಪವಾಗಿದೆ. ನಾಳೆಯಿಂದಲೇ ಎಲ್ಲರೂ ಕಾರ್ಯೋನ್ಮುಖರಾಗುವಂತೆ ಸೂಚನೆ ಕೊಡಲಾಗಿದೆ. ಹಾಸನದ ಕಾಂಗ್ರೆಸ್ನ ಯಾವುದೇ ಮುಖಂಡ ಬಿಜೆಪಿ ಸೇರುತ್ತಿಲ್ಲ. ಮೈತ್ರಿ ಅಭ್ಯರ್ಥಿ ಬೆಂಬಲಿಸಿ ಪ್ರಚಂಡ ಬಹುಮತದಿಂದ ಗೆಲ್ಲಿಸುವ ಭರವಸೆ ನೀಡಿದ್ದಾರೆ. ನಾಳೆ ಮತ್ತೊಮ್ಮೆ ಸ್ಥಳೀಯ ಮಟ್ಟದಲ್ಲಿನ ಸಮಸ್ಯೆ ಬಗೆಹರಿಸಲು ಸಭೆ ಕರೆಯಲಾಗಿದೆ. ಸಣ್ಣ ಪುಟ್ಟ ಸಮಸ್ಯೆ ಬಗೆಹರಿಸಿಕೊಂಡು ಒಗ್ಗಟ್ಟಾಗಿ ಬಿಜೆಪಿ ಸೋಲಿಸುತ್ತೇವೆ ಎಂದರು.
ದೇಶದ ಭವಿಷ್ಯದ ದೃಷ್ಟಿಯಿಂದ ಈ ಚುನಾವಣೆ ಮುಖ್ಯ. ಪಕ್ಷದ ವತಿಯಿಂದ ಕಾಂಗ್ರೆಸ್ ಕಾರ್ಯಕರ್ತರಿಗೆ ಸೂಚನೆ ನೀಡಲಾಗಿದೆ. ಯಾವ ಕಾಂಗ್ರೆಸ್ ಕಾರ್ಯಕರ್ತರೂ ಬಿಜೆಪಿ ಸೇರುತ್ತಿಲ್ಲ. ಮೈತ್ರಿ ಅಭ್ಯರ್ಥಿಗೆ ಬೆಂಬಲ ನೀಡುವಂತೆ ಸೂಚನೆ ನೀಡಿದ್ದೇವೆ. ಮೈತ್ರಿ ಪಕ್ಷದ ಅಭ್ಯರ್ಥಿಯನ್ನ ದೊಡ್ಡ ಮಟ್ಟದಲ್ಲಿ ಗೆಲ್ಲಿಸಬೇಕು ಎಂದು ಹೇಳಿದ್ದೇವೆ. ಸಣ್ಣ ಪುಟ್ಟ ಸಮಸ್ಯೆಗಳು ಇರುವುದು ಸಹಜ. ಅದೆನ್ನೆಲ್ಲ ಮರೆತು ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಹೇಳಲಾಗಿದೆ. ನಾಳೆ ಹಾಸನ ಕಾಂಗ್ರೆಸ್ ಮುಖಂಡರ ಜೊತೆ ಸಿಎಂ ಹೆಚ್ ಡಿಕೆ, ಮಾಜಿ ಸಿಎಂ ಸಿದ್ದರಾಮಯ್ಯ, ಸಚಿವ ಹೆಚ್. ಡಿ. ರೇವಣ್ಣ ಸಭೆ ಮಾಡಲಿದ್ದಾರೆ ಎಂದರು.
ಬೀದರ್ ಸ್ಪರ್ಧೆ ಹೈಕಮಾಂಡ್ ನಿರ್ಧಾರ :
ಬೀದರ್ನಿಂದ ಸ್ಪರ್ಧೆಸುವ ವಿಚಾರದ ಬಗ್ಗೆ ಮಾತನಾಡಿದ ಖಂಡ್ರೆ, ನಮ್ಮ ಹೈಕಮಾಂಡ್ ಅಭ್ಯರ್ಥಿ ಘೋಷಣೆ ಮಾಡುತ್ತದೆ. 21ಕ್ಕೆ ಚುನಾವಣಾ ಸಮಿತಿ ಸಭೆಯಲ್ಲಿ ತೀರ್ಮಾನವಾಗುತ್ತೆ. ಅದಕ್ಕೂ ಮೊದಲು ನಾವು ಏನು ಹೇಳುವುದಕ್ಕೆ ಆಗಲ್ಲ ಎಂದರು.