ಬೆಂಗಳೂರು: ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಹೆಸರನ್ನು ಕಾಂಗ್ರೆಸ್ ಹೈಕಮಾಂಡ್ ಅಂತಿಮಗೊಳಿಸಿ ಈಗಾಗಲೇ ಅಧಿಕೃತವಾಗಿ ಘೋಷಿಸಿದೆ. ಇನ್ನೊಂದೆಡೆ, ಸಚಿವ ಸಂಪುಟ ವಿಸ್ತರಣೆಯ ಕಸರತ್ತು ಪ್ರಾರಂಭವಾಗಿದೆ. ಈ ಬೆಳವಣಿಗೆಯ ನಡುವೆ ಡಿಸಿಎಂ ಸ್ಥಾನದ ವಿಚಾರವಾಗಿ ಕಾಂಗ್ರೆಸ್ ಶಾಸಕ ಎಂ.ಬಿ.ಪಾಟೀಲ್,ಟಿ.ಬಿ.ಜಯಚಂದ್ರ ಮತ್ತು ಜಿ.ಪರಮೇಶ್ವರ್ ಮಾತನಾಡಿದ್ದಾರೆ.
ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ಲಿಂಗಾಯತ ಮುಖಂಡ, ಶಾಸಕ ಎಂ.ಬಿ.ಪಾಟೀಲ್, "ಲಿಂಗಾಯತ ಸಮುದಾಯದವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕೆಂಬ ಕೂಗು ಕೇಳಿಬಂದಿದೆ. ಈ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಲಿಂಗಾಯತರನ್ನು ತಿರಸ್ಕರಿಸಿದೆ. ಹಾಗಾಗಿ, ಸಹಜವಾಗಿಯೇ ನಾವು ಕಾಂಗ್ರೆಸ್‌ನತ್ತ ಬಂದಾಗ ನಿರೀಕ್ಷೆಗಳು ಹುಟ್ಟಿಕೊಂಡಿವೆ. ಉಪ ಮುಖ್ಯಮಂತ್ರಿ ಸ್ಥಾನವನ್ನು ಹಂಚಿಕೆ ಮಾಡಿ ಲಿಂಗಾಯತರಿಗೆ ನೀಡಬೇಕು ಎಂಬ ಬೇಡಿಕೆ ಇದೆ. ನಮ್ಮ ಪಕ್ಷದ ಹೈಕಮಾಂಡ್ ಈ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ ಎಂಬ ವಿಶ್ವಾಸ ನನಗಿದೆ" ಎಂದರು.
ಇದನ್ನೂ ಓದಿ : ಸಚಿವ ಸಂಪುಟ ರಚನೆ: ಆಕಾಂಕ್ಷಿಗಳ ಪಟ್ಟಿಯೊಂದಿಗೆ ಸಿದ್ದರಾಮಯ್ಯ, ಡಿಕೆಶಿ ಇಂದು ದೆಹಲಿಗೆ
ಜಿ.ಪರಮೇಶ್ವರ್ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕೆಂಬ ದಲಿತ ಸಮುದಾಯದ ಬೇಡಿಕೆಯ ಕುರಿತು ಪ್ರತಿಕ್ರಿಯಿಸಿ, "ಲಿಂಗಾಯತರು, ದಲಿತರು, ಒಕ್ಕಲಿಗರು, ಎಸ್‌ಟಿಗಳು, ಮುಸ್ಲಿಮರು ಯಾರಿಗೆ ಮತ ಹಾಕಿದರೂ ಅವರಿಗೆಲ್ಲ ಅವರ ಪಾಲನ್ನು ನೀಡಲಾಗುತ್ತದೆ. ನಮ್ಮ ಪಕ್ಷವು ಎಲ್ಲ ಸಮುದಾಯಗಳಿಗೆ ಅನ್ಯಾಯವಾಗದಂತೆ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ನನಗೆ ವಿಶ್ವಾಸವಿದೆ. ಎಲ್ಲ ಸಮುದಾಯಗಳಿಗೆ ಸರಿಯಾದ ಗೌರವ ನೀಡುವ ಮೂಲಕ ಅಧಿಕಾರ ಹಂಚಿಕೆ ಮಾಡಲಾಗುತ್ತದೆ" ಎಂದು ಹೇಳಿದರು.
ಕಾಂಗ್ರೆಸ್ ಶಾಸಕ/ ಮಾಜಿ ರಾಜ್ಯ ಸಚಿವ ಟಿ.ಬಿ.ಜಯಚಂದ್ರ ಪ್ರತಿಕ್ರಿಯಿಸಿ, "ಉಪ ಮುಖ್ಯಮಂತ್ರಿ ಸ್ಥಾನಕೈ ತಪ್ಪಿದ್ದಕ್ಕೆ ಎಂ.ಬಿ.ಪಾಟೀಲ್ ಮತ್ತು ಜಿ.ಪರಮೇಶ್ವರ್ ಅಸಮಾಧಾನಗೊಂಡಿದ್ದಾರೆ. ಡಿ.ಕೆ.ಶಿವಕುಮಾರ್ ಅವರನ್ನು ಮಾತ್ರ ಉಪಮುಖ್ಯಮಂತ್ರಿ ಮಾಡುವುದು ಹೈಕಮಾಂಡ್ ನಿರ್ಧಾರ. ಹಾಗಾಗಿ, ಈ ವಿಷಯದ ಬಗ್ಗೆ ಯಾವುದೇ ಸಮಸ್ಯೆ ಪುಟಿದೇಳುವ ಸಾಧ್ಯತೆ ಇಲ್ಲ" ಎಂದು ತಿಳಿಸಿದರು.
ಇದನ್ನೂ ಓದಿ : ಸಿದ್ದರಾಮಯ್ಯ ನಿವಾಸದ ಮುಂದೆ ಸಂಗೀತ ವಾದ್ಯ; ಬೆಂಬಲಿಗರಿಗೆ ನಮಸ್ಕರಿಸಿದ ಡಿಕೆಶಿ- ವಿಡಿಯೋ