ಬೆಂಗಳೂರು: ರಾಜ್ಯ ಕಾಂಗ್ರೆಸ್ ನಾಯಕರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕೋವಿಡ್ ನಿಯಂತ್ರಣ ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಂಪೂರ್ಣ ವಿಫಲವಾಗಿದೆ. ದೇಶದಲ್ಲಿ ಹೆಚ್ಚುತ್ತಿರುವ ಸಾವು ನೋವಿಗೆ ಸರ್ಕಾರಗಳೇ ಕಾರಣ ಎಂದು ಆರೋಪಿಸಿದ್ದಾರೆ.
ಮಾಜಿ ಸಚಿವ ಡಾ ಎಚ್ ಸಿ ಮಹದೇವಪ್ಪ ಟ್ವೀಟ್ ಮಾಡಿದ್ದು, ಪ್ರಸ್ತುತ ಕೇಂದ್ರ ಮತ್ತು ರಾಜ್ಯ ಸರ್ಕಾರದಲ್ಲಿರುವ ಆರೋಗ್ಯ ಸಚಿವರಿಬ್ಬರೂ ಸಹ ಮೂಲತಃ ವೈದ್ಯರಾಗಿದ್ದರೂ ಕೂಡಾ ಅವರಿಗೆ ಕೊರೊನಾ ಸೋಂಕು ನಿಯಂತ್ರಣ ಮಾಡುವ ವಿಷಯಕ್ಕೆ ಸಂಬಂಧಿಸಿದಂತೆ ಸಮರ್ಪಕ ದೂರದೃಷ್ಟಿಯ ಕೊರತೆಯಿದೆ. ಇನ್ನು ಕೊರೊನಾ ಸೋಂಕು ತಡೆ ಕ್ರಮಗಳಿಗಿಂತಲೂ ಚಪ್ಪಾಳೆ ಬಡಿ, ತಟ್ಟೆಹೊಡಿ, ಜಾಗಟೆ ಬಾರಿಸು ಎಂಬಂತಹ ಅರ್ಥವಿಲ್ಲದ ಪ್ರಚಾರದಲ್ಲೇ ಮುಳುಗಿರುವ ಸರ್ಕಾರಗಳಿಂದ ಈ ದಿನ ಕೊರೊನಾ ನಿಯಂತ್ರಣ ಎಂಬುದು ಕನಸಿನ ವಿದ್ಯಮಾನವೇ ಆಗಿದೆ ಎಂದಿದ್ದಾರೆ.
ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟ್ವೀಟ್ ಮಾಡಿದ್ದು, ರೆಮ್ಡಿಸಿವರ್ ಔಷಧಿ ಪೂರೈಸಲು ಯೋಗ್ಯತೆ ಇಲ್ಲದ ಕೇಂದ್ರ ಸರ್ಕಾರ, ಈಗ ಆಕ್ಸಿಜನ್ ಸಪೋರ್ಟ್ ಇದ್ದವರಿಗೆ ಮಾತ್ರ ರೆಮ್‌ಡೆಸಿವರ್ ಪೂರೈಕೆ ಮಾಡಲು ನಿಯಮ ರೂಪಿಸಿ ಜನರ ಸಮಾಧಿ ತೋಡುತ್ತಿದೆ. ದೆಹಲಿ ಹೈಕೋರ್ಟ್ ಅಭಿಪ್ರಾಯದಂತೆ ಜನರ ಜೀವ ತೆಗೆಯಲೆಂತಲೆ ಇಂತಹ ಜೀವ ವಿರೋಧಿ ನಿಯಮ ತರುತ್ತಿದೆ ಕೇಂದ್ರ ಎಂದು ಹೇಳಿದ್ದಾರೆ.