ಬೆಂಗಳೂರು: ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ನಿಯೋಗ ಇಂದು ರಾಜಭವನಕ್ಕೆ ತೆರಳಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ವಿರುದ್ಧ ರಾಜ್ಯಪಾಲರಿಗೆ ದೂರು ಸಲ್ಲಿಕೆ ಮಾಡಿದೆ.
ಸದನದ ಕಲಾಪದ ವೇಳೆ ಸ್ಪೀಕರ್ ವಿಪಕ್ಷಗಳಿಗ ಚರ್ಚೆಗೆ ಅವಕಾಶ ನೀಡುತ್ತಿಲ್ಲ, ವಿಧಾನಸಭೆಯಲ್ಲಿ ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಸಲು ಅವಕಾಶ ನೀಡಬೇಕು. ಸಂವಿಧಾನದ 175ನೇ ಪರಿಚ್ಛೇದದಡಿ ಸ್ಪೀಕರ್ಗೆ ನಿರ್ದೇಶನ ನೀಡಲು ರಾಜ್ಯಪಾಲರಿಗೆ ಅಧಿಕಾರವಿದೆ. ರಾಜ್ಯಪಾಲರ ಮಧ್ಯ ಪ್ರವೇಶಿಸಿ ಸ್ಪೀಕರ್ಗೆ ನಿರ್ದೇಶನ ನೀಡಬೇಕು ಎಂದು ನಿಯೋಗ ಮನವಿ ಮಾಡಿದೆ.
ಯತ್ನಾಳ್ ವಿರುದ್ಧ ವಿಧಾನಮಂಡಲ ಅಧಿವೇಶನದಲ್ಲಿ ಚರ್ಚೆ ನಡೆಸಲು ಅವಕಾಶ ನೀಡಬೇಕು ಎಂದು ರಾಜ್ಯಪಾಲರಿಗೆ ಕಾಂಗ್ರೆಸ್ ನಿಯೋಗ ದೂರು ಸಲ್ಲಿಕೆ ಮಾಡಿದೆ. ನಿಯೋಗದಲ್ಲಿ ಸಿದ್ದರಾಮಯ್ಯ, ಯು.ಟಿ.ಖಾದರ್, ಆರ್ ವಿ ದೇಶಪಾಂಡೆ, ಎಚ್.ಕೆ. ಪಾಟೀಲ್, ಎಸ್. ಆರ್. ಪಾಟೀಲ್ ಭಾಗಿಯಾಗಿದ್ದಾರೆ.