ಬೆಂಗಳೂರು : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪ್ರತಿಪಕ್ಷ ಸ್ಥಾನ ತಪ್ಪಿಸಲು ಭಾರಿ ಕಸರತ್ತು ನಡೆದಿದೆ. ಕಾಂಗ್ರೆಸ್ ಪಕ್ಷದ ಮೂಲ ನಿವಾಸಿಗಳು ತಮ್ಮಲ್ಲಿನ ಭಿನ್ನಾಭಿಪ್ರಾಯ ಮರೆತು ಒಂದಾಗಿ ನಿಷ್ಠಾವಂತ ಹಿರಿಯ ಕಾಂಗ್ರೆಸ್ ಮುಖಂಡರಲ್ಲೊಬ್ಬರಿಗೆ ಪ್ರತಿಪಕ್ಷ ನಾಯಕ ಸ್ಥಾನ ಕೊಡಿಸಲು ಹೈಕಮಾಂಡ್ ಬಳಿ ಲಾಬಿ ನಡೆಸುತ್ತಿದ್ದಾರೆ.
ಹಿರಿಯ ಕಾಂಗ್ರೆಸ್ ನಾಯಕರು ಪ್ರತಿಪಕ್ಷ ಸ್ಥಾನ ಹಾಗೂ ಶಾಸಕಾಂಗ ಪಕ್ಷದ ನಾಯಕ ಎರಡೂ ಒಬ್ಬರಿಗೆ ನೀಡುವುದು ಬೇಡ ಎಂದು ತಮ್ಮ ವಾದ ಮಂಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಜೆಡಿಎಸ್ - ಕಾಂಗ್ರೆಸ್ ಮೈತ್ರಿ ಸರ್ಕಾರ ಪತನಕ್ಕೆ ಮಾಜಿ ಸಿಎಂ ಬೆಂಬಲಿಗರೇ ಕಾರಣ ಎಂದು ಹೈಕಮಾಂಡ್ ಬಳಿ ಈಗಾಗಲೇ ದೂರು ನೀಡಿರುವ ಹಿರಿಯ ಕಾಂಗ್ರೆಸ್ ಮುಖಂಡರು ವಲಸಿಗ ನಾಯಕನಿಗೆ ಪಕ್ಷದ ಚುಕ್ಕಾಣಿ ನೀಡಲೇಬಾರದೆಂದು ಹೈಕಮಾಂಡ್ ಬಳಿ ಹಠ ಹಿಡಿದಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ವಿಧಾನಸಭೆಯಲ್ಲಿ ಆಡಳಿತಾರೂಢ ಬಿಜೆಪಿ ನಂತರ ಅತಿದೊಡ್ಡ ಪಕ್ಷವಾಗಿರುವ ಕಾಂಗ್ರೆಸ್ ಪಕ್ಷಕ್ಕೆ ವಿರೋಧ ಪಕ್ಷದ ನಾಯಕನ ಸ್ಥಾನ ದೊರೆಯಲಿದೆ. ಪ್ರತಿಷ್ಠಿತ ಈ ಹುದ್ದೆ ಮೇಲೆ ಸಿದ್ದರಾಮಯ್ಯ ಕಣ್ಣಿದ್ದಾರೆ. ಅದಕ್ಕಾಗಿ ಹೈಕಮಾಂಡ್ ಮನವೊಲಿಸುವ ಯತ್ನವನ್ನೂ ಮಾಡುತ್ತಿದ್ದಾರೆ. ಈಗಾಗಲೇ ಅಹ್ಮದ್ ಪಟೇಲ್, ಎ.ಕೆ ಆಂಟನಿ ಸೇರಿದಂತೆ ಪ್ರಮುಖ ಮುಖಂಡರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಸೋನಿಯಾಗಾಂಧಿ ಜೊತೆ ಮಾತನಾಡುವುದು ಬಾಕಿ ಉಳಿದಿದ್ದು, ಮೊನ್ನೆ ದೆಹಲಿಗೆ ತೆರಳಿದ್ದಾಗ ಭೇಟಿ ಸಾದ್ಯವಾಗದೇ ವಾಪಸಾಗಿದ್ದರು. ಇದು ಹಲವು ಅನುಮಾನಗಳಿಗೂ ಕಾರಣವಾಗಿತ್ತು. ಈ ಬಗ್ಗೆ ಪಕ್ಷದ ಆಂತರಿಕ ವಲಯ ಹಾಗೂ ಹೊರಗೂ ಭಾರಿ ಚರ್ಚೆಗೆ ಅವಕಾಶ ಮಾಡಿಕೊಟ್ಟಿತ್ತು.
ಸಿದ್ದರಾಮಯ್ಯಗೆ ಬದಲು ಪ್ರತಿಪಕ್ಷ ಸ್ಥಾನವನ್ನು ತಮಗೆ ನೀಡುವಂತೆ ಕಾಂಗ್ರೆಸ್ನ ಕೆಲ ಹಿರಿಯ ಮುಖಂಡರು ತಮ್ಮದೇ ಆದ ನೆಟ್ವರ್ಕ್ ಮೂಲಕ ಪ್ರಯತ್ನ ನಡೆಸುತ್ತಿದ್ದಾರೆ ಎಂದೂ ಹೇಳಲಾಗುತ್ತಿದೆ. ಇದರಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೆಸರು ಸಹ ಇದೆ ಎನ್ನಲಾಗಿದೆ.
ಮಾಜಿ ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಅವರು ಮೊನ್ನೆ ದೆಹಲಿಗೆ ತೆರಳಿ ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಭೇಟಿ ಮಾಡಿ ಸಿದ್ದರಾಮಯ್ಯ ವಿರುದ್ಧ ದೂರು ನೀಡಿ ಬಂದಿದ್ದಾರೆ ಎಂದು ಹೇಳಲಾಗಿದೆ.
ಸಿದ್ದರಾಮಯ್ಯ ಈಗಾಗಲೇ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿದ್ದು, ಅವರಿಗೆ ಪ್ರತಿಪಕ್ಷ ಸ್ಥಾನ ನೀಡುವ ಬದಲು ತಮಗೆ ನೀಡಿದರೆ ದಲಿತರಿಗೆ ಪ್ರಾತಿನಿಧ್ಯ ನೀಡಿದಂತಾಗುತ್ತದೆ ಎಂದು ಪರಮೇಶ್ವರ್ ಅವರು ಬಲವಾದ ವಾದ ಮುಂದಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
ಪ್ರತಿಪಕ್ಷ ನಾಯಕನ ನೇಮಕ ವಿಚಾರವು ಕಾಂಗ್ರೆಸ್ ಪಕ್ಷದಲ್ಲಿ ಈಗ ಎರಡು ಗುಂಪುಗಳನ್ನು ಸೃಷ್ಟಿಸಿದೆ. ಸಿದ್ದರಾಮಯ್ಯ ಪರ ಒಂದು ಗುಂಪಿದ್ದರೆ, ಅವರ ವಿರುದ್ಧ ಹಿರಿಯ ನಾಯಕರ ಮತ್ತೊಂದು ಗುಂಪು ರಚನೆಯಾಗಿದೆ. ಸಿದ್ದರಾಮಯ್ಯ ಪ್ರತಿ ಪಕ್ಷ ನಾಯಕರನ್ನಾಗಿ ನೇಮಿಸಿದರೆ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅವರ ಕೈಗೆ ನೀಡಿದಂತಾಗುತ್ತದೆ ಎಂದು ಮೂಲ ಕಾಂಗ್ರೆಸ್ ನಾಯಕರು ಹೈಕಮಾಂಡ್ ಬಳಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂಬ ಮಾಹಿತಿಯೂ ಹಳೆಯ ಕಾಂಗ್ರೆಸ್ ನಾಯಕರ ಮೂಲಗಳಿಂದ ಹೊರಬಿದ್ದಿದೆ.