ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರ ಆಯೋಜಿಸಿರುವ 'ದಿ ಕಾಶ್ಮೀರ್ ಫೈಲ್ಸ್' ಚಿತ್ರ ವೀಕ್ಷಣೆಗೆ ತೆರಳದೆ ವಿಧಾನಸೌಧದಲ್ಲಿಯೇ ಉಳಿದ ಕಾಂಗ್ರೆಸ್ ನಾಯಕರು, ಮಹತ್ವದ ಸಭೆ ನಡೆಸಿದ್ದಾರೆ.
ರಾಜ್ಯ ಸರ್ಕಾರವು ವಿಧಾನಸಭೆಯಲ್ಲಿ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ವಿಧಾನಪರಿಷತ್ ನಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಮೂಲಕ ಚಿತ್ರ ವೀಕ್ಷಣೆಗೆ ಆಗಮಿಸುವ ಪ್ರಕಟಣೆ ಮೂಲಕ ಮಾಹಿತಿ ನೀಡಿತ್ತು. ವಿಧಾನ ಪರಿಷತ್ನಲ್ಲಿ ಸಭಾಪತಿಗಳು ಪ್ರಕಟಣೆ ಓದುತ್ತಿದ್ದಂತೆ ಪ್ರತಿಪಕ್ಷ ಕಾಂಗ್ರೆಸ್ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಗದ್ದಲದ ವಾತಾವರಣ ಸೃಷ್ಟಿಸಿದ್ದರು.
ಈ ಕಾರಣಕ್ಕಾಗಿಯೇ ವಿಧಾನಪರಿಷತ್ ಕಲಾಪವನ್ನು ಐದು ನಿಮಿಷ ಮುಂದೂಡಲಾಗಿತ್ತು. ನಿನ್ನೆ ವಿಧಾನಸಭೆಯಲ್ಲಿ ಹಾಗೂ ಇಂದು ವಿಧಾನ ಪರಿಷತ್ನಲ್ಲಿ ಚಿತ್ರ ವೀಕ್ಷಣೆಗೆ ಸದಸ್ಯರನ್ನು ಆಹ್ವಾನಿಸುವ ಕಾರ್ಯವನ್ನು ಸರ್ಕಾರ ಮಾಡಿತ್ತು.
ಆದರೆ ಚಿತ್ರ ವೀಕ್ಷಣೆಯನ್ನು ನಿರಾಕರಿಸಿದ್ದ ಕಾಂಗ್ರೆಸ್ ನಾಯಕರು ದಿ ಕಾಶ್ಮೀರ್ ಫೈಲ್ಸ್ ಚಿತ್ರದ ವಿಶೇಷ ಪ್ರದರ್ಶನ ವೀಕ್ಷಣೆಗೆ ತೆರಳುವ ದೂರವೇ ಉಳಿದಿದ್ದರು. ಕಾಶ್ಮೀರಿ ಪಂಡಿತರ ಮೇಲೆ ನಡೆದ ದೌರ್ಜನ್ಯ ಆಧಾರಿತ ಚಿತ್ರ ಇದಾಗಿದ್ದು, ಈ ಚಿತ್ರದಲ್ಲಿ ಕೆಲ ಆಕ್ಷೇಪಾರ್ಹ ಸನ್ನಿವೇಶಗಳಿವೆ, ಜೊತೆಗೆ ಸತ್ಯಕ್ಕೆ ಮೀರಿದ ಹೆಚ್ಚುವರಿ ಮಸಾಲೆಗಳ ಚಿತ್ರದಲ್ಲಿ ತುಂಬಲಾಗಿದೆ.
ಅನಗತ್ಯವಾಗಿ ಅಲ್ಲಿನ ಪರಿಸ್ಥಿತಿಯನ್ನು ಜನರಿಗೆ ಬೇರೆಯದೇ ರೀತಿ ಪರಿಚಯಿಸುವ ಪ್ರಯತ್ನ ಚಿತ್ರದಲ್ಲಿ ನಡೆದಿದೆ. ವಸ್ತುಸ್ಥಿತಿಯನ್ನು ಮರೆಮಾಚಲಾಗಿದೆ. ಕೇಂದ್ರ ಬಿಜೆಪಿ ಸರ್ಕಾರ ತಮಗೆ ಅನುಕೂಲವಾಗುವ ರೀತಿ ಚಿತ್ರವನ್ನು ನಿರ್ಮಿಸಿ ಬಿಡುಗಡೆ ಮಾಡಿಸುವ ಕಾರ್ಯವನ್ನು ಚಿತ್ರ ನಿರ್ಮಾಪಕರಿಂದ ಮಾಡಿದೆ ಎಂದು ಆರೋಪಿಸಿದ್ದಾರೆ. ಈ ದಿನದ ಚಿತ್ರ ವೀಕ್ಷಣೆಯನ್ನು ಧಿಕ್ಕರಿಸಿರುವ ಕಾಂಗ್ರೆಸ್ ನಾಯಕರು ವಿಧಾನಸೌಧದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕಚೇರಿಯಲ್ಲಿ ಮಹತ್ವದ ಸಭೆ ನಡೆಸಿದ್ದಾರೆ.
ನಾಳೆ ಬಜೆಟ್ ಮೇಲಿನ ಚರ್ಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉತ್ತರ ನೀಡಲಿದ್ದು, ಮುಂದಿನ 15 ದಿನ ರಾಜ್ಯದ ಬೇರೆಬೇರೆ ವಿಚಾರಗಳ ಮೇಲೆ ಚರ್ಚೆ ನಡೆಯಲಿದೆ. ಈ ಸಂದರ್ಭ ಕಾಂಗ್ರೆಸ್ ಪಕ್ಷದಿಂದ ಪ್ರಸ್ತಾಪಿಸ ಬೇಕಾಗಿರುವ ವಿಚಾರಗಳ ಕುರಿತು ಇಂದು ನಾಯಕರು ಒಟ್ಟಾಗಿ ಕುಳಿತು ಚರ್ಚಿಸಿದ್ದಾರೆ.
ಯಾವ ವಿಚಾರಗಳ ಮೇಲೆ ಚರ್ಚೆ ನಡೆಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಬೇಕೆಂಬ ಎಂಬ ಕುರಿತು ಸಹ ಸಮಾಲೋಚಿಸಿದ್ದಾರೆ. ಒಂದೆಡೆ ಬಿಜೆಪಿ ನಾಯಕರು ಸಿನಿಮಾ ವೀಕ್ಷಣೆಗೆ ತೆರಳಿದರೆ ಇನ್ನೊಂದೆಡೆ ಕಾಂಗ್ರೆಸ್ ನಾಯಕರು ವಿಧಾನಸೌಧದಲ್ಲಿ ಕುಳಿತು ಮುಂದಿನ ತಂತ್ರಗಾರಿಕೆಯ ಸಂಬಂಧ ಕಾರ್ಯಯೋಜನೆ ರೂಪಿಸಿಕೊಂಡಿದ್ದಾರೆ.